4 ಮಕ್ಕಳು ಸಾಲಲ್ಲ, ಇನ್ನು ಬೇಕು ಎಂದ ನಟ; ಅದಕ್ಕೆ ಬೇರೆಯವಳನ್ನು ನೋಡ್ಕೊ ಎಂದ ಪತ್ನಿ!
ದೇಶದ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಫ್ಯಾಮಿಲಿ ಪ್ಲಾನಿಂಗ್ ಅವಶ್ಯಕ ಎಂದು ಹೇಳುತ್ತಲೇ ಇರುತ್ತಾರೆ. ಮಕ್ಕಳಿರಲ್ವಾ ಮನೆತುಂಬಾ ಎನ್ನುವ ಮಾತು ಹೋಗಿ ನಾವಿಬ್ಬರು ನಮಗಿಬ್ಬರು ಎಂಬ ಘೋಷವಾಕ್ಯ ಬಂದು ಬಹಳ ದಿನಗಳಾಯಿತು. ಆದರೆ ತೆಲುಗು ನಟ ಮಂಚು ವಿಷ್ಣು ನನಗೆ ನಾಲ್ಕು ಮಕ್ಕಳು ಸಾಕಾಗಲ್ಲ, ಇನ್ನು ಬೇಕು ಎಂದಿದ್ದಾರೆ.
ತೆಲುಗಿನ ಹಿರಿಯ ನಟ ಮೋಹನ್ ಬಾಬು ಪುತ್ರ ಮಂಚು ವಿಷ್ಣು ತಂದೆ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದವರು. ಸದ್ಯ 'ಕಣ್ಣಪ್ಪ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಚಿತ್ರದಲ್ಲಿ ಕಣ್ಣಪ್ಪನ ಪಾತ್ರದಲ್ಲಿ ವಿಷ್ಣು ನಟಿಸಿದ್ದಾರೆ. ತಂದೆ ಮೋಹನ್ ಬಾಬು ಸಿನಿಮಾ ನಿರ್ಮಾಣ ಮಾಡಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

'ಕಣ್ಣಪ್ಪ' ಸಿನಿಮಾ ಪ್ರಚಾರದಲ್ಲಿ ನಟ ಮಂಚು ವಿಷ್ಣು ಬ್ಯುಸಿಯಾಗಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡುತ್ತಿದ್ದಾರೆ. ಚಿರಂಜೀವಿ ಫ್ಯಾಮಿಲಿ ಜೊತೆಗಿನ ಭಿನ್ನಾಭಿಪ್ರಾಯ, ಸಹೋದರ ಮಂಚು ಮನೋಜ್ ಜೊತೆಗಿನ ಜಗಳದ ಬಗ್ಗೆಯೂ ಸ್ಪಷ್ಟನೆ ನೀಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ನನಗೆ 4 ಮಕ್ಕಳು ಸಾಕಾಗಲ್ಲ, ನಮ್ಮ ಪತ್ನಿಗೆ ಕೇಳಿದ್ರೆ ಬೇರೊಬ್ಬಳನ್ನ ನೋಡ್ಕೊ ಅಂದ್ಲು ಎಂದು ಕ್ರೇಜಿ ಕಾಮೆಂಟ್ ಮಾಡಿದ್ದಾರೆ. ವಿಷ್ಣು ಹಾಗೂ ವಿರಣಿಕಾ ದಂಪತಿಗೆ ಮೂವರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾನೆ.
ಮಂಚು ವಿಷ್ಣು ತೆಲುಗಿನ ಟ್ರೀ ಮೀಡಿಯಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ನಿರೂಪಕ "ಕುಟುಂಬ ನಿಯಂತ್ರಣಕ್ಕೆ ನೀವು ವಿರೋಧಿನಾ?" ಎಂದು ಕೇಳಿದ್ದಾರೆ. ಅದು ವೈಯಕ್ತಿಕ ಅಭಿಪ್ರಾಯ. ನನಗೆ ನಾಲ್ಕು ಮಂದಿ ಮಕ್ಕಳು ಇದ್ದಾರೆ. ನನಗೆ ಇನ್ನು ಮಕ್ಕಳು ಬೇಕು. ನನಗೆ ಚಿಕ್ಕ ಮಕ್ಕಳು ಅಂದ್ರೆ ಬಹಳ ಇಷ್ಟ. ಮಕ್ಕಳ ಜೊತೆ ಆಡುವುದನ್ನು ಎಂಜಾಯ್ ಮಾಡ್ತೀನಿ" ಎಂದು ಮಂಚು ವಿಷ್ಣು ಹೇಳಿದ್ದಾರೆ.

"ನನಗೆ ಇನ್ನು ಮಕ್ಕಳು ಬೇಕು ಎಂದು ಪತ್ನಿ ಬಳಿ ಹೇಳಿದೆ. ಅದಕ್ಕೆ ಬೇರೆಯವಳನ್ನು ನೋಡ್ಕೋ ಎಂದಳು" ಎಂದು ವಿಷ್ಣು ನಕ್ಕಿದ್ದಾರೆ. ಅವಳ "ಮಾತಿಗೆ ನಾನು ಸರಿ ಎಂದು ತಮಾಷೆ ಮಾಡಿದೆ. ಇನ್ನೊಬ್ಬಳ ಹಿಂದೆ ಹೋಗಿ ನೋಡು ಆಗ ಇದೆ ನಿಂಗೆ ಎಂದು ಎಚ್ಚರಿಕೆ ಕೊಟ್ಟಳು. ಆಕೆ ಹೇಳಿದ್ದರಲ್ಲಿ ಸಣ್ಣ ಬೆದರಿಕೆ ಕೂಡ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ನನಗೆ ಮಕ್ಕಳು ಅಂದ್ರೆ ಇಷ್ಟ ಎಂದು ಮತ್ತೊಮ್ಮೆ ವಿಷ್ಣು ಪುನರುಚ್ಚರಿಸಿದ್ದಾರೆ.
ನಟ ಚಿರಂಜೀವಿ ಹಾಗೂ ನಟ ಮೋಹನ್ ಬಾಬು ಕುಟುಂಬಗಳ ನಡುವೆ ಶೀತಲ ಸಮರ ನಡೆಯುತ್ತಿದೆ. ಅದು ಕೆಲವೊಮ್ಮೆ ಬಹಿರಂಗ ಆಗಿರುವ ಸನ್ನಿವೇಶಗಳು ಇದೆ. ಆದರೆ ಅದೆಲ್ಲಾ ಸುಳ್ಳು. ನಮ್ಮ ಎರಡೂ ಫ್ಯಾಮಿಲಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮಾಧ್ಯಮವರು ಟಿಆರ್‌ಪಿಗಾಗಿ ಅಂತಹ ಸುದ್ದಿ ಮಾಡುತ್ತಿರುತ್ತಾರೆ ಅಷ್ಟೇ ಎಂದು ಮತ್ತೊಂದು ಸಂದರ್ಶನದಲ್ಲಿ ಮಂಚು ವಿಷ್ಣು ಹೇಳಿದ್ದಾರೆ.
ನಮ್ಮ ಎರಡೂ ಫ್ಯಾಮಿಲಿಗಳ ನಡುವೆ ಉತ್ತ, ಬಾಂಧವ್ಯ ಇದೆ. ಆಗಾಗ್ಗೆ ಭೇಟಿ ಮಾಡದಿದ್ದರೂ ಫೋನ್ ಕಾಲ್, ಮೆಸೇಜ್‌ಗಳಲ್ಲಿ ಮಾತನಾಡುತ್ತಿರುತ್ತೇವೆ ಎಂದು ಮಂಚು ವಿಷ್ಣು ಹೇಳಿಕೊಂಡಿದ್ದಾರೆ. 'ಕಣ್ಣಪ್ಪ' ಸಿನಿಮಾ ಮೇಕಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಈಗಾಗಲೇ ಚಿತ್ರದ ಮೇಕಿಂಗ್ ಹಾಗೂ ಟೀಸರ್ ಝಲಕ್ ನೋಡಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಭಾರತದಲ್ಲಿ ನಡೆದ ಕಥೆಯನ್ನು ನ್ಯೂಜಿಲೆಂಡ್ ಕಾಡಿನಲ್ಲಿ ಯಾಕೆ ಚಿತ್ರಿಸಿದರು ಎಂದು ಟೀಕಿಸುತ್ತಿದ್ದಾರೆ. ಈ ಬಗ್ಗೆ ವಿಷ್ಣು ಪ್ರತಿಕ್ರಿಯಿಸಿದ್ದಾರೆ.
ನಾವು ನ್ಯೂಜಿಲೆಂಡ್‌ನಲ್ಲೇ 'ಕಣ್ಣಪ್ಪ' ಸಿನಿಮಾ ಚಿತ್ರೀಕರಿಸಲು ಕಾರಣವಿದೆ. 2ನೇ ಶತಮಾನದಲ್ಲಿ ನಮ್ಮ ದೇಶದ ಕಾಡು ಬಹಳ ಸುಂದರವಾಗಿತ್ತು. ಆದರೆ ಈಗ ಆ ರೀತಿ ಇಲ್ಲ. ದಟ್ಟ ಹಸಿರಿನಿಂದ ಕೂಡಿರುವ, ಪಕ್ಷಿಗಳ ಕಲರವ ಇರುವ ಅರಣ್ಯ ಬೇಕಿತ್ತು. ನ್ಯೂಜಿಲೆಂಡ್ ಕಾಡನ್ನು ನೋಡಿದಾಗ ನನಗೆ ಅಂತಹ ಭಾವನೆ ಬಂತು. ಹಾಗಾಗಿ ಅಲ್ಲೇ ಚಿತ್ರೀಕರಣ ನಡೆಸಿದೆವು ಎಂದು ಮಂಚು ವಿಷ್ಣು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











