Boys Hostel: ಕನ್ನಡದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತೆಲುಗಿನಲ್ಲಿ ಬಾಯ್ಸ್ ಹಾಸ್ಟೆಲ್!
ಕನ್ನಡದ ಬ್ಲಾಕ್‌ಬಸ್ಟರ್ ಚಿತ್ರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಇತ್ತೀಚೆಗೆ ಸಿನಿರಸಿಕರನ್ನು ಚಿತ್ರಮಂದಿರಗಳಿಗೆ ಎಳೆದು ತಂದ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ವಯಸ್ಸಿನ ಅಂತರವಿಲ್ಲದೇ, ಯಾವುದೇ ಸ್ಟಾರ್ ನಟರಿಲ್ಲದೆ ಹೊಸಬರೇ ಸೇರಿ ಮಾಡಿರುವ ಚಿತ್ರ ಜನರನ್ನು ರಂಜಿಸಿದೆ. ಈಗ ಇದೇ ಚಿತ್ರ ತೆಲುಗಿಗೆ ಡಬ್ ಆಗಿದೆ. ಆಗಸ್ಟ್ 26 ರಂದು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರದ ಶೀರ್ಷಿಕೆಯನ್ನು ಬಾಯ್ಸ್ ಹಾಸ್ಟೆಲ್ ಎಂದು ಬದಲಿಸಲಾಗಿದೆ.
ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಚಾಯ್ ಬಿಸ್ಕೆಟ್ ಫಿಲ್ಮ್ಸ್ ಕನ್ನಡದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರವನ್ನು ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಆಗಿ ಆಗಸ್ಟ್ 26 ರಂದು ಬಿಡುಗಡೆ ಮಾಡಲಿದೆ. ಟಾಲಿವುಡ್‌ನ ಪ್ರಮುಖ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಅನ್ನಪೂರ್ಣ ಸ್ಟುಡಿಯೋಸ್ ಚೈ ಬಿಸ್ಕೆಟ್ ಫಿಲ್ಮ್ಸ್‌ನ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ.

ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನನಕ್ಕೆ ಜನ ಜೈಕಾರ ಹಾಕಿದ್ದರು. ಹೊಸ ಕಲಾವಿದರಾದ ಪ್ರಜ್ವಲ್ ಬಿಪಿ, ಮಂಜುನಾಥ್ ನಾಯ್ಕ, ರಾಕೇಶ್ ರಾಜ್ ಕುಮಾರ್, ಶ್ರೀವತ್ಸ ಮತ್ತು ತೇಜಸ್ ಜಯಣ್ಣ ಅರಸ್ ಸೇರಿ ಹಲವರು ನಟಿಸಿದ್ದರು. ರಿಷಬ್ ಶೆಟ್ಟಿ, ಪವನ್ ಕುಮಾರ್ ಮತ್ತು ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರೇ ತುಂಬಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಬೆಂಬಲಕ್ಕೆ ರಿಷಬ್ ಶೆಟ್ಟಿ, ರಾಜ್. ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಚಿತ್ರತಂಡದ ಬೆಂಬಲಕ್ಕೆ ನಿಂತರು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವು 500ಕ್ಕೂ ಹೆಚ್ಚು ರಂಗಭೂಮಿ ಕಲಾವಿದರನ್ನು ಬೆಳ್ಳಿ ಪರದೆಯ ಮೇಲೆ ಪರಿಚಯಿಸಿದ ಕಾರಣಕ್ಕೆ ನೆನಪು ಮಾಡಿಕೊಳ್ಳಬೇಕಿದೆ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರು ವರುಣ್ ಗೌಡ, ಪ್ರಜ್ವಲ್ ಬಿ.ಪಿ. ಮತ್ತು ಅರವಿಂದ್ ಎಸ್. ಕಶ್ಯಪ್ ಅವರೊಂದಿಗೆ ಗುಲ್ಮೊಹರ್ ಫಿಲ್ಮ್ಸ್ ಮತ್ತು ವರಣ್ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

ಕಳೆದ ತಿಂಗಳು ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವು ಬ್ಲಾಕ್‌ಬಸ್ಟರ್ ಆಗಿದೆ. ಚಿತ್ರವು ಈಗಾಗಲೇ 20 ಕೋಟಿಗೂ ಅಧಿಕ ಹಣ ಗಳಿಸಿದೆ ಮತ್ತು ಇನ್ನೂ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ತೆಲುಗಿಗೆ ಡಬ್ ಮಾಡುವ ಬಗ್ಗೆ ಈ ಹಿಂದೆಯೇ ಚಿತ್ರತಂಡ ಘೋಷಿಸಿತ್ತು. ಆದರೆ, ಡೈಲಾಗ್‌ಗಳು ಬಹಳ ಸ್ಪೀಡ್ ಇರುವುದರಿಂದ ಬೇರೆ ಭಾಷೆಗೆ ಡಬ್ ಮಾಡುವುದು ಕಷ್ಟ ಎನ್ನಲಾಗುತ್ತಿತ್ತು. ಈಗ ಎಲ್ಲಾ ಅಡೆತಡೆಗಳನ್ನು ದಾಟಿ ತೆಲುಗಿಗೆ ಡಬ್ ಆಗಿದ್ದು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಅನ್ನಪೂರ್ಣ ಸ್ಟುಡಿಯೋಸ್ ಮತ್ತು ಚಾಯ್ ಬಿಸ್ಕೆಟ್ ಫಿಲ್ಮ್ಸ್ ಒಟ್ಟಾಗಿ ಈ ಚಿತ್ರವನ್ನು ತೆಲುಗು ಪ್ರೇಕ್ಷಕರಿಗೆ ತಲುಪಿಸಲಿವೆ. ತೆಲುಗಿನಲ್ಲಿ ಬಾಯ್ಸ್ ಹಾಸ್ಟೆಲ್ ಎಂದು ಹೆಸರಿಡಲಾಗಿರುವ ಈ ಚಿತ್ರವು ಆಗಸ್ಟ್ 26 ರಂದು ತೆರೆಗೆ ಬರಲಿದೆ. ಬಿಡುಗಡೆ ದಿನಾಂಕದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಹಾಸ್ಟೆಲ್‌ನಲ್ಲಿ ಸಿನಿಮಾ ಗೀಳಿನ ಯುವಕನೊಬ್ಬ ಶಾರ್ಟ್ ಫಿಲ್ಮ್ ಮಾಡಬೇಕು ಎಂದುಕೊಳ್ಳುವುದು, ಲೈವ್ ಆಗಿ ನಡೆಯುವುದನ್ನೇ ಶೂಟ್ ಮಾಡಬೇಕು ಎಂದುಕೊಳ್ಳುವುದು, ವಾರ್ಡನ್ ಸತ್ತಂತೆ ನಟಿಸಲು ಆರಂಭಿಸಿದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಈ ಸಿನಿಮಾದ್ದು. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಸುರೇಶ್ ಎಂ ಅವರ ಸಂಕಲನ ಚಿತ್ರಕ್ಕಿದೆ.


Click it and Unblock the Notifications











