ಪ್ರಶಾಂತ್ ನೀಲ್- ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಕನ್ನಡದ ಈ ನಟಿ ನಾಯಕಿಯಾಗಿ ಆಯ್ಕೆ!
ಕನ್ನಡ ನಟಿಯರು ಇತ್ತೀಚೆಗೆ ಪರಭಾಷೆಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಸಾಲು ಸಾಲಾಗಿ ಕನ್ನಡ ಬೆಡಗಿಯರು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಾಲಿವುಡ್‌ಗೂ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಇದೀಗ ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಕನ್ನಡ ನಟಿ ನಾಯಕಿಯಾಗಿ ಆಯ್ಕೆ ಆಗುತ್ತಾರೆ ಎನ್ನಲಾಗ್ತಿದೆ.
ಸದ್ಯ 'ದೇವರ' ಸಕ್ಸಸ್ ಅಲೆಯಲ್ಲಿ ತಾರಕ್ ತೇಲುತ್ತಿದ್ದಾರೆ. ಮತ್ತೊಂದು ಕಡೆ ಬಾಲಿವುಡ್‌ಗೂ ಲಗ್ಗೆ ಇಟ್ಟಿದ್ದಾರೆ. ಹೃತಿಕ್ ರೋಷನ್ ಜೊತೆ 'ವಾರ್- 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಒಂದೆರಡು ಶೆಡ್ಯೂಲ್ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದು ಈ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುವಂತಾಗಿದೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಂಗ್ ಟೈಗರ್ ಸಿನಿಮಾ ಬಹಳ ಹಿಂದೆಯೇ ಘೋಷಣೆ ಆಗಿತ್ತು. ಇತ್ತೀಚೆಗೆ ಸಿನಿಮಾ ಸೆಟ್ಟೇರಿತ್ತು.

'KGF' ಸರಣಿ ಸಿನಿಮಾಗಳಿಂದ ಪ್ರಶಾಂತ್ ನೀಲ್ ಸಂಚಲನ ಸೃಷ್ಟಿಸಿರುವುದು ಗೊತ್ತೇಯಿದೆ. 'KGF'-2 ಬಳಿಕ ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸಲಾರ್' ಸಿನಿಮಾ ತೆರೆಗೆ ತಂದು ಗೆದ್ದಿದ್ದಾರೆ. ನೀಲ್ ವಿಷನ್, ಮೇಕಿಂಗ್ ಸ್ಟೈಲ್, ಎಲಿವೇಷನ್ಸ್ ಸೀನ್ಸ್ ನೋಡಿ ಪರಭಾಷಿಕರು ಫಿದಾ ಆಗಿದ್ದಾರೆ. ಇನ್ನು ತಾರಕ್ ರೀತಿಯ ಇಂಟೆನ್ಸ್ ಆಕ್ಟರ್ ಜೊತೆ ನೀಲ್ ಕೈ ಜೋಡಿಸಿದರೆ ತೆರೆಮೇಲೆ ಮ್ಯಾಜಿಕ್ ಗ್ಯಾರಂಟಿ ಎಂದು ಅಭಿಮಾನಿಗಳು ಉತ್ಸುಕರಾಗಿದ್ದಾರೆ. 2026ರ ಸಂಕ್ರಾಂತಿಗೆ ಈ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ NTR31 ಸಿನಿಮಾ ಮೂಡಿ ಬರಲಿದೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. 'ಸಲಾರ್' ಬಳಿಕ ಕೊಂಚ ವಿರಾಮ ಪಡೆದು ನೀಲ್ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಪ್ಲ್ಯಾನ್ ಮಾಡಲಾಗ್ತಿದೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ನೀಲ್ ನಿರ್ದೇಶನದಲ್ಲಿ ನಟಿಸಲು ತಾರಕ್ ಕೂಡ ಕಾಯುತ್ತಿದ್ದಾರೆ.

'KGF' ಸಿನಿಮಾ ಹಿಟ್ ಆಗುತ್ತಿದ್ದಂತೆ ಕರೆ ಮಾಡಿ ಪ್ರಶಾಂತ್ ನೀಲ್ ಜೊತೆ ಜ್ಯೂ. ಎನ್‌ಟಿಆರ್ ಮಾತನಾಡಿದ್ದರು. ಅಭಿನಂದನೆ ತಿಳಿಸಿದ್ದರು. ಜೊತೆಗೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ ಬಹಳ ಹಿಂದೆಯೇ ಸಿನಿಮಾ ಘೋಷಣೆ ಆಗಿತ್ತು. ಬಳಿಕ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ NTR31 ಸಿನಿಮಾ ಸೆಟ್ಟೇರುವುದು ಕೊಂಚ ತಡವಾಗಿತ್ತು.
ಇನ್ನು ಕ್ರೇಜಿ ಪ್ರಾಜೆಕ್ಟ್‌ನಲ್ಲಿ ಯಾರು ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಕನ್ನಡ ನಟಿ ರುಕ್ಮಿಣಿ ವಸಂತ್ ಈ ಬಾರಿ ತಾರಕ್ ಜೋಡಿಯಾಗಿ ನಟಿಸುವ ಸಾಧ್ಯತೆಯಿದೆ. ಈಗಾಗಲೇ ಈ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ. ಕನ್ನಡದ ಹಿಟ್ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಈಗಾಗಲೇ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಸಿನಿಮಾಗಳಲ್ಲಿ ನಟಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದೆಲ್ಲದರ ನಡುವೆ NTR31 ಚಿತ್ರಕ್ಕೆ ನಾಯಕಿ ಆಗ್ತಾರೆ ಎನ್ನಲಾಗ್ತಿದೆ.
'ಬೀರ್‌ಬಲ್' ಚಿತ್ರದಿಂದ ರುಕ್ಮಿಣಿ ಚಿತ್ರರಂಗಕ್ಕೆ ಬಂದರು. ಕಳೆದ ವರ್ಷ 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಮೋಡಿ ಮಾಡಿದ್ದರು. ಗಣೇಶ್ ಜೊತೆ 'ಬಾನ ದಾರಿಯಲ್ಲಿ' ಸುತ್ತಾಡಿದ್ದರು. ಇದೀಗ ಶ್ರೀಮುರಳಿ ಜೋಡಿಯಾಗಿ 'ಬಘೀರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೂ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಇನ್ನು ಶಿವಣ್ಣನ ಜೊತೆ 'ಭೈರತಿ ರಣಗಲ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.
ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆ 'ಏಸ್' ಎನ್ನುವ ಚಿತ್ರದಲ್ಲಿ ರುಕ್ಮಿಣಿ ನಟಿಸಿದ್ದಾರೆ. ಶಿವಕಾರ್ತಿಕೇಯನ್ ಜೊತೆ ಒಂದು ಚಿತ್ರದಲ್ಲಿ ಸದ್ಯ ಬಣ್ಣ ಹಚ್ಚಿದ್ದಾರೆ. ಹೀಗೆ ಕಾಲಿವುಡ್, ಟಾಲಿವುಡ್‌ನಲ್ಲಿ ಬೆಂಗಳೂರು ಬೆಡಗಿಯ ಕ್ರೇಜ್ ಶುರುವಾಗಿದೆ. ಟಾಲಿವುಡ್ ಯಂಗ್ ಟೈಗರ್ ಜೊತೆ ನಟಿಸೋ ಅವಕಾಶ ಸಿಕ್ಕರೆ ಅದೃಷ್ಟವೇ ಸರಿ. ಮುಂದೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳ ಬಾಗಿಲು ತೆರೆದಂತೆಯೇ ಸರಿ.
ಸಾಮಾನ್ಯವಾಗಿ ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳಿಗೆ ಸ್ಟಾರ್ ನಟ, ನಟಿಯರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಪಾತ್ರಕ್ಕೆ ಸೂಕ್ತ ಎನಿಸುವವರನ್ನು ಬಳಸಿಕೊಳ್ಳುತ್ತಾರೆ. ರುಕ್ಮಿಣಿ ವಸಂತ್ ಕನ್ನಡದ ಹುಡುಗಿ, ಈಗಾಗಲೇ 'ಬಘೀರ' ಚಿತ್ರದಲ್ಲಿ ಆಕೆಯ ನಟನೆಯನ್ನು ನೋಡಿದ್ದಾರೆ. ಹಾಗಾಗಿ ಆಕೆ NTR31 ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











