ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶಶಿ ಕುಮಾರ್ ಪುತ್ರ
ನಟ ಶಶಿ ಕುಮಾರ್ ಪುತ್ರ ಆದಿತ್ಯ ಈಗಾಗಲೇ ಚಿತ್ರರಂಗಕ್ಕೆ ಬಂದಿದ್ದಾರೆ. 'ಮೊಡವೆ' ಎಂಬ ಸಿನಿಮಾದ ಮೂಲಕ ಆದಿತ್ಯ ಲಾಂಚ್ ಆಗಿದ್ದಾರೆ. ಆದರೆ, ಈ ಸಿನಿಮಾ ಬಿಡುಗಡೆಗೂ ಮೊದಲೇ ಅವರ ಮತ್ತೊಂದು ಸಿನಿಮಾ ಸಿದ್ಧವಾಗಿದೆ.
'ಸೀತಾಯಣಂ' ಎಂಬ ಸಿನಿಮಾದಲ್ಲಿ ಆದಿತ್ಯ ನಟಿಸುತ್ತಿದ್ದಾರೆ. ಪ್ರಭಾಕರ್ ಆರಿಷ್ಕಾ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಮುಕ್ತಾಯವಾಗಿದೆಯಂತೆ. ಕನ್ನಡ ಮತ್ತೆ ತೆಲುಗು ಎರಡು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಹೀಗಾಗಿ ಈ ಚಿತ್ರದ ಮೂಲಕ ಆದಿತ್ಯ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಸಿನಿಮಾದ ಟೈಟಲ್ ಕೇಳಿದಾಗ ರಾಮಾಯಣಕ್ಕೂ 'ಸೀತಾಯಣಂ' ಕ್ಕೂ ಏನಾದರೂ ಸಂಬಂಧ ಇದೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ಈ ಸಿನಿಮಾಗೆ ಯಾವುದೇ ಪೌರಾಣಿಕ ಹಿನ್ನಲೆ ಇಲ್ಲವಂತೆ. ಇಂದಿನ ಕಾಲಘಟ್ಟದಲ್ಲಿ ಸಿನಿಮಾದ ಕಥೆ ನಡೆಯುತ್ತದೆಯಂತೆ.

ಅನಹಿತ ಭೂಷಣ್ ಸಿನಿಮಾದ ನಾಯಕಿಯಾಗಿದ್ದಾರೆ. ಅನಹಿತ ಮುಂಬೈನವರಾಗಿದ್ದು, ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಒಂದು ಪ್ರೇಮಕಥೆಯನ್ನು ಹೊಂದಿದ್ದು, ಆದಿತ್ಯ ಹಾಗೂ ಅನಹಿತ ಜೋಡಿ ತುಂಬ ಚೆನ್ನಾಗಿ ಇರಲಿದೆಯಂತೆ.
ಅಂದಹಾಗೆ, 'ಸೀತಾಯಣಂ' ಸಿನಿಮಾ 'ಮೊಡವೆ' ಸಿನಿಮಾಗೂ ಮೊದಲೇ ಬಿಡುಗಡೆ ಆಗಲಿದೆ. ಕಾರಣ 'ಮೊಡವೆ' ಸಿನಿಮಾ ನಿಂತು ಹೋಗಿದೆ ಎನ್ನುವ ಸುದ್ದಿ ಇದೆ.


Click it and Unblock the Notifications











