ಹುಟ್ಟುಹಬ್ಬದ ಸಂಭ್ರಮದಲ್ಲಿ ಅಲ್ಲು ಅರ್ಜುನ್; ಶುಭಕೋರಿದ ನಟ ಧನಂಜಯ್
ತೆಲುಗು ಸಿನಿಮಾರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟ ಅಲ್ಲು ಅರ್ಜುನ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಹುಟ್ಟುಹಬ್ಬದ ವಿಶೇಷವಾಗಿ ಬಹುನಿರೀಕ್ಷೆಯ ಪುಷ್ಪ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಜನ್ಮದಿನದ ಮುನ್ನಾದಿನ ಬಿಡುಗಡೆಯಾದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬನ್ನಿಯ ಆಕ್ಷನ್, ನಟನೆ ಮತ್ತು ಗೆಟಪ್ ಗೆ ಅಭಿಮಾನಿಗಳು ಉಘೇ ಎನ್ನುತ್ತಿದ್ದಾರೆ.
ಹುಟ್ಟುಹಬ್ಬದ ವಿಶೇಷವಾಗಿ ಅಲ್ಲು ಅರ್ಜುನ್ ಕಾಮನ್ ಡಿಪಿ ಬಿಡುಗಡೆ ಮಾಡಿ ಸಿನಿ ಗಣ್ಯರು ಶುಭಕೋರುತ್ತಿದ್ದಾರೆ. ನಟಿ ತಮನ್ನಾ, ರಾಣಾ ದಗ್ಗುಬಾಟಿ, ಗಾಯಕ ಸಿದ್ ಶ್ರೀರಾಮ್, ನಟಿ ಅಂಜಲಿ ಸೇರಿದಂತೆ ಅನೇಕ ಗಣ್ಯರು ಸ್ಟೈಲಿಶ್ ಸ್ಟಾರ್ ಜನ್ಮದಿನಕ್ಕೆ ವಿಶ್ ಮಾಡುತ್ತಿದ್ದಾರೆ.

ಇನ್ನು ವಿಶೇಷ ಎಂದರೆ ಕನ್ನಡದ ನಟ ಡಾಲಿ ಧನಂಜಯ್ ಕೂಡ ಅಲ್ಲು ಅರ್ಜುನ್ ಗೆ ವಿಶ್ ಮಾಡಿದ್ದಾರೆ. ಪುಷ್ಪ ಸಿನಿಮಾದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಧನಂಜಯ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಬನ್ನಿ ಗಾರು' ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ನಟ ಧನಂಜಯ್ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಡಾಲಿ ಮೊದಲ ಬಾರಿಗೆ ಅಲ್ಲು ಅರ್ಜುನ್ ಸಿನಿಮಾದಲ್ಲಿ ನಟಿಸುತ್ತಿದ್ದು, ಧನಂಜಯ್ ಲುಕ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಅಲ್ಲು ಅರ್ಜುನ್ ಕೊನೆಯದಾಗಿ ಅಲಾ ವೈಕುಂಠಪುರಂಲೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಕಳೆದ ವರ್ಷ ತೆರೆಗೆ ಬಂದ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಬೊಟ್ಟ ಬೊಮ್ಮ ಹಾಡು ದಾಖಲೆ ನಿರ್ಮಿಸಿದೆ.
ಇನ್ನು ಅಲ್ಲು ಅರ್ಜುನ್ 2003ರಲ್ಲಿ ಗಂಗೋತ್ರಿ ಮೂಲಕ ನಾಯಕನಾಗಿ ಚಿತ್ರಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಬಳಿಕ ಬಂದ ಆರ್ಯ ಚಿತ್ರ ಅಲ್ಲು ಅರ್ಜುನ್ ಸಿನಿ ಬದುಕನ್ನೇ ಬದಲಾಯಿಸಿತು. ಅದ್ಭುತ ಸಿನಿಮಾಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುವ ಅಲ್ಲು ಅರ್ಜುನ್ ಮತ್ತಷ್ಟು ಉತ್ತಮ ಸಿನಿಮಾಗಳನ್ನು ನೀಡಲಿ ಎನ್ನುವುದೇ ಅಭಿಮಾನಿಗಳ ಆಶಯ.


Click it and Unblock the Notifications











