ರಶ್ಮಿಕಾಗೆ ಟಫ್ ಕಾಂಪಿಟೇಷನ್: ಟಾಲಿವುಡ್ ಪವರ್ ಸ್ಟಾರ್ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆ
ಪರಭಾಷಾ ಚಿತ್ರರಂಗಗಳಲ್ಲೂ ಈಗ ಕನ್ನಡ ನಟಿಯರ ಹವಾ ಜೋರಾಗಿದೆ. ರಶ್ಮಿಕಾ ಮಂದಣ್ಣ ನಂತರ ಶ್ರೀಲೀಲಾಗೂ ಟಾಲಿವುಡ್‌ನಲ್ಲಿ ಕ್ರೇಜ್ ಶುರುವಾಗಿದೆ. ಸ್ಟಾರ್ ಹೀರೊಗಳೇ ತಮ್ಮ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಸದ್ಯ ಆರೇಳು ಸಿನಿಮಾಗಳು ಬೆಂಗಳೂರು ಬೆಡಗಿ ಕೈಯಲ್ಲಿದೆ. ಇದೀಗ ಸೂಪರ್ ಸ್ಟಾರ್‌ಗಳ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗ್ತಿದ್ದಾರೆ.
'ಪೆಳ್ಳಿಸಂದD' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ರವಿತೇಜಾ ಜೋಡಿಯಾಗಿ ಧಮಾಕ ಸಿನಿಮಾದಲ್ಲಿ ನಟಿಸಿ ಸಕ್ಸಸ್ ಕಂಡಿದ್ದಾರೆ. ಇದೀಗ ನಿಧಾನವಾಗಿ ತೆಲುಗಿನ ಫಸ್ಟ್ ಗ್ರೇಡ್ ನಾಯಕ ನಟರ ಜೊತೆ ನಟಿಸೋ ಅವಕಾಶಗಳು ಅರಸಿ ಬರ್ತಿದೆ. ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಶ್ರೀ ಹೆಸರು ಕೇಳಿಬರ್ತಿತ್ತು. ಇದೀಗ ಪವರ್ ಸ್ಟಾರ್ ಸಿನಿಮಾ ಪಕ್ಕಾ ಆಗಿದೆ.

ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಶ್ರೀಲೀಲಾ ನಟಿಸೋದು ಪಕ್ಕಾ ಆಗಿದ್ದು ಈಗಾಗಲೇ ಶೂಟಿಂಗ್‌ನಲ್ಲೂ ಭಾಗವಹಿಸಿದ್ದಾರೆ. ಮುಂದಿನ ಆಂಧ್ರ ವಿಧಾನಸಭೆ ಚುನಾವಣೆ ಮೇಲೆ ಪವರ್ ಸ್ಟಾರ್ ಕಣ್ಣಿಟ್ಟಿದ್ದಾರೆ. ಹಾಗಾಗಿ ಬಹಳ ಬೇಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. 'ಉಸ್ತಾದ್ ಭಗತ್ ಸಿಂಗ್' ಶೂಟಿಂಗ್ ಭರದಿಂದ ಸಾಗಿದೆ.
ಇತ್ತೀಚೆಗೆ ಕನ್ನಡ ನಟಿಯರು ಹಲವರು ತೆಲುಗು ಸಿನಿಮಾಗಳಲ್ಲಿ ನಟಿಸ್ತಿದ್ಧಾರೆ. ಆದರೆ ರಶ್ಮಿಕಾ ಮಂದಣ್ಣ ಮಾತ್ರ ಮಹೇಶ್ ಬಾಬು, ಅಲ್ಲು ಅರ್ಜುನ್‌ರಂತಹ ಫಸ್ಟ್ ಗ್ರೇಡ್ ನಟರ ಜೊತೆ ನಟಿಸಿದ್ದಾರೆ. ರವಿತೇಜಾ, ನಿತಿನ್‌ರಂತಹ ಸೆಕೆಂಡೆ ಗ್ರೇಟ್ ನಟರ ಸಿನಿಮಾಗಳಲ್ಲಿ ನಟಿಸ್ತಿದ್ದ ಶ್ರೀಲೀಲಾ ಈಗ ಪವನ್ ಕಲ್ಯಾಣ್, ಬಾಲಕೃಷ್ಣರಂತಹ ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆ ಆಗ್ತಿದ್ದಾರೆ. ಇತ್ತೀಚೆಗೆ ಬಾಲಕೃಷ್ಣ ನಟನೆಯ 108ನೇ ಸಿನಿಮಾ ಚಿತ್ರೀಕರಣದಲ್ಲಿ 'ಕಿಸ್' ಬೆಡಗಿ ಭಾಗಿ ಆಗಿದ್ದರು.
ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿರುವುದು ವಿಶೇಷ. ಇನ್ನು ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಚಿತ್ರದಲ್ಲೂ ಈಕೆ ನಟಿಸೋದು ಬಹುತೇಕ ಕನ್ಫರ್ಮ್ ಆಗಿದೆ. ಅಲ್ಲಿಗೆ ರಶ್ಮಿಕಾಗೆ ಟಫ್ ಕಾಂಪಿಟೇಟರ್ ಬಂದಾಯ್ತು ಅಂತ ಟಾಲಿವುಡ್ ಮಾತನಾಡಿಕೊಳ್ತಿದೆ.

'ಉಸ್ತಾದ್ ಭಗತ್ ಸಿಂಗ್' ತಮಿಳಿನ 'ತೇರಿ' ಸಿನಿಮಾ ರೀಮೆಕ್ ಎನ್ನಲಾಗುತ್ತಿದೆ. ಈಗಾಗಲೇ ಫೋಟೊಶೂಟ್ ಮಾಡಿಸಿ, ಪೋಸ್ಟರ್‌ಗಳನ್ನು ಕೂಡ ಚಿತ್ರತಂಡ ರಿಲೀಸ್ ಮಾಡಿದೆ. ಈ ಹಿಂದೆ ಪವನ್ ಕಲ್ಯಾಣ್ ನಟನೆಯ 'ಗಬ್ಬರ್ ಸಿಂಗ್' ಚಿತ್ರವನ್ನು ಹರೀಶ್ ಶಂಕರ್ ನಿರ್ದೇಶಿಸಿ ಗೆದ್ದಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಬರ್ತಿರೋ ಈ ಸಿನಿಮಾ ಈಗ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಪವರ್ ಸ್ಟಾರ್ ಮತ್ತೊಮ್ಮೆ ಪೊಲೀಸ್ ಆಫೀಸರ್ ಅವತಾರದಲ್ಲಿ ದರ್ಶನ ಕೊಡುತ್ತಿದ್ದಾರೆ.
'ಅನಗನಗ ಒಕರೋಜು', ನಿತಿನ್ ನಟನೆಯ 32 ಸಿನಿಮಾ, ಜನಾರ್ಜನ ರೆಡ್ಡಿ ಪುತ್ರ ಕಿರೀಟಿ ನಟನೆಯ 'ಜ್ಯೂನಿಯರ್', ಬೋಯಪಾಟಿ ಶ್ರೀನು ನಿರ್ದೇಶನದ ಸಿನಿಮಾ ಹೀಗೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸದ್ಯದ ಮಟ್ಟಿಗೆ ಶ್ರೀಲೀಲಾ ಕ್ರೇಜ್ ರಶ್ಮಿಕಾನ ಮೀರಿಸುವಂತಿದೆ. ಸದ್ಯ ಕೈಯಲ್ಲಿರುವ ಸಿನಿಮಾಗಳು ಗೆದ್ದರೆ ಆಕೆ ಹವಾ ಮತ್ತಷ್ಟು ಹೆಚ್ಚಾಗಲಿದೆ. 'ಬೈಟು ಲವ್' ನಂತರ ಶ್ರೀ ಕನ್ನಡದ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಆಗ್ತಾರಾ? ಅನ್ನುವ ಅನುಮಾನ ಕೆಲವರಿಗೆ ಶುರುವಾಗಿದೆ.


Click it and Unblock the Notifications











