ನಿಮ್ಮಲ್ಲಿ ಈ ಅರ್ಹತೆ ಇದ್ದರೆ ಸಾಕು, ದಂತದ ಗೊಂಬೆ ಜ್ಯೋತಿ ರೈ ಜೊತೆ ನೀವು ಕೆಲಸ ಮಾಡಬಹುದು...!
ಹಲವರಿಗೆ ಚಿತ್ರರಂಗಕ್ಕೆ ಬರಬೇಕೆಂಬ ಹುಚ್ಚು ಇರುತ್ತೆ. ಇನ್ನೂ ಕೆಲವರಿಗೆ ತಮ್ಮ ನೆಚ್ಚಿನ ತಾರೆಯರ ಬಳಿ ಕೆಲಸ ಮಾಡಬೇಕು ಅವರಿಂದ ಕೆಲಸ ಕಲಿಯಬೇಕೆಂಬ ಆಸೆ ಇರುತ್ತೆ. ಈ ಆಸೆಯನ್ನು ಈಡೇರಿಸಿಕೊಳ್ಳಲು ಕಂಡ ಕನಸು ನನಸು ಮಾಡಿಕೊಳ್ಳಲು ಹಿಂದೆಯೆಲ್ಲ ವರ್ಷಾನುವರ್ಷ ಸೈಕಲ್ ಹೊಡೆದಿದ್ದಾರೆ.
ಕೆಲವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ಮನೆ ಸೇರಿದ್ದಾರೆ. ಇನ್ನು ಕೆಲವರು ಸತತ ಪ್ರಯತ್ನಗಳ ಮೂಲಕ ಚಿತ್ರರಂಗದಲ್ಲಿ ನಿರ್ದೇಶಕರಾಗಿ-ತಂತ್ರಜ್ಞರಾಗಿ-ಕಲಾವಿದರಾಗಿ ನೆಲೆ ಕಂಡುಕೊಂಡಿದ್ದಾರೆ. ಇನ್ನು ಕೆಲವರು ಸೆಲೆಬ್ರಿಟಿಗಳ ಪರ್ಸನಲ್ ಮೇಕಪ್ ಆರ್ಟಿಸ್ಟ್ ಆಗಿ ಅವರ ಡ್ರೈವರ್ ಆಗಿ ಅವರ ಬಾಡಿಗಾರ್ಡ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯ ಜ್ಯೋತಿ ರೈ ಇಂತಹದ್ದೇ ಒಂದು ಆಫರ್‌ನ ನೀಡಿದ್ದಾರೆ. ನನ್ನಲ್ಲಿ ಕೆಲಸ ಖಾಲಿ ಇದೆ ಆಸಕ್ತರು ಪ್ರಯತ್ನ ಮಾಡಬಹುದು ಎಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಹೌದು, 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದು, ಸದ್ಯ ಆಂಧ್ರದಲ್ಲಿ ಪುರಸೊತ್ತಿಲ್ಲದ ಬದುಕಿನಲ್ಲಿ ಕಳೆದು ಹೋಗಿರುವ ಜ್ಯೋತಿ ರೈ ಕೆಲಸದ ಕನಸನ್ನು ಕಾಣುತ್ತಿರುವವರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ನನ್ನ ಜೊತೆ ಕೆಲಸ ಮಾಡಲು ಆಸಕ್ತಿ ಇದ್ದರೆ ಕೂಡಲೇ ಸಂಪರ್ಕ ಮಾಡಿಯೆಂದು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಜ್ಯೋತಿ ರೈ ನಾನು ವೃತ್ತಿಪರ ಮೇಕಪ್ ಆರ್ಟಿಸ್ಟ್ ಮತ್ತು ಹೇರ್ ಸ್ಟೈಲಿಸ್ಟ್ ಹುಡುಕಾಟದಲ್ಲಿದ್ದೇನೆ, ನನ್ನ ಮುಂಬರುವ ಕೆಲಸದಲ್ಲಿ ಭಾಗವಹಿಸಬೇಕಿದೆ. ಡಿಸೆಂಬರ್ 09ರಿಂದ ಡಿಸೆಂಬರ್ 20ರವರೆಗೆ ಹೈದ್ರಾಬಾದ್‌ನಲ್ಲಿ ಕೆಲಸ ಇರಲಿದ್ದು ಚಿತ್ರೀಕರಣಕ್ಕೆ ಅನುಗುಣವಾಗಿ ಕೆಲಸದ ಸಮಯ ನಿರ್ಧಾರವಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೇ ಜ್ಯೋತಿ ರೈ ಸದ್ಯ ಕಿಲ್ಲರ್ ಎಂಬ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಜ್ಯೋತಿ ಅವರ ಪತಿ ಸುಕು ಪೂರ್ವಜ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದ್ದು ಅನೇಕರ ಗಮನ ಸೆಳೆದಿದೆ. ಜ್ಯೋತಿ ರೈ ಸದ್ಯ ಕೆಲಸಕ್ಕೆ ಆಹ್ವಾನವನ್ನು ನೀಡಿರುವುದು ಇದೇ ಚಿತ್ರಕ್ಕೆ. ಹೇರ್ ಸ್ಟೈಲ್ ಮತ್ತು ಮೇಕಪ್‌ನಲ್ಲಿ ನೀವು ಪರಿಣಿತಿಯನ್ನು ಹೊಂದಿದ್ದರೆ ಅರ್ಜಿಯನ್ನು ಜ್ಯೋತಿ ರೈ ಅವರಿಗೆ ಸಲ್ಲಿಸಬಹುದು.
ಇನ್ನುಳಿದಂತೆ ವ್ಯೆಯಕ್ತಿಕ ವಿಚಾರಕ್ಕೆ ಬರುವುದಾದರೆ 20ರ ಪ್ರಾಯದಲ್ಲಿಯೇ ಪದ್ಮನಾಭ್ ರೈ ಅವರ ಜೊತೆ ಜ್ಯೋತಿ ರೈ ಮದುವೆಯಾಗಿದ್ದರು. ಇವರ ಪ್ರೀತಿಯ ಸಂಕೇತ ಎನ್ನುವಂತೆ ಇಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಅದ್ಯಾರ ಕಣ್ಣು ಬಿತ್ತೋ..? ಈ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಹೀಗೆ ಪತಿಯಿಂದ ದೂರವಾದ ಜ್ಯೋತಿ ರೈ ಆ ನಂತರ ಕಂಡು ಬಂದಿದ್ದು ಇದೇ 'ಎ ಮಾಸ್ಟರ್ ಪೀಸ್' ಚಿತ್ರದ ನಿರ್ದೇಶಕ ಸುಕು ಪೂರ್ವಜ್ ಅವರ ಜೊತೆ. ಈ ಚಿತ್ರದ ಸಮಯದಲ್ಲಿ ಇಬ್ಬರ ನಡುವೆ ಆದ ಪ್ರೇಮಾಂಕುರ, ಇವರಿಬ್ಬರ ಚಿತ್ರಕ್ಕಿಂತ ಆಗ ಹೆಚ್ಚು ಸುದ್ದಿ ಮಾಡಿತ್ತು. ಇದಕ್ಕೆ ಪೂರಕವಾಗಿ ಕಳೆದ ವರ್ಷ ಜುಲೈ ಆಸು ಪಾಸಿನಲ್ಲಿ ಜ್ಯೋತಿ ರೈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಸುಕು ಪೂರ್ವಜ್ ಅವರ ಹೆಸರನ್ನ ಸೇರಿಸಿಕೊಂಡರು. ಇನ್ನು ಕೆಲ ದಿನಗಳ ಹಿಂದೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ನೈಟ್ ರೋಡ್ ಚಿತ್ರದಲ್ಲಿ ಕೂಡ ಜ್ಯೋತಿ ರೈ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.


Click it and Unblock the Notifications











