ದಕ್ಷಿಣದಲ್ಲಿ ಶುರು ಆಯ್ತು ಕಾಂತಾರ 'ಕುಲಶೇಖರ'ನ ದಂಡಯಾತ್ರೆ, ಸಮಂತಾ ಹೊಸ ಚಿತ್ರದಲ್ಲಿ ಗುಲ್ಶನ್ ದೇವಯ್ಯ
ಕನ್ನಡ ಚಿತ್ರರಂಗದ ಮೇಲೀಗ ಎಲ್ಲರ ಕಣ್ಣಿದೆ. ಮೊದಲೆಲ್ಲ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡದವರೆಲ್ಲ ಈಗ ಕನ್ನಡ ಚಿತ್ರರಂಗ ಹಾಗೇ ಹೀಗೆ ಎಂದೆಲ್ಲ ಹೊಗಳಿ ಮಾತನಾಡುತ್ತಿದ್ದಾರೆ. ಇನ್ನು ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ ಸೇರಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾವರೆಗೆ ಅನೇಕರು ಕರ್ನಾಟಕದಿಂದ ಬಾಲಿವುಡ್‌ಗೆ ವಲಸೆ ಹೋಗಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ.
ಆದರೆ ಹೀಗೆ ಹೋದ ಅನೇಕರು ಈ ಮೊದಲು ನಾವು ಕನ್ನಡದವರು, ಕನ್ನಡ ಚಿತ್ರದಲ್ಲಿ ಅಭಿನಯಸಿದವರು, ಕನ್ನಡ ಚಿತ್ರದಲ್ಲಿ ಅಭಿನಯಿಸುವ ಆಸೆಯನ್ನು ಹೊಂದಿರುವವರು, ಎಂದು ಮೊದಲು ಹೇಳುತ್ತಿರಲಿಲ್ಲ. ಕನ್ನಡ ಬಂದರೂ ಮಾತನಾಡುತ್ತಿರಲಿಲ್ಲ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕನ್ನಡ ಚಿತ್ರದಲ್ಲಿ ಅಭಿನಯಿಸಿದರೇ ನಮ್ಮ ಜನ್ಮ ಪಾವನ ಎಂಬ ಭಾವ ಹಲವರಲ್ಲಿ ಮನೆ ಮಾಡಿದೆ. ಇಲ್ಲಿಂದ ಹೋದವರು ಮರಳಿ ಬಂದು ಇಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅವಕಾಶ ಸಿಕ್ಕರೆ ನಾನು ಅಭಿನಯಿಸಲು ರೆಡಿ ಎನ್ನುತ್ತಿದ್ದಾರೆ. ಮತ್ತೂ ಕೆಲವರು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ದಕ್ಷಿಣದಲ್ಲಿ ದಂಡಯಾತ್ರೆ ಶುರು ಮಾಡುತ್ತಿದ್ದಾರೆ. ಉದಾಹರಣೆಗೆ ಗುಲ್ಶನ್ ದೇವಯ್ಯ.
ಹೌದು, ಗುಲ್ಶನ್ ದೇವಯ್ಯ. ಕೊಡಗಿನ ಕುಮಾರ. ಕಾಂತಾರದ ಕುಲಶೇಖರ. ಬೆಂಗಳೂರಿನಲ್ಲಿಯೇ ಬೆಳೆದು ಇಂಗ್ಲೀಷ್ ರಂಗಭೂಮಿಯತ್ತ ಹೊರಳಿದ್ದ ಗುಲ್ಶನ್ ದೇವಯ್ಯ, ಅನುರಾಗ್ ಕಶ್ಯಪ್ ಅವರ ''ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್'' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದರು.
ಅಲ್ಲಿಂದ ಇಲ್ಲಿಯವರೆಗೆ 25ಕ್ಕೂ ಅಧಿಕ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ, ತಮ್ಮ ಅಭಿನಯದಿಂದ ಮನ ಗೆದ್ದಿರುವ ಗುಲ್ಶನ್ ದೇವಯ್ಯ ಕನ್ನಡಿಗರಾದರೂ ಕೂಢ ಬಹುತೇಕ ಕನ್ನಡಿಗರಿಗೆ ಅಪರಿಚಿತರಾಗಿದ್ದರು. ಆದರೆ.. ''ಕಾಂತಾರ'' ಇವರ ಬದುಕನ್ನು ಬದಲಿಸಿತು. ಇವತ್ತು ಗುಲ್ಶನ್ ದೇವಯ್ಯ ಎಲ್ಲ ಕನ್ನಡಿಗರಿಗೆ ಚಿರಪರಿಚಿತ. ಅಷ್ಟರ ಮಟ್ಟಿಗೆ ಕುಲಶೇಖರ ಪಾತ್ರ ಇವರಿಗೆ ಹೆಸರು ತಂದು ಕೊಟ್ಟಿದೆ.
ಇಂಥಾ ಗುಲ್ಶನ್ ದೇವಯ್ಯ ಇದೀಗ ಕನ್ನಡದ ನಂತರ ತೆಲುಗು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮುಂದಾಗಿದ್ಧಾರೆ. ಇದೇ ಮೊದಲ ಬಾರಿ ತೆಲುಗು ಚಿತ್ರರಂಗವನ್ನು ಪ್ರವೇಶ ಮಾಡುತ್ತಿದ್ಧಾರೆ. ಇವರ ಮೊದಲ ತೆಲುಗು ಚಿತ್ರದ ನಿರ್ಮಾಪಕಿ ಮತ್ತು ನಾಯಕಿ ಬೇರೆ ಯಾರು ಅಲ್ಲ ಬದಲಿಗೆ ಸಮಂತಾ ಎನ್ನುವುದು ವಿಶೇಷ.

ಹೌದು, ಹೈದರಾಬಾದ್‌ಗಿಂತ ಇತ್ತೀಚೆಗೆ ಮುಂಬೈನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಸಮಂತಾ, ಬಹಳ ವರ್ಷಗಳ ನಂತರ ನಾಯಕಿಯಾಗಿ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಬೇರೆ ಯಾರು ಹಣ ಹೂಡಲು ಮುಂದಾಗದ ಕಾರಣ.. ಅವಕಾಶವನ್ನು ನೀಡದ ಕಾರಣ.. ತಾವೇ ಖುದ್ದು ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಹೀಗೆ ಇವರು ಬಂಡವಾಳ ಹಾಕಿ ಅಭಿನಯಿಸುತ್ತಿರುವ ಚಿತ್ರ ''ಮಾ ಇಂಟಿ ಬಂಗಾರಂ'' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದೆ. ಆದರೆ ಈ ಮುಹೂರ್ತ ಸಮಾರಂಭದಲ್ಲಿ ಗೈರಾಗಿದ್ದ ಗುಲ್ಶನ್ ದೇವಯ್ಯ ಸದ್ಯ ತಮ್ಮ ಈ ಹೊಸ ಚಿತ್ರದ ಪೋಸ್ಟರ್ ಅನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ''ನಾನು ಕೂಡ ಇದ್ದೇನೆ'' ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಗುಲ್ಶನ್ ದೇವಯ್ಯ ಅವರ ಪಾತ್ರವೇನು..? ಗುಲ್ಶನ್ ಚಿತ್ರದಲ್ಲಿ ನಾಯಕನಾ..? ಖಳನಾಯಕನಾ..? ಈ ಪ್ರಶ್ನೆಗಳಿಗೆ ಉತ್ತರವನ್ನು ಇನ್ನೂ ಗುಲ್ಶನ್ ಆಗಲಿ ಸಮಂತಾ ಆಗಲಿ ಹೇಳಿಲ್ಲವಾದರೂ ಈ ಚಿತ್ರಕ್ಕೆ ''ಓಹ್ ಬೇಬಿ'' ಖ್ಯಾತಿಯ ನಿರ್ದೇಶಕಿ ನಂದಿನಿ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಕುರಿತು ಶೀಘ್ರದಲ್ಲಿಯೇ ಇನ್ನಷ್ಟು ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ. ಆಗಲೇ ಗುಲ್ಶನ್ ದೇವಯ್ಯ ಅವರ ಪಾತ್ರದ ರಹಸ್ಯ ಕೂಡ ರಿವೀಲ್ ಆಗುವ ಸಾಧ್ಯತೆ ಇದೆ.



Click it and Unblock the Notifications











