'ಪೋಕಿರಿ' ಸಿನಿಮಾಕ್ಕೆ ಮೊದಲು ಆಯ್ಕೆಯಾಗಿದ್ದ ನಟಿಯೇ ಬೇರೆ!
'ಪೋಕಿರಿ' ಸಿನಿಮಾ ತೆಲುಗಿನ ಸೂಪರ್-ಡೂಪರ್ ಹಿಟ್ ಸಿನಿಮಾಗಳಲ್ಲಿ. ಮಹೇಶ್ ಬಾಬು-ಇಲಿಯಾನ ನಟಿಸಿದ್ದ ಈ ಸಿನಿಮಾ ಕರ್ನಾಟಕದಲ್ಲೂ ಭಾರಿ ಯಶಸ್ಸು ಗಳಿಸಿತು.
Recommended Video
ಸಿನಿಮಾದಲ್ಲಿ ಮಹೇಶ್ ಬಾಬು ಹಾಗೂ ಇಲಿಯಾನ ಜೋಡಿ ಮೋಡಿ ಮಾಡಿತ್ತು. ಇಲಿಯಾನಾಗೆ ದೊಡ್ಡ ಸ್ಟಾರ್‌ಡಮ್ ತಂದುಕೊಟ್ಟ ಸಿನಿಮಾ 'ಪೋಕಿರಿ'. ಈ ಸಿನಿಮಾ ಕನ್ನಡ, ತಮಿಳು, ಹಿಂದಿ ಸಿನಿಮಾದಲ್ಲಿ ರೀಮೇಕ್ ಆಗಿ ಅಲ್ಲಿಯೂ ಸೂಪರ್ ಹಿಟ್ ಆಯಿತು.
ಆದರೆ ಪೋಕಿರಿ ಸಿನಿಮಾದ ನಿರ್ದೇಶಕ ಪುರಿ ಜಗನ್ನಾತ್ ಪೋಕಿರಿ ಸಿನಿಮಾಕ್ಕೆ ಮೊದಲಿಗೆ ಆಯ್ಕೆ ಮಾಡಿದ್ದು ನಟಿ ಇಲಿಯಾನಾರನ್ನು ಅಲ್ಲ. ಬದಲಿಗೆ ಬಾಲಿವುಡ್‌ನ ಖ್ಯಾತ ಹೀರೋಯಿನ್ ಒಬ್ಬರನ್ನು. ಆದರೆ ಆಗ ಆ ನಟಿ ಒಂದೂ ಸಿನಿಮಾದಲ್ಲೂ ನಟಿಸಿರಲಿಲ್ಲ. ಈ ವಿಷಯವನ್ನು ಸ್ವತಃ ಆ ಖ್ಯಾತ ಬಾಲಿವುಡ್ ನಟಿಯೇ ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೊದಲು ಆಯ್ಕೆ ಆಗಿದ್ದಿದ್ದು ಬಾಲಿವುಡ್ ನಟಿ
ಬಾಲಿವುಡ್‌ನ ಖ್ಯಾತ ನಟಿ ಕಂಗನಾ ರಣೌತ್ ಅವರು ಪೋಕಿರಿ ಸಿನಿಮಾದಲ್ಲಿ ಮಹೇಶ್ ಬಾಬು ಗೆ ನಾಯಕಿಯಾಗಿ ನಟಿಸಬೇಕಿತ್ತು. ಪುರಿ ಸಹ ಕಂಗನಾ ಅವರೊಂದಿಗೆ ಸಿನಿಮಾ ಮಾಡಲು ರೆಡಿಯಾಗಿದ್ದರು. ಆದರೆ ಕಂಗನಾ ಗೆ ಆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

ಪೋಕಿರಿ ಸಿನಿಮಾಕ್ಕೆ ಕಂಗನಾ ಆಯ್ಕೆ ಆಗಿದ್ದರು
ಕಂಗನಾ ಇದನ್ನು ತಮ್ಮ ಇತ್ತೀಚಿನ ವಿವಾದಾತ್ಮಕ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಪೋಕಿರಿ ಸಿನಿಮಾಕ್ಕೆ ಕಂಗನಾ ಆಡಿಶನ್ ನೀಡಿದ್ದರಂತೆ. ಸಿನಿಮಾಕ್ಕೆ ಆಯ್ಕೆ ಸಹ ಆಗಿದ್ದರಂತೆ ಆದರೆ ಅದೇ ಸಮಯದಲ್ಲಿ ಮಹೇಶ್ ಭಟ್ ನಿರ್ಮಾಣದ 'ಗ್ಯಾಂಗ್‌ಸ್ಟರ್' ಸಿನಿಮಾಕ್ಕೂ ಆಯ್ಕೆ ಆದರಂತೆ.

ಪೋಕಿರಿ ಅವರ ಮೊದಲ ಸಿನಿಮಾ ಆಗಿರುತ್ತಿತ್ತು
ಒಂದೊಮ್ಮೆ ಕಂಗನಾ ರಣೌತ್ ಪೋಕಿರಿ ಸಿನಿಮಾದಲ್ಲಿ ನಟಿಸಿದ್ದಿದ್ದರೆ ಅದೇ ಅವರ ಮೊದಲ ಸಿನಿಮಾ ಆಗಿರುತ್ತಿತ್ತು. ಆದರೆ ಅವರು 'ಗ್ಯಾಂಗ್‌ಸ್ಟರ್' ಸಿನಿಮಾದಲ್ಲಿ ನಟಿಸಿದರು, ಅದು ಅವರ ಮೊದಲ ಸಿನಿಮಾ ಆಯಿತು. ಕಾಕತಾಳೀಯವೆಂದರೆ ಎರಡೂ ಸಿನಿಮಾಗಳೂ ಸಹ ಏಪ್ರಿಲ್ 28, 2006 ರಂದೇ ಬಿಡುಗಡೆ ಆಗಿ ಹಿಟ್ ಆದವು.

ಮಹೇಶ್ ಭಟ್ ಹೇರಿದ ಒತ್ತಡದ ಕಾರಣದಿಂದ ಪೋಕಿರಿ ಕೈಬಿಟ್ಟರು?!
ಮಹೇಶ್ ಭಟ್ ಅವರು ತಮ್ಮ ಸಿನಿಮಾದಲ್ಲಿಯೇ ನಟಿಸಬೇಕು ಎಂದು ಒತ್ತಡ ಹೇರಿದ್ದರಿಂದ ಪೋಕಿರಿ ಸಿನಿಮಾದಲ್ಲಿ ನಟಿಸಲಾಗಲಿಲ್ಲ. ಮಹೇಶ್ ಭಟ್ ಪುತ್ರಿ ಆರೋಪಿಸುವಂತೆ ಮಹೇಶ್ ಭಟ್ ಅವರೇ ತಮಗೆ ಅವಕಾಶ ಕೊಟ್ಟರು ಎಂಬುದು ಸುಳ್ಳು, ನಾನು ಪೋಕಿರಿ ಸಿನಿಮಾಕ್ಕೆ ಆಯ್ಕೆ ಆಗಿದ್ದೆ, ಗ್ಯಾಂಗ್‌ಸ್ಟರ್ ಅಲ್ಲದಿದ್ದರೆ ಪೋಕಿರಿ ಸಿನಿಮಾದಲ್ಲಿ ನಟಿಸಿರುತ್ತಿದ್ದೆ ಎಂದಿದ್ದಾರೆ ಕಂಗನಾ.

ತೆಲುಗಿನ 'ಏಕ್ ನಿರಂಜನ್' ಸಿನಿಮಾದಲ್ಲಿ ನಟನೆ
ಆದರೆ ನಂತರ ಕಂಗನಾ ಅವರು ತೆಲುಗಿನ 'ಏಕ್ ನಿರಂಜನ್' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ನಿರ್ದೇಶಕ ಪುರಿ ಜಗನ್ನಾತ್. ನಾಯಕ ಪ್ರಭಾಸ್. ಸಿನಿಮಾ ಸೂಪರ್ ಹಿಟ್ ಆಯಿತು. ಕಂಗನಾ ನಟನೆಗೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ ಆ ನಂತರ ಕಂಗನಾ ತೆಲುಗು ಸಿನಿಮಾಗಳಲ್ಲಿ ನಟಿಸಲಿಲ್ಲ. ಈಗ ತಮಿಳಿನಲ್ಲಿ 'ತಲೈವಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications










