"ಕೋಮಾದಲ್ಲಿದಾಗ ಮೈ ಮುಟ್ಟುತ್ತಿದ್ರು, ರಾತ್ರಿ 200 ರೂ.ಗೆ ಬರ್ತೀಯಾ ಅಂದ್ರೆ, ಗೊತ್ತಿಲ್ದೆ ಬರ್ತೀನಿ ಎಂದೆ": ಕೀರ್ತಿ ಭಟ್
ಕನ್ನಡ ನಟಿಯರು ಈಗ ಪರಭಾಷೆಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇನ್ನು ಕನ್ನಡ ಕಿರುತೆರೆ ನಟಿಯರಿಗೆ ತೆಲುಗು, ತಮಿಳಿನಲ್ಲಿ ಒಳ್ಳೆ ಅವಕಾಶಗಳು ಸಿಗುತ್ತಿವೆ. ಮಂಗಳೂರು ಹುಡುಗಿ ಕೀರ್ತಿ ಕೇಶವ್ ಭಟ್ ಸದ್ಯ ತೆಲುಗು ಕಿರುತೆರೆಯಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದಾರೆ. ತಮ್ಮ ಜೀವನದಲ್ಲಾದ ಕಹಿ ಘಟನೆಗಳ ಬಗ್ಗೆ ಆಕೆ ಸಾಕಷ್ಟು ಬಾರಿ ಹೇಳಿದ್ದಾರೆ.
ಅಪಘಾತವೊಂದರಲ್ಲಿ ಕೀರ್ತಿ ಭಟ್ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದರು. ತಾವು ಕೂಡ ಕೋಮಾಗೆ ಹೋಗಿ ಬಹಳ ನೋವು ಅನುಭವಿಸಿದ್ದರ ಬಗ್ಗೆ ಮಾತನಾಡಿದ್ದಾರೆ. ಸದ್ಯ ತೆಲುಗು ಸಂದರ್ಶನವೊಂದರಲ್ಲಿ ತಾವು ಕೋಮಾಗೆ ಹೋಗಿದ್ದ ಸಮಯದಲ್ಲಿ ಏನೆಲ್ಲಾ ಆಯಿತು ಎನ್ನುವುದನ್ನು ಕೀರ್ತಿ ಭಟ್ ವಿವರಿಸಿದ್ದಾರೆ.

ಬಿಗ್ ಬಾಸ್ ತೆಲುಗು ಸೀಸನ್ 6 ಸ್ಪರ್ಧಿಯಾಗಿಯೂ ಕೀರ್ತಿ ಭಟ್ ಭಾಗವಹಿಸಿದ್ದರು. ಈ ಶೋನಿಂದ ಆಕೆಗೆ ಬಹಳ ಜನಪ್ರಿಯತೆ ಸಿಕ್ಕಿದೆ. ಮೂಲತಃ ಮಂಗಳೂರಿನವರಾದ ಕೀರ್ತಿ ಭಟ್ 2012ರಲ್ಲಿ ಬಣ್ಣದಲೋಕಕ್ಕೆ ಕಾಲಿಟ್ಟರು. ತೆಲುಗಿನ 'ಮನಸಿಚ್ಚಿ ಚೂಡು' ಧಾರಾವಾಹಿಯಲ್ಲಿ ತೆಲುಗು ವೀಕ್ಷಕರ ಗಮನ ಸೆಳೆದರು. 2016ರಲ್ಲಿ ನಡೆದ ಅಪಘಾತ ಆಕೆಯ ಜೀವನವನ್ನು ಬದಲಿಸಿತ್ತು. ಆ ನೋವು ಮರೆಯಲು ನಟನೆ ಆರಂಭಿಸಿದ್ದಾಗಿ ಆಕೆ ಹೇಳಿಕೊಂಡಿದ್ದರು.
ಕಾರ್ ಅಪಘಾತದಲ್ಲಿ ಕೀರ್ತಿ ಭಟ್ ತಮ್ಮ ಅಣ್ಣ, ಅತ್ತಿಗೆ, ಅಪ್ಪ-ಅಮ್ಮ, ಸೋದರ ಸೊಸೆಯನ್ನು ಕಳೆದುಕೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಕೂಡ ಕೆಲವು ಘಟನೆಗಳ ಬಳಿಕ ಕೊನೆಯುಸಿರೆಳೆದಿದ್ದರು. ಇನ್ನು ಕೀರ್ತಿ ಭಟ್ ಒಂದು ತಿಂಗಳ ಕಾಲ ಕೋಮಾದಲ್ಲಿರುವಂತೆ ಆಯಿತು. ಬಳಿಕ ಚೇತರಿಸಿಕೊಂಡಿದ್ದರು. ಬಳಿಕ 300 ರೂಪಾಯಿ ಇಟ್ಟುಕೊಂಡು ತಾನು ಬೆಂಗಳೂರಿಗೆ ಬಂದಿದ್ದಾಗಿ ಹೇಳಿದ್ದರು.

ತಾವು ಕೋಮಾದಲ್ಲಿದಾಗ ಆದ ಕಹಿ ಅನುಭವದ ಬಗ್ಗೆ ಈಗ ಕೀರ್ತಿ ಭಟ್ ಮೌನ ಮುರಿದಿದ್ದಾರೆ. "ಅಪಘಾತದ ಬಳಿಕ ನನ್ನನ್ನು ಮಂಗಳೂರಿಗೆ ಕರೆದೊಯ್ದರು. ಅಲ್ಲೇ 35 ದಿನಗಳ ಕಾಲ ಇರುವಂತಾಯಿತು. ಆಗ ನನಗೆ ಸಾಕಷ್ಟು ಕೆಟ್ಟ ಅನುಭವವಾಗಿತ್ತು. ನನ್ನನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದರು. ನನಗೆ ಗೊತ್ತಾಗುತ್ತಿತ್ತು. ಆದರೆ ಪ್ರಜ್ಞೆ ಇಲ್ಲರ ಕಾರಣ ಅವರನ್ನು ದೂರ ತಳ್ಳಲು ಶಕ್ತಿ ಇರುತ್ತಿರಲಿಲ್ಲ" ಎಂದು ಕೀರ್ತಿ ಭಟ್ ನೋವು ತೋಡಿಕೊಂಡಿದ್ದಾರೆ.
"ಮಲಗಿದ್ದಾಗ ನನ್ನ ಕಣ್ಣಿಗೇ ಏನಾಗುತ್ತಿದೆ ಎಂದು ಗೊತ್ತಾಗುತ್ತಿತ್ತು. ಆದರೆ ಕೋಮಾದಿಂದ ಹೊರ ಬರುವವರೆಗೂ ನಾವು ಶವದಂತೆ ಇರುತ್ತೇವೆ ಅಲ್ವಾ? ನನ್ನನ್ನು ಮುಟ್ಟುತ್ತಿದ್ದಾರೆ ಎಂದು ಗೊತ್ತಾಗುತ್ತಿತ್ತು. ಆದರೂ ಅವರನ್ನು ದೂರ ತಳ್ಳಲು ಸಾಧ್ಯವಾಗುತ್ತಿರಲಿಲ್ಲ. ನನಗೆ ನಡೆಯಲು ಸಾಧ್ಯವಾಗುತ್ತದೆ ಎಂದು ಗೊತ್ತಾದಾಗ ನಾನು ಅಲ್ಲಿಂದ ಹೊರಟು ಬಂದುಬಿಟ್ಟೆ" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
"ರಾತ್ರಿಯಾಗಿತ್ತು. ಬಸ್‌ಗಳು ಸಿಗಲಿಲ್ಲ. ಆಟೋದಲ್ಲಿ ಹೊರಡೋಣ ಅಂದ್ರೆ ಕೇಳ್ತಾರೆ. ನನಗೆ ಆಗ ಗೊತ್ತಾಗುತ್ತಿರಲಿಲ್ಲ. 200 ರೂಪಾಯಗೆ ಬರ್ತೀಯಾ? ಅಂದ್ರೆ ಸರಿ ಬರ್ತೀನಿ, ಎನ್ನುತ್ತಿದ್ದೆ. ಬಳಿಕ ಅವರ ಲುಕ್ ನೋಡಿ ನನಗೆ ಅರ್ಥವಾಗುತ್ತಿತ್ತು. ಅವರು ತಪ್ಪಾಗಿ ಮಾತನಾಡುತ್ತಿದ್ದಾರೆ ಅಂತ" ಎಂದು ಕೀರ್ತಿ ಭಟ್ ಭಾವುಕರಾಗಿದ್ದಾರೆ.
'ಮನಸಿಚ್ಚಿ ಚೂಡು' ಬಳಿಕ 'ಕಾರ್ತಿಕ ದೀಪಂ' ಧಾರಾವಾಹಿಯಲ್ಲಿ ಕೀರ್ತಿ ಭಟ್ ನಟಿಸಿದ್ದರು. ಸದ್ಯ 'ಮಧುರಾನಗರಿಲೋ' ಎನ್ನುವ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಪ್ರಿಯಕರನ ಜೊತೆ ಕೀರ್ತಿ ಭಟ್ ಮದುವೆ ನಿಶ್ಚಯವಾಗಿದೆ. ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು ಶೀಘ್ರದಲ್ಲೇ ಮದುವೆ ಆಗಲು ನಿರ್ಧರಿಸಿದ್ದಾರೆ.


Click it and Unblock the Notifications











