ಚಿರಂಜೀವಿ ಸಿನಿಮಾದಿಂದ ಕಾಜಲ್ ಪಾತ್ರವನ್ನೇ ಕಿತ್ತೆಸೆದ ನಿರ್ದೇಶಕ: ಕಾರಣವೇನು?
ನಟಿ ಕಾಜಲ್ ಅಗರ್ವಾಲ್ ಕಳೆದ 18 ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜನ್ಮತಃ ಮುಂಬೈನವರಾದರೂ ಕಾಜಲ್ ಮಿಂಚಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ.
ತೆಲುಗು ಭಾಷೆಯಲ್ಲಿ ಹಲವು ವರ್ಷಗಳಿಂದಲೂ ನಟಿಸುತ್ತಿರುವ ಕಾಜಲ್ ಈ ವರೆಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂಥಹಾ ಹಿರಿಯ ನಟಿ ಇತ್ತೀಚೆಗೆ ಸ್ಟಾರ್ ನಟ ಚಿರಂಜೀವಿ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಅಚಾನಕ್ಕಾಗಿ ಅವರು ನಟಿಸಿದ್ದ ಪಾತ್ರವನ್ನೇ ಸಿನಿಮಾದಿಂದ ಕಿತ್ತೊಗೆಯಲಾಗಿದೆ.
ನಟಿ ಕಾಜಲ್ ಅಗರ್ವಾಲ್, ತೆಲುಗಿನ 'ಆಚಾರ್ಯ' ಸಿನಿಮಾದಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಟಿಸಿದ್ದರು, ಆದರೆ ನಿನ್ನೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಕೊರಟಾಲ ಶಿವ, ಕಾಜಲ್ ಅಗರ್ವಾಲ್ ಪಾತ್ರವನ್ನು ಸಿನಿಮಾದಿಂದ ಕಿತ್ತು ಹಾಕಿರುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಕಾಜಲ್ ಪಾತ್ರವನ್ನು ಸಿನಿಮಾದಿಂದ ತೆಗೆದಿದ್ದೇನೆ: ಕೊರಟಾಲ ಶಿವ
''ಕಮರ್ಶಿಯಲ್ ಸಿನಿಮಾ ಬರೆದಾಗ, ನಾಯಕನ ಜೊತೆ ನಾಯಕಿ ಇರುತ್ತಾಳೆ ಎಂಬುದು ಸಾಮಾನ್ಯ. ಹಾಗಾಗಿ 'ಆಚಾರ್ಯ' ಸಿನಿಮಾ ಬರೆದಾಗ ಒಂದು ತಮಾಷೆಯಾದ ನಾಯಕಿಯ ಪಾತ್ರೆ ಬರೆದಿದ್ದೆ. ಅಂತೆಯೇ ಕಾಜಲ್ ಅವರನ್ನು ಕರೆಸಿ ಕೆಲವು ಮೂರು ನಾಲ್ಕು ದಿನ ಚಿತ್ರೀಕರಣ ಸಹ ಮಾಡಿದೆವು, ಆದರೆ ಸಿನಿಮಾದ ಕತೆಗೂ ನಾಯಕಿ ಪಾತ್ರಕ್ಕೂ ಯಾಕೋ ಹೊಂದಾಣಿಕೆ ಆಗಲಿಲ್ಲ ಹಾಗಾಗಿ ಕಾಜಲ್ ಪಾತ್ರವನ್ನು ತೆಗೆದುಬಿಟ್ಟೆ'' ಎಂದಿದ್ದಾರೆ ನಿರ್ದೆಶಕ ಕೊರಟಾಲ ಶಿವ.

''ಕಾಮಿಡಿ ಕ್ಯಾರೆಕ್ಟರ್ ರೀತಿ ತೋರಿಸುವುದು ಇಷ್ಟವಾಗಲಿಲ್ಲ''
''ಕಾಜಲ್ ಅಗರ್ವಾಲ್ ಬಹಳ ದೊಡ್ಡ ನಾಯಕಿ, ಅವರನ್ನು ಸುಮ್ಮನೆ ಯಾವುದೋ ಒಂದೆರಡು ದೃಶ್ಯಗಳಿಗೆ ಹಾಸ್ಯ ಕಲಾವಿದೆಯಂತೆ ಬಳಸಿಕೊಳ್ಳುವುದು ಸರಿಯಲ್ಲ. ಅವರಿಂದ ಪಾತ್ರ ಮಾಡಿಸಿದಾಗ ಕತೆಯಲ್ಲಿ ಆ ಪಾತ್ರಕ್ಕೆ ಸರಿಯಾದ ಗುರಿ, ಆಕಾರ ಇರಬೇಕು, ಆದರೆ 'ಆಚಾರ್ಯ' ಸಿನಿಮಾದಲ್ಲಿ ಕಮರ್ಶಿಯಲ್ ಕಾರಣಕ್ಕಷ್ಟೆ ನಾಯಕಿ ಪಾತ್ರ ಸೃಷ್ಟಿಸಲಾಗಿತ್ತು, ಕತೆ ಬರೆದಾಗಲೂ ನನಗೆ ಆ ಪಾತ್ರದ ಬಗ್ಗೆ ಅನುಮಾನವಿತ್ತು, ಸಿನಿಮಾ ಶೂಟಿಂಗ್ ಪ್ರಾರಂಭಿಸದ ಮೇಲೆ ನಾಯಕಿ ಪಾತ್ರ ಬೇಡ ಎಂಬುದು ಖಾತ್ರಿಯಾಯಿತು'' ಎಂದಿದ್ದಾರೆ ಕೊರಟಾಲ ಶಿವ.

ಕಾಜಲ್‌ಗೆ ಸಹ ಕಾರಣ ವಿವರಿಸಿದೆ: ಕೊರಟಾಲ ಶಿವ
''ಕಾಜಲ್ ಅಗರ್ವಾಲ್ ಪಾತ್ರವನ್ನು ಸಿನಿಮಾದಿಂದ ತೆಗೆಯುವ ಬಗ್ಗೆ ಮೊದಲಿಗೆ ನಮ್ಮ ನಿರ್ಮಾಪಕರ ಬಳಿ ನಾನು ಚರ್ಚಿಸಿದೆ. ನಿನಗೆ ಸೂಕ್ತ ಎನಿಸಿದರೆ ಎಲ್ಲರಿಗೂ ಈ ವಿಷಯ ತಿಳಿಸಿ ಮುಂದುವರಿ ಎಂದು ಹೇಳಿದರು. ಅಂತೆಯೇ ನಾನು ಚಿತ್ರತಂಡದ ಇತರರಿಗೆ ಕಾರಣ ತಿಳಿಸಿದೆ. ಸ್ವತಃ ಕಾಜಲ್‌ಗೂ ಕಾರಣ ವಿವರಿಸಿದೆ, ನಿಮ್ಮಂಥಹಾ ನಾಯಕಿಯನ್ನು ಕಾಮಿಡಿ ಕ್ಯಾರೆಕ್ಟರ್ ಮಾದರಿಯಲ್ಲಿ ತೋರಿಸಲು ಇಷ್ಟವಿಲ್ಲ ಎಂದೆ, ಕಾಜಲ್ ಸಹ ನನ್ನ ನಿರ್ಣಯವನ್ನು ಒಪ್ಪಿಕೊಂಡರು, ಮುಂದೆ ಮತ್ತೆ ಒಟ್ಟಿಗೆ ಕೆಲಸ ಮಾಡೋಣ, ಸೆಟ್ ಅನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದರು'' ಎಂದಿದ್ದಾರೆ ಕೊರಟಾಲ ಶಿವ.

ಬೇರೆಯದೇ ಸುದ್ದಿ ಹರಿದಾಡುತ್ತಿದೆ: ಕಾಜಲ್
ಕೆಲವು ಮೂಲಗಳ ಪ್ರಕಾರ, ''ಕಾಜಲ್ ನಟಿಸಬೇಕಿದ್ದ ಕೆಲವು ದೃಶ್ಯಗಳು ಹಾಗೆಯೇ ಉಳಿದಿದ್ದವಂತೆ, ಅದೇ ವೇಳೆಗೆ ಕಾಜಲ್ ಗರ್ಭಿಣಿ ಆಗಿದ್ದ ಕಾರಣ, ಆಕೆ ಸಿನಿಮಾದಿಂದ ದೂರ ಉಳಿಯುವುದಾಗಿ ಹೇಳಿದರಂತೆ. ಇಲ್ಲವಾದರೆ ಕೆಲವು ತಿಂಗಳು ಕಾಯಬೇಕೆಂದು ಹೇಳಿದರಂತೆ, ಆದರೆ ಎರಡಕ್ಕೂ ಒಪ್ಪದ ಚಿತ್ರತಂಡ ಕಾಜಲ್ ಅವರ ಪಾತ್ರವನ್ನೇ ಸಿನಿಮಾದಿಂದ ತೆಗೆದಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ, ರಾಮ್ ಚರಣ್‌ಗೆ ನಾಯಕಿಯಾಗಿ ನಟಿಸಿದ್ದಾರೆ. 'ಆಚಾರ್ಯ' ಸಿನಿಮಾವು ಏಪ್ರಿಲ್ 29 ರಂದು ತೆರೆಗೆ ಬರಲಿದೆ.


Click it and Unblock the Notifications











