ತೆಲುಗು ಚಿತ್ರಗಳಲ್ಲಿ ಕನ್ನಡ ಡೈಲಾಗ್ಸ್.. ಏನಿದರ ಮರ್ಮ.. ಸ್ಯಾಂಡಲ್‌ವುಡ್ ಮಂದಿ ಇಲ್ನೋಡಿ
ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಇಂದು ನಿನ್ನೆಯದಲ್ಲ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳ ಆರ್ಭಟ ಹೆಚ್ಚುತ್ತಲೇ ಇದೆ. ಈ ಬಾರಿ ಸಂಕ್ರಾಂತಿಗೆ ಯಾವುದೇ ದೊಡ್ಡ ಕನ್ನಡ ಸಿನಿಮಾ ಬಿಡುಗಡೆ ಆಗಿಲ್ಲ. ಬದಲಿಗೆ ಪರಭಾಷೆಯ ದೊಡ್ಡ ಚಿತ್ರಗಳು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿವೆ.
ಹಿಂದಿ ಮಾತ್ರವಲ್ಲ ತೆಲುಗು, ತಮಿಳು ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್ ಇದೆ. 'ಪುಷ್ಪ'-2 ಸಿನಿಮಾ ಟಿಕೆಟ್ 1500 ರೂ.ಗೆ ಸೇಲ್ ಆಗಿದ್ದೇ ಅದಕ್ಕೆ ದೊಡ್ಡ ಉದಾಹರಣೆ. 'ಜನನಾಯಗನ್' ಸಿನಿಮಾ ನೋಡಿ ಕೂಡ 1500 ರೂ. ಕೊಟ್ಟು ಇಲ್ಲಿ ಟಿಕೆಟ್ ಖರೀದಿಸಿದವರು ಇದ್ದಾರೆ. ಇದೆಲ್ಲದರ ನಡುವೆ ಈಗ ತೆಲುಗು ಸಿನಿಮಾಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಪ್ರಯತ್ನ ಶುರುವಾಗಿದೆ. ಕನ್ನಡ ಪ್ರೇಕ್ಷಕರನ್ನು ಸೆಳೆಯಲು ಇಂತಾದೊಂದು ಮಸಲತ್ತು ಮಾಡ್ತಿದ್ದಾರೆ ಎನ್ನುವ ಕೆಲವರ ವಾದ.

ತಿಂಗಳ ಹಿಂದೆ ಬಂದಿದ್ದ 'ಅಖಂಡ'-2 ಚಿತ್ರದಲ್ಲಿ ಬಾಲಕೃಷ್ಣ "ಕನ್ನಡವೇ ಸತ್ಯ.. ಕನ್ನಡವೇ ನಿತ್ಯ" ಎಂದು ಡೈಲಾಗ್ ಹೊಡೆದಿದ್ದು ಗೊತ್ತೇಯಿದೆ. ದೊಡ್ಮನೆ, ಅಣ್ಣಾವ್ರ ಬಗ್ಗೆ ಮಾತಾಡಿದ್ದರು. ಅದೇ ಪ್ರಯತ್ನ ಈಗ 'ಮನ ಶಂಕರವರಪ್ರಸಾದ್ ಗಾರು' ಹಾಗೂ 'ಭರ್ತ ಮಹಾಶಯಲಕು ವಿಜ್ಞಪ್ತಿ' ಚಿತ್ರಗಳಲ್ಲಿ ಮಾಡಿದ್ದಾರೆ. ಕನ್ನಡ ಡೈಲಾಗ್ಸ್ ಹೇಳಿ ಗಮನ ಸೆಳೆಯುವ ಪ್ರಯತ್ನ ಮಾಡಿರುವುದು ವೈರಲ್ ಆಗ್ತಿದೆ.
ಚಿರಂಜೀವಿ ಹಾಗೂ ನಯನತಾರಾ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ವೆಂಕಿ ಗೌಡ ಎಂಬ ಕರ್ನಾಟಕ ಹಿನ್ನಲೆ ಇರುವ ವ್ಯಕ್ತಿಯ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡದಲ್ಲೇ ಡೈಲಾಗ್ ಹೊಡೆದಿದ್ದಾರೆ. ಅದು ಸಹಜವಾಗಿಯೇ ವೈರಲ್ ಆಗಿದೆ. ಕೊನೆಯ 20 ನಿಮಿಷ ಸಾಕಷ್ಟು ಕನ್ನಡ ಡೈಲಾಗ್ಸ್ ಇರುವುದನ್ನು ನೋಡಬಹುದು.
ರವಿತೇಜಾ ನಟನೆಯ 'ಭರ್ತ ಮಹಾಶಯಲಕು ವಿಜ್ಞಪ್ತಿ' ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲೇ ಸಿನಿಮಾ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸದ್ಯ ಆ ಚಿತ್ರದಲ್ಲಿ ಕೂಡ ರವಿತೇಜಾ "ರಿಷಬ್ ಶೆಟ್ಟಿ, ಯಶ್, ಕೆಜಿಎಫ್, ಈ ಸಲ ಕಪ್ ನಮ್ದೇ" ಅಂತ ಕನ್ನಡದಲ್ಲೇ ಡೈಲಾಗ್ ಹೇಳಿರುವುದನ್ನು ನೋಡಬಹುದು.
ಸ್ಯಾಂಡಲ್‌ವುಡ್ ಮಂದಿ ಒಳ್ಳೆ ಸಿನಿಮಾಗಳನ್ನು ಮಾಡದೇ ಇದ್ದರೆ ಹೀಗೆ ಪರಭಾಷಾ ಮಂದಿ ಕನ್ನಡ ಹೆಸರೇಳಿ ಹಣ ಮಾಡುತ್ತಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಒಂದು ಒಳ್ಳೆ ಸಿನಿಮಾ ಬಿಡುಗಡೆ ಮಾಡೋಕೆ ಸಾಧ್ಯವಿಲ್ಲ ಅಂದ್ರೆ ಹೇಗೆ? 4 ವರ್ಷಕ್ಕೆ ಒಂದು 'ಟಾಕ್ಸಿಕ್' ಸಿನಿಮಾ ನೋಡ್ತಾ ಕೂತ್ರೆ ವರ್ಷ ಪೂರ್ತಿ ಪರಭಾಷಾ ಸಿನಿಮಾಗಳು ಬಂದು ಇಲ್ಲಿ ದುಡ್ಡು ಮಾಡ್ಕೊಂಡು ಹೋಗ್ತಾರೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ವರ್ಷದ ಎರಡು ವಾರಗಳಲ್ಲಿ ಒಂದೇ ಒಂದು ದೊಡ್ಡ ಸಿನಿಮಾ ಬರಲಿಲ್ಲ. ಸಂಕ್ರಾಂತಿ ಅಂದ್ರೆ ಕನ್ನಡ ಚಿತ್ರರಂಗ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತದೆ. ಹಲವು ವರ್ಷಗಳಿಂದ ಸಂಕ್ರಾಂತಿಗೆ ಯಾವುದೇ ಸ್ಟಾರ್ ನಟನ ಸಿನಿಮಾ ಬಿಡುಗಡೆ ಆಗಲಿಲ್ಲ. ಈ ವರ್ಷ 'ಮ್ಯಾಂಗೋ ಪಚ್ಚ' ಚಿತ್ರ ರಿಲೀಸ್ ಮಾಡೋದಾಗಿ ಹೇಳಿದ್ದರು. ಆದರೆ ಬಳಿಕ ಅದನ್ನು ಮುಂದೂಡಲಾಗಿದೆ. ತಮಿಳಿನ 'ಜನನಾಯಗನ್' ಸಿನಿಮಾ ರಿಲೀಸ್ ತಡವಾಗುತ್ತಿದೆ. ಇನ್ನುಳಿದಂತೆ 'ಪರಾಶಕ್ತಿ' ಚಿತ್ರ ಬಿಡುಗಡೆಯಾಗಿದೆ.
ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಜೊತೆಗೆ 'ಮನ ಶಂಕರವರಪ್ರಸಾದ್ ಗಾರು' ಹಾಗೂ 'ಭರ್ತ ಮಹಾಶಯಲಕು ವಿಜ್ಞಪ್ತಿ' ಸಿನಿಮಾಗಳು ರಾಜ್ಯದಲ್ಲಿ ದೊಡ್ಡದಾಗಿ ಬಿಡುಗಡೆ ಆಗಿವೆ. ಅನಿಲ್ ರಾವಿಪುಡಿ ನಿರ್ದೇಶನದ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











