ಆ ವಿಷಯದಲ್ಲಿ ದಕ್ಷಿಣ ಚಿತ್ರರಂಗಕ್ಕಿಂತ ಬಾಲಿವುಡ್ ಬೆಸ್ಟ್ - ಕಾಜಲ್ ಅಗರ್‌ವಾಲ್....!
ಮದುವೆಯಾದರೆ ನಾಯಕಿಯರಿಗೆ ಅವಕಾಶ ಸಿಗಲ್ಲ ಅನ್ನುವ ಮಾತು ಇದೆ. ಇನ್ನೂ ಮಕ್ಕಳಾದರೆ ಅಷ್ಟೇ. ಅವಕಾಶಗಳ ಬಾಗಿಲು ಸಂಪೂರ್ಣವಾಗಿ ಮುಚ್ಚಿಯೇ ಹೋಗುತ್ತೆ. ಇದಕ್ಕೆ ಪೂರಕವಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅನೇಕ ನಾಯಕಿಯರು ಮದುವೆಯಾದ ನಂತರ ತೆರೆ ಮರೆಗೆ ಸರೆದಿದ್ದಾರೆ. ಪ್ರಿಯಾಮಣಿ.. ಪ್ರಿಯಾಂಕ ಉಪೇಂದ್ರ.. ಹೀಗೆ ಎಲ್ಲೋ ಅಲ್ಲೊಬ್ಬರು .. ಇಲ್ಲೊಬ್ಬರು .. ಇದಕ್ಕೆ ಅಪವಾದ ಎಂಬಂತೆ ಬಣ್ಣದ ಕನಸೆಂಬ ಕುದುರೆಯ ಬೆನ್ನತ್ತಿ ಇನ್ನೂ ಪ್ರಯಾಣ ಮಾಡ್ತಿದ್ದಾರೆ.
ಆದರೆ.. ದಕ್ಷಿಣಕ್ಕೆ ಅನ್ವಯವಾಗುವ ಈ ಮಾತು ಬಾಲಿವುಡ್‌ನಲ್ಲಿ ಅನ್ವಯವಾಗಲ್ಲ. ಮದುವೆಯಾಗಿ ಮಕ್ಕಳಾದರೂ ಕೂಡ ನಾಯಕಿಯರನ್ನ ಹಿಂದಿ ಉದ್ಯಮ ಕಡೆಗಣಿಸುವುದಿಲ್ಲ.ಇದಕ್ಕೆ ಕೈಗನ್ನಡಿ ಎಂಬಂತೆ ಐಶ್ವರ್ಯ ರೈ.. ಪ್ರಿಯಾಂಕ ಚೋಪ್ರಾ.. ದೀಪಿಕಾ ಪಡುಕೋಣೆ.. ರಾಣಿ ಮುಖರ್ಜಿ.. ಆಲಿಯಾ ಭಟ್ ಸೇರಿ ಇನ್ನೂ ಅನೇಕರು ಚಿತ್ರರಂಗದಲ್ಲಿಯೇ ಇದ್ದಾರೆ. ಇವತ್ತು ಕೂಡ ನಾಯಕಿಯ ಪಾತ್ರಗಳನ್ನೇ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಮತ್ತು ಉತ್ತರದ ನಡುವೆ ಇರುವ ಈ ವ್ಯತ್ಯಾಸದ ಬಗ್ಗೆ ಕಾಜಲ್ ಅಗರ್‌ವಾಲ್ ಇತ್ತೀಚೆಗೆ ಮಾತನಾಡಿದ್ದಾರೆ. ಮನಸ್ಥಿತಿ ಬದಲಾಗುವರೆಗೆ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯ ಇಲ್ಲ ಎಂದಿದ್ದಾರೆ.

ಹೌದು. ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಜಲ್ ಅಗರ್‌ವಾಲ್, ಬಾಲಿವುಡ್‌ನಲ್ಲಿ ಮದುವೆಯಾದ ನಟಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂದಿದ್ದಾರೆ. ಉದಾಹರಣೆಗೆ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಮದುವೆಯಾದ ನಂತರ ದೀಪಿಕಾ ಪಡುಕೋಣೆಗೆ 'ಫೈಟರ್' ನಂತಹ ಆಕ್ಷನ್-ರೊಮ್ಯಾಂಟಿಕ್ ಪಾತ್ರ ಸಿಗುತ್ತದೆ. ಆಲಿಯಾ ಭಟ್ಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಂತಹ ರೊಮ್ಯಾಂಟಿಕ್ ಸಿನಿಮಾ ಸಿಗುತ್ತೆ ಆದರೆ ದಕ್ಷಿಣ ಭಾರತದಲ್ಲಿ ಮಾತ್ರ ಮದುವೆಯಾದರೆ ಮೂಲೆಗುಂಪು ಮಾಡುವ ಪ್ರಯತ್ನವನ್ನ ಕೆಲವರು ಮಾಡ್ತಾರೆ ಅಂದಿದ್ದಾರೆ. ಈ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದಿದ್ದಾರೆ ಕಾಜಲ್ ಅಗರ್‌ವಾಲ್
ನಾಯಕಿಯರು ಮದುವೆಯಾದ ನಂತರ ಅವರನ್ನ ನೋಡುವ ದೃಷ್ಟಿಕೋನವನ್ನು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅನೇಕರು ಬದಲಿಸಿಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಜಲ್, ಹಿರಿಯ ನಟಿಯರಾದ ಹೇಮಾ ಮಾಲಿನಿ, ಶರ್ಮಿಳಾ ಠಾಗೋರ್ ಅಂಥಹವರು ವರ್ಷಗಳು ಕಳೆದರು ನಾಯಕಿಯರಾಗಿ ನಟಿಸಿದ್ದರು ಎಂದಿದ್ದಾರೆ. ಮದುವೆಯಾದ ನಂತರ ದಕ್ಷಿಣದಲ್ಲಿ ನಯನತಾರಾ ಇವತ್ತು ಕೂಡ ತಮ್ಮ ಬೇಡಿಕೆ ಉಳಿಸಿಕೊಂಡಿದ್ದಾರೆ ತಮ್ಮದೇ ರೀತಿಯ ರೊಮ್ಯಾಂಟಿಕ್, ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಸದ್ಯಕ್ಕೆ ಕಾಜಲ್ ಅಗರ್‌ವಾಲ್ ಅವರ ಈ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನ ಹುಟ್ಟು ಹಾಕಿದೆ. ಚಿತ್ರರಂಗದಲ್ಲಿ ನಾಯಕಿಯರ ಆಯಸ್ಸು ಮತ್ತು ಅವರ ಕನಸುಗಳ ಬಗ್ಗೆ ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಕಾಜಲ್ ಅವರ ಈ ಹೇಳಿಕೆಯನ್ನ ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ವಿರೋಧವನ್ನ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ಕಾಜಲ್ ಅಗರ್‌ವಾಲ್ ಅಭಿನಯದ ಸತ್ಯಭಾಮ ಸಿನಿಮಾ ಈ ಜೂನ್ 07ಕ್ಕೆ ತೆರೆಗೆ ಬರಲಿದೆ. ಎಸಿಪಿ ಪಾತ್ರಕ್ಕೆ ಕಾಜಲ್ ಅಗರ್‌ವಾಲ್ ಚಿತ್ರದಲ್ಲಿ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











