ಹೀಗೆ ಆದರೆ ಆಗಲ್ಲ ; ಶ್ರೀಲೀಲಾಗೆ ಆಯಿತು ಕೊನೆಗೂ ಜ್ಞಾನೋದಯ...!
ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿದವರಲ್ಲಿ ಶ್ರೀಲೀಲಾ ಕೂಡಾ ಒಬ್ಬರು ಮತ್ತು ಪ್ರಮುಖರು. ರಶ್ಮಿಕಾ ಮಂದಣ್ಣ ನಂತರ ಒಂದಾದ ಮೇಲೊಂದರಂತೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆ ಕೂಡ ಇವರದ್ದೇ.
ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ.. ಅಬ್ಬಬ್ಬಾ.. ಒಂದಾ, ಎರಡಾ. ಕೇವಲ ಒಂದು-ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದವರು ಇವರು.

ಆದರೆ.. ಎಲ್ಲ ಸಿನಿಮಾಗಳನ್ನು ಪ್ರೇಕ್ಷಕರು ಅಪ್ಪಿಕೊಳ್ಳಬೇಕು ಒಪ್ಪಿಕೊಳ್ಳಬೇಕು ಎಂಬ ನಿಯಮ ಇಲ್ಲ.ಹೀಗಾಗಿಯೇ ವರ್ಷಕ್ಕೆ ನಾಲ್ಕು ಸಲ ಬೆಳ್ಳಿತೆರೆಯಲ್ಲಿ ಶ್ರೀಲೀಲಾ ಅವರನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಇವರನ್ನ ಕಡೆಗಣಿಸಲು ಆರಂಭ ಮಾಡಿದರು.
ಅದೃಷ್ಟವಶಾತ್ ಪ್ರೇಕ್ಷಕರ ಈ ಅಭಿಪ್ರಾಯ ಶ್ರೀಲೀಲಾ ತನಕ ತಲುಪಿದಂತೆ ಇದೆ. ಹೀಗಾಗಿಯೇ ಎಚ್ಚೆತ್ತುಕೊಂಡ ಶ್ರೀಲೀಲಾ ಸದ್ಯಕ್ಕೆ ಅಳೆದು ತೂಗಿ ಚಿತ್ರಗಳನ್ನ ಮಾಡ್ತಿದ್ದಾರೆ. ಸಿಕ್ಕ ಸಿಕ್ಕ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಕಥೆ ಕಡೆ ಗಮನ ಕೊಡ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕ ದಿನಗಳ ನಂತರ ಶ್ರೀಲೀಲಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ ಅದು ಕನ್ನಡ ಅಲ್ಲ ಬದಲಿಗೆ ತೆಲುಗು ಸಿನಿಮಾ ಅನ್ನುವುದು ಈ ಕ್ಷಣದ ಬ್ರೇಕಿಂಗ್ ನ್ಯೂಸ್

ಹೌದು. ಸರಣಿ ಸೋಲುಗಳಿಂದ ನೊಂದು-ಬೆಂದು ಹೋಗಿರುವ ಶ್ರೀಲೀಲಾ ಸದ್ಯಕ್ಕೆ ಇನ್ನೊಂದು ತೆಲುಗು ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಪಕ್ಕದ ಮನೆಯ ಮಾಸ್ ಮಹಾರಾಜ ರವಿತೇಜಾ ನಾಯಕ. ಶ್ರೀಲೀಲಾ ತೆಲುಗು ಉದ್ಯಮವನ್ನ ಪ್ರವೇಶಿಸಿದ್ದು ಇದೇ ರವಿತೇಜಾ ಅಭಿನಯದ ಚಿತ್ರದ ಮೂಲಕ ಅನ್ನುವುದು ನಿಮಗೆ ಗೊತ್ತಿರಲಿ.
ಭಾನು ಬೋಗವರಪು ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ. ಇನ್ನೂ ಇದು ರವಿತೇಜ ಅಭಿನಯದ 75ನೇ ಚಿತ್ರ ಅನ್ನುವುದು ಇನ್ನೊಂದು ವಿಶೇಷ. ಉಳಿದಂತೆ ಚಿತ್ರರಂಗದಿಂದ ಅಂತರವನ್ನ ಕಾಪಾಡಿಕೊಳ್ಳಲು ವಿದ್ಯಾಭ್ಯಾಸ ಪ್ರಮುಖ ಕಾರಣ ಅನ್ನುವುದು ಕೇಳಿ ಬರುತ್ತಿರುವ ಮತ್ತೊಂದು ಮಾತು. ಎಂಬಿಬಿಎಸ್ ಪರೀಕ್ಷೆ ಹಿನ್ನೆಲೆ ಶ್ರೀಲೀಲಾ ಆಕ್ಟಿಂಗ್‌ಗೆ ಅಲ್ಪ ವಿರಾಮ ಹಾಕಿದ್ದರೇ ಹೊರತು ಸತತ ಸೋಲುಗಳಿಂದ ಅಲ್ಲ ಅನ್ನುವುದು ಇವರ ಅಭಿಮಾನಿಗಳು ಮಾಡುವ ವಾದ.

ಒಟ್ನಲ್ಲಿ ಮಾಸ್ ಮಹಾರಾಜ ರವಿತೇಜಾ ಅಭಿನಯದ ಚಿತ್ರದ ಮೂಲಕ, ಟಾಲಿವುಡ್ ಪ್ರವೇಶಿಸಿ ಗೆಲುವು ಮತ್ತು ಸೋಲನ್ನ ಅನುಭವಿಸಿರುವ ಶ್ರೀಲೀಲಾ ಈಗ ಮತ್ತೊಮ್ಮೆ ರವಿತೇಜಾ ಅಭಿನಯದ ಚಿತ್ರದ ಮೂಲಕವೇ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಳ್ಳಲು ಮುಂದಾಗಿದ್ದಾರೆ. ಧಮಾಕ ಚಿತ್ರದ ಮೂಲಕ ತೆಲುಗು ಸಿನಿ ರಸಿಕರ ಹೃದಯಕ್ಕೆ ಕೊಳ್ಳಿ ಇಟ್ಟ ಶ್ರೀಲೀಲಾ ಈ ಬಾರಿ ಮತ್ತೊಮ್ಮೆ ರವಿತೇಜಾ ಜೊತೆ ಸೇರಿ ಮ್ಯಾಜಿಕ್ ಮಾಡ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ. ಇದೇ ಕೊನೆಯ ಅವಕಾಶ ಈ ಬಾರಿಯೂ ಶ್ರೀಲೀಲಾ ಸೋತರೆ ಮರಳಿ ಕನ್ನಡ ಚಿತ್ರರಂಗಕ್ಕೆ ಕಿಸ್ ಕ್ವೀನ್ ಬರಬೇಕಾಗುತ್ತೆ ಅನ್ನುವ ಅಭಿಪ್ರಾಯ ಕೂಡ ಇದೇ ಸಮಯದಲ್ಲಿ ವ್ಯಕ್ತವಾಗುತ್ತಿದೆ. Any Ways Good Luck Sreeleela...


Click it and Unblock the Notifications











