ಸಿನಿಮಾ ಮಾಡ್ತಾ ಮಾಡ್ತಾ ಶ್ರೀಮಂತ ನಿರ್ಮಾಪಕನ ಮಗಳನ್ನೇ ಪಟಾಯಿಸಿದ್ದ ನಾಗ್ ಅಶ್ವಿನ್
ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 4 ದಿನಕ್ಕೆ ಸಿನಿಮಾ ವಿಶ್ವದಾದ್ಯಂತ 700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರೇ ಘೋಷಿಸಿದ್ದಾರೆ. ನಾಗ್ ಅಶ್ವಿನ್ ಕಲ್ಪನೆ, ವಿಷನ್, ಮೇಕಿಂಗ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.
ಬರೋಬ್ಬರಿ 500 ಕೋಟಿ ರೂ. ಬಂಡವಾಳದಲ್ಲಿ 'ಕಲ್ಕಿ 2898 AD' ಚಿತ್ರ ನಿರ್ಮಾಣವಾಗಿದೆ. ಭಾರತೀಯ ಚಿತ್ರರಂಗದಲ್ಲೇ ಬಹಳ ದುಬಾರಿ ಸಿನಿಮಾ ಇದು. ಕೇವಲ 2 ಸಿನಿಮಾ ಮಾಡಿದ್ದ ನಾಗ್ ಅಶ್ವಿನ್ ನಂಬಿ 500 ಕೋಟಿ ರೂ. ಸುರಿಯುವುದು ತಮಾಷೆಯ ಮಾತಲ್ಲ. ಆದರೆ ಅಳಿಯನನ್ನು ನಂಬಿ ನಿರ್ಮಾಪಕ ಅಶ್ವಿನಿ ದತ್ ಈ ಸಾಹಸಕ್ಕೆ ಕೈಹಾಕಿದ್ದರು. ಅವರ ನಂಬಿಕೆ ಸುಳ್ಳಾಗಲಿಲ್ಲ.

ಒಂದಷ್ಟು ನೆಗೆಟಿವ್ ಟಾಕ್ಸ್ ನಡುವೆಯೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ, ಕನ್ನಡಕ್ಕೂ ಡಬ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ನಾಗ್ ಅಶ್ವಿನ್ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಣಕಲು ದೇಹ, ಸರಳ ವ್ಯಕ್ತಿತ್ವ, ಸದಾ ಸಿನಿಮಾ ಧ್ಯಾನ. ಯಾರಪ್ಪಾ ಈ ನಾಗ್ ಅಶ್ವಿನ್? ಎಂದು ಸಾಕಷ್ಟು ಜನ ಚರ್ಚಿಸಲು ಆರಂಭಿಸಿದ್ದಾರೆ. ಆತನ ಹಿನ್ನೆಲೆ ಬಗ್ಗೆ ಅಂತರ್ಜಾದಲ್ಲಿ ತಡಕಾಡುತ್ತಿದ್ದಾರೆ. ಆತನ ಹೆಸರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಪ್ರಭಾಸ್ ಅಭಿಮಾನಿಗಳಂತೂ ಬಹುಪರಾಕ್ ಎನ್ನುತ್ತಿದ್ದಾರೆ. ಆತನ ಹಿಂದಿನ ಸಿನಿಮಾ ಬಗ್ಗೆ ಪರಭಾಷಾ ಪ್ರೇಕ್ಷಕರು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಹೈದರಾಬಾದ್‌ನ ಖ್ಯಾತ ವೈದ್ಯರಾದ ಜೈರಾಮ್ ರೆಡ್ಡಿ-ಜಯಂತಿ ದಂಪತಿ ಮಗ ನಾಗ್ ಅಶ್ವಿನ್. ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿದ ನಾಗ್ ಅಶ್ವಿನ್ ತಂದೆ ತಾಯಿಯಂತೆ ಡಾಕ್ಟರ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಚ್ಚರಿ ಎನ್ನುವಂತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆಪ್ತರೆಲ್ಲಾ ನಾಗಿ ಎಂದೇ ಕರೆಯುತ್ತಾರೆ. ನಿರ್ದೇಶಕ ಶೇಖರ್ ಕಮ್ಮುಲ ತಂಡದಲ್ಲಿ ಗುರ್ತಿಸಿಕೊಂಡರು. 'ಯವಡೇ ಸುಬ್ರಮಣ್ಯಂ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟರು. ಅದಕ್ಕೂ ಮುನ್ನ ಒಂದಷ್ಟು ಜಾಹೀತಾತುಗಳಲ್ಲಿ ಕೆಲಸ ಮಾಡಿದ್ದರು.

ತೆಲುಗಿನ ಖ್ಯಾತ ನಿರ್ಮಾಪಕ ಅಶ್ವಿನಿ ದತ್. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ನಿರ್ಮಾಪಕ. ದಶಕಗಳ ಹಿಂದೆ ಕೋಟಿ ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸಿದವರು. ಅವರಿಗೆ ಮೂವರು ಹೆಣ್ಣು ಮಕ್ಕಳು. ಅವರು ಕೂಡ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿದ್ದಾರೆ. ನಾಗ್ ಅಶ್ವಿನ್ ಹಾಗೂ ಪ್ರಿಯಾಂಕ ದತ್ ಒಂದಷ್ಟು ಜಾಹೀರಾತು ಹಾಗೂ 'ಯವಡೇ ಸುಬ್ರಮಣ್ಯಂ' ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಇಬ್ಬರ ನಡುವೆ ಶುರುವಾದ ಸ್ನೇಹ ಪ್ರೀತಿ ತಿರುಗಿತ್ತು.
ಅಶ್ವಿನಿ ದತ್ ಮಗಳು ಪ್ರಿಯಾಂಕಗೆ ಮದುವೆ ಮಾಡಲು ಮುಂದಾಗಿದ್ದರು. ಒಂದಷ್ಟು ಸಂಬಂಧಗಳನ್ನು ಹುಡುಕಲು ಆರಂಭಿಸಿದ್ದರು. ಆಗ ಪ್ರಿಯಾಂಕ ಈ ವಿಚಾರವನ್ನು ನಾಗ್ ಅಶ್ವಿನ್ ಬಳಿ ಹೇಳಿದ್ದರಂತೆ. ಕೂಡಲೇ ಪ್ರತಿಕ್ರಿಯಿಸಿದ ನಾಗಿ "ನಿಮಗೆ ಯಾರಾದರೂ ಇಷ್ಟ ಆದ್ರೆ ಪರವಾಗಿಲ್ಲ. ಅಥವಾ ನಾವು ಮದುವೆಯಾಗೋಣ" ಎಂದು ನಾಗ್ ಅಶ್ವಿನ್ ಸೇಫ್ ಜೋನ್‌ನಲ್ಲಿ ಬಹಳ ಕ್ಯಾಶುವಲ್ ಆಗಿ ಕೇಳಿದ್ದರಂತೆ. ಆತನ ಮಾತಿಗೆ ಪ್ರಿಯಾಂಕಾ ಕೂಡ ಫಿದಾ ಆಗಿದ್ದರು. ಕೂಡಲೇ ಮನೆಯಲ್ಲಿ ವಿಷಯ ತಿಳಿಸಿ 2015ರಲ್ಲಿ ಮದುವೆಯಾಗಿದ್ದರು. ಬಳಿಕ ಮಾವನ ಸಂಸ್ಥೆಗೆ 'ಮಹಾನಟಿ' ಸಿನಿಮಾ ಕಟ್ಟಿಕೊಟ್ಟರು.
ಹೀಗೆ ನಾಗ್ ಅಶ್ವಿನ್ ತೆಲುಗಿನ ಖ್ಯಾತ ನಿರ್ಮಾಪಕ ಅಶ್ವಿನಿ ದತ್ ಅಳಿಯನಾದರು. ಮದುವೆ ಬಳಿಕ ಕೂಡ ಬಹಳ ಸಿಂಪಲ್ ಆಗಿಯೇ ಜೀವನ ಸಾಗಿಸುತ್ತಿದ್ದಾರೆ. ಪುಟ್ಟ ಕಾರ್ ಒಂದರಲ್ಲಿ ಓಡಾಡುತ್ತಾರೆ. ಆತನ ಸಿಂಪ್ಲಿಸಿಟಿ ಬಗ್ಗೆ ಟಾಲಿವುಡ್ ಮಂದಿ ಮೆಚ್ಚಿಕೊಳ್ಳುತ್ತಾರೆ. ಮುಂದೆ ನಾಗಿ 'ಕಲ್ಕಿ 2898 AD' ಪಾರ್ಟ್-2 ಸಿನಿಮಾ ಕಟ್ಟಿಕೊಡಲಿದ್ದಾರೆ. ಈಗಾಗಲೇ 60%ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಆ ಬಳಿಕ ಇದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಯಾಸ್ಕಿನ್(ಕಮಲ್ ಹಾಸನ್) ಪಾತ್ರ ಆಧರಿಸಿ ಮತ್ತೊಂದು ಸಿನಿಮಾ ಪ್ಲಾನ್ ಮಾಡುತ್ತಿದ್ದಾರೆ.


Click it and Unblock the Notifications











