ವಿಚಿತ್ರ ಅವತಾರಗಳಲ್ಲಿ ಪೋಸ್ಟರ್ ಬಿಟ್ಟು ಸಿನಿಮಾ ಅಪ್‌ಡೇಟ್ ಕೊಟ್ಟ ಕನ್ನಡ ನಟಿ
ಸಿನಿಮಾ ಪ್ರಮೋಷನ್ ಬಹಳ ಮುಖ್ಯ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಚಿತ್ರತಂಡಗಳು ಮಾಡುವ ಕಸರತ್ತು ಒಂದೆರಲ್ಲ. ಪೋಸ್ಟರ್ ಡಿಸೈನ್ ಇಂದ ಶುರು ಮಾಡಿ ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ನೋಡುವವರೆಗೆ ನಾನಾ ಪ್ರಯತ್ನ ಮಾಡುತ್ತಾರೆ.
ನಟ, ನಟಿಯರೇ ಕೆಲವೊಮ್ಮೆ ಮುಂದೆ ಬಂದು ತಮ್ಮ ಸಿನಿಮಾಗಳನ್ನು ವಿನೂತನ ರೀತಿಯಲ್ಲಿ ಪ್ರಮೋಟ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್, ಟೀಸರ್, ಟ್ರೈಲರ್, ಮೇಕಿಂಗ್ ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ. ಸದ್ಯ 'ಕಿಲ್ಲರ್' ಸಿನಿಮಾ ಹೊಸ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕ ಮೂಲದ ನಟಿ ಜ್ಯೋತಿ ಪೂರ್ವಜ್(ಜ್ಯೋತಿ ರೈ) ನಟನೆಯ ಸಿನಿಮಾ ಇದು. ನಟಿ ಜ್ಯೋತಿ ಪತಿ ಸುಕು ಪೂರ್ವಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪದ್ಮನಾಭ ರೆಡ್ಡಿ ಎಂಬುವವರ ಜೊತೆ ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಜ್ಯೋತಿ ನಟಿಸಿದ್ದಾರೆ. ಈಗಾಗಲೇ ಬಂದಿರುವ ಪೋಸ್ಟರ್, ಟೀಸರ್‌ನಲ್ಲಿ ಅದು ಗೊತ್ತಾಗಿದೆ. ಸದ್ಯ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡು 'ಕಿಲ್ಲರ್' ಸಿನಿಮಾ ಅಪ್‌ಡೇಟ್ ಕೊಟ್ಟಿದ್ದಾರೆ.
90% ವಿಎಫ್‌ಎಕ್ಸ್ ಕೆಲಸ ಪೂರ್ಣಗೊಂಡಿದೆ. ಆದಷ್ಟು ಬೇಗ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ನಾಯಕಿ ಜ್ಯೋತಿ ಮಾಹಿತಿ ನೀಡಿದ್ದಾರೆ. ವಿಚಿತ್ರ ಭಂಗಿಗಳಲ್ಲಿ ಫೋಟೊ ಕ್ಲಿಕ್ಕಿಸಿ 'ಕಿಲ್ಲರ್' ಪೋಸ್ಟರ್ ಹಂಚಿಕೊಂಡಿದ್ದಾರೆ. ಅಂದಹಾಗೆ ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಸೂಪರ್ ವುಮೆನ್ ಆಗಿ ಜ್ಯೋತಿ ಮಿಂಚಿದ್ದಾರೆ. ಚಿತ್ರದಲ್ಲಿ ನಾಲ್ಕೈದು ವಿಭಿನ್ನ ಅವತಾರಗಳಲ್ಲಿ ಆಕೆ ಮಿಂಚಿದ್ದಾರೆ.
ಎಐ, ಎಮೋಷನ್ ಹಾಗೂ ಆಕ್ಷನ್ ಈ ಚಿತ್ರದಲ್ಲಿದೆ. ಸಹೋದರ, ಸಹೋದರಿ ಭಾಂದವ್ಯ ಹಾಗೂ ಸೇಡಿನ ಕಥೆ ಕೂಡ ಚಿತ್ರದಲ್ಲಿದೆ. ಕನ್ನಡದ ಸಾಕಷ್ಟು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಜ್ಯೋತಿ ರೈ ಬಳಿಕ ಟಾಲಿವುಡ್ ಪ್ರವೇಶಿಸಿದ್ದರು. ತೆಲುಗು ಕಿರುತೆರೆಯ 'ಗುಪ್ಪಡಂತ ಮನಸು' ಧಾರಾವಾಹಿ ಪಾತ್ರ ಆಕೆಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಜಗತಿ ಎಂಬ ಪಾತ್ರದಲ್ಲಿ ತೆಲುಗು ಕಿರುತೆರೆ ವೀಕ್ಷಕರ ಮನಗೆದ್ದಿದ್ದರು. ಕೆಲ ದಿನಗಳ ಹಿಂದೆ ನಿರ್ದೇಶಕ ಸುಕು ಪೂರ್ವಜ್ ಅವರನ್ನು 2ನೇ ಮದುವೆ ಆಗಿದ್ದಾರೆ.
ಸುಕು ಪೂರ್ವಜ್ ಕೂಡ 'ಕಿಲ್ಲರ್' ಚಿತ್ರದಲ್ಲಿ ನಟಿಸಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿ ಮೋಡಿ ಮಾಡಿದ್ದ ಜ್ಯೋತಿ ಇದೀಗ ಸಿನಿಮಾ ನಾಯಕಿ ಆಗುವ ಕನಸು ಕಂಡಿದ್ದಾರೆ. 'ಕಿಲ್ಲರ್' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬಿಂದಾಸ್ ಫೋಟೊಶೂಟ್ ಮೂಲಕ ಗಮನ ಸೆಳೆಯುತ್ತಾರೆ.
ಕನ್ನಡದ 'ಹಲ್ಕಾ ಡಾನ್' ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಜ್ಯೋತಿ ಪೂರ್ವಜ್ ನಟಿಸುತ್ತಿದ್ದಾರೆ. ಆ ಮೂಲಕ ಬಹಳ ವರ್ಷಗಳ ಬಳಿಕ ಚಂದನವನಕ್ಕೆ ಮರಳಿದ್ದಾರೆ. ಕೆ. ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಮೋದ್ ಪಂಜು ಹೀರೊ ಆಗಿ ನಟಿಸುತ್ತಿದ್ದಾರೆ. ಮಡಿಕೇರಿ ಮೂಲದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದವರು.
ಬಹಳ ಬೇಗ ಕನ್ನಡ ಧಾರಾವಾಹಿಗಳಲ್ಲಿ ನಟಿಸೋಕೆ ಆರಂಭಿಸಿದ್ದರು. 'ಬಂದೇ ಬರತಾವ ಕಾಲ' ನಟಿಸಿದ ಮೊದಲ ಧಾರಾವಾಹಿ. ಬಳಿಕ 'ಜೋಗುಳ', 'ಕಿನ್ನರಿ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ' 'ಕಸ್ತೂರಿ ನಿವಾಸ', 'ಮೂರುಗಂಟು', 'ಅನುರಾಗ ಸಂಗಮ' ಹೀಗೆ ಒಂದಷ್ಟು ಕನ್ನಡ ಧಾರಾವಾಹಿಗಳಲ್ಲಿ ಮಿಂಚಿದ್ದರು. 'ಕಿಲ್ಲರ್' ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











