ಕಾರ್ತಿಕೇಯ 2 ಅಬ್ಬರಕ್ಕೆ ರಜಿನಿ, ಪ್ರಭಾಸ್ ಸಿನಿಮಾ ಕಲೆಕ್ಷನ್ ದಾಖಲೆಗಳೇ ಉಡೀಸ್!

2014ರಲ್ಲಿ ಬಿಡುಗಡೆಯಾಗಿ ಆ ಸಮಯದಲ್ಲಿ ಸಂಚಲನ ಸೃಷ್ಟಿಸಿದ್ದ ಚಿತ್ರ ಕಾರ್ತಿಕೇಯ. ಆಗಿನ ಸಮಯಕ್ಕೆ ವಿನೂತನ ಕತೆ ಹಾಗೂ ಚಿತ್ರಕತೆಯಿಂದ ಚಿತ್ರಮಂದಿರಕ್ಕೆ ಬಂದಿದ್ದ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್ ನೀಡಿದ್ದ ಕಾರ್ತಿಕೇಯ ಎಂಟು ವರ್ಷಗಳ ಬಳಿಕ ಸೀಕ್ವೆಲ್ ಪಡೆದುಕೊಂಡಿದೆ. ಸಾಮಾನ್ಯವಾಗಿ ದೊಡ್ಡ ಹಿಟ್ ಆದ ಚಿತ್ರಗಳ ಸೀಕ್ವೆಲ್ ಹೆಚ್ಚಾಗಿ ಹಿಟ್ ಆಗುವುದಿಲ್ಲ ಎಂಬ ಮಾತಿದೆ. ಹಾಗೂ ಇದನ್ನು ಶೋಧಿಸಿದರೆ ನಮಗೆ ಸಿಗುವ ಫಲಿತಾಂಶದಲ್ಲಿ ಸಹ ಹಿಟ್‌ಗಿಂತ ಫ್ಲಾಪ್ ಹೆಚ್ಚು ಎಂಬುದು ಒಪ್ಪಲೇಬೇಕಾದ ಸತ್ಯ.
ಹೀಗಿರುವಾಗ ಬರೋಬ್ಬರಿ ಎಂಟು ವರ್ಷಗಳ ನಂತರ ಬಂದ ಕಾರ್ತಿಕೇಯ ಚಿತ್ರದ ಸೀಕ್ವೆಲ್ ಕಾರ್ತಿಕೇಯ 2 ಚಿತ್ರ ಹಿಟ್ ಆಗುತ್ತಾ ಎಂಬ ಅನುಮಾನ ಮೂಡಿತ್ತು. ಆದರೆ ಈ ಅನುಮಾನವನ್ನು ಮೆಟ್ಟಿ ನಿಂತ ಕಾರ್ತಿಕೇಯ 2 ಭರ್ಜರಿ ಯಶಸ್ಸು ಸಾಧಿಸಿತು. ಆಗಸ್ಟ್ 13ರಂದು ಬಿಡುಗಡೆಯಾದ ಕಾರ್ತಿಕೇಯ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲೇನೂ ಬಿಡುಗಡೆಯಾಗಲಿಲ್ಲ. ಆದರೆ, ಬಿಡುಗಡೆಯಾಗಿ ಮೂರ್ನಾಲ್ಕು ದಿನಗಳು ಕಳೆದ ಬೆನ್ನಲ್ಲೇ ಕಾರ್ತಿಕೇಯ 2 ತನ್ನ ಅಸಲಿ ಆಟವನ್ನು ಆರಂಭಿಸಿತ್ತು.
ಒಂದೆರಡು ಪರದೆಗಳಲ್ಲಿ ಬಿಡುಗಡೆಯಾಗಿದ್ದ ಕಡೆ ಒಂದು ವಾರದ ನಂತರ ಕಾರ್ತಿಕೇಯ 2 ಹಲವಾರು ಶೋಗಳನ್ನು ಪಡೆದುಕೊಳ್ಳಲು ಪಡೆದುಕೊಂಡಿತು. ಲೈಗರ್ ರೀತಿಯ ಬಿಗ್ ಬಜೆಟ್ ಸಿನಿಮಾನೇ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದರೂ ಸಹ ಕಾರ್ತಿಕೇಯ 2 ತನ್ನ ಪಾಡಿಗೆ ತಾನು ತನ್ನ ಓಟವನ್ನು ಮುಂದುವರೆಸಿದೆ. ಅದರಲ್ಲಿಯೂ ಕಾರ್ತಿಕೇಯ 2 ಹಿಂದಿ ಡಬ್ಬಿಂಗ್ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ಪಡೆದುಕೊಂಡು ಯಶಸ್ವಿ ನಾಲ್ಕನೇ ವಾರವನ್ನು ಪೂರೈಸಿದೆ. ಇಷ್ಟರ ಮಟ್ಟಿಗಿನ ಯಶಸ್ಸನ್ನು ಹಿಂದಿ ಸಿನಿ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವತಃ ಹಿಂದಿ ಚಿತ್ರಗಳೇ ಪಡೆದುಕೊಳ್ಳಲಿಲ್ಲ ಎಂದು ಹೇಳಬಹುದು. ಇನ್ನು ಹಿಂದಿ ಕಲೆಕ್ಷನ್ ವಿಚಾರದಲ್ಲಿ ರಜಿನಿಕಾಂತ್ ಮತ್ತು ಪ್ರಭಾಸ್ ಅವರನ್ನೇ ಹಿಂದಿಕ್ಕಿರುವ ಕಾರ್ತಿಕೇಯ 2 ಚಿತ್ರ ಸದ್ಯ ಹಿಂದಿಗೆ ಡಬ್ ಆದ ಸೌತ್ ಮೂವೀಸ್ ಕಲೆಕ್ಷನ್ ಪಟ್ಟಿಯಲ್ಲಿ ರಾರಾಜಿಸುತ್ತಿದೆ.

ಕಬಾಲಿ, ರಾಧೆ ಶ್ಯಾಮ್ ಹಿಂದಿಕ್ಕಿದ ಕಾರ್ತಿಕೇಯ 2
ಇದೇ ವರ್ಷ ಬಿಡುಗಡೆಯಾಗಿದ್ದ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಹಿಂದಿ ಡಬ್ಬಿಂಗ್ 19.30 ಕಲೆಕ್ಷನ್ ಮಾಡಿತ್ತು, 2010ರಲ್ಲಿ ತೆರೆಕಂಡಿಂದ್ದ ರೊಬೊಟ್ ( ಎಂದಿರನ್ ಹಿಂದಿ ಡಬ್ಬಿಂಗ್) 23.84 ಕೋಟಿ ಕಲೆಕ್ಷನ್ ಮಾಡಿತ್ತು, ಇದೇ ವರ್ಷ ತೆರೆಕಂಡಿದ್ದ ಮಾಧವನ್ ಅಭಿನಯದ ರಾಕೆಟ್ರಿ ದ ನಂಬಿ ಎಫೆಕ್ಟ್ ಹಿಂದಿ ಡಬ್ಬಿಂಗ್ 26.05 ಕೋಟಿ ಗಳಿಸಿತ್ತು, 2016ರಲ್ಲಿ ಬಿಡುಗಡೆಯಾಗಿದ್ದ ರಜಿನಿಕಾಂತ್ ಕಬಾಲಿ ಹಿಂದಿ ಡಬ್ಬಿಂಗ್ 28 ಕೋಟಿ ಕಲೆಕ್ಷನ್ ಮಾಡಿತ್ತು ಹಾಗೂ ಇದೇ ವರ್ಷ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿರುವ ಕಾರ್ತಿಕೇಯ 2 ಹಿಂದಿ ಡಬ್ಬಿಂಗ್ 28.5 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕಾರ್ತಿಕೇಯ 2 ಹಿಂದಿ ಗಳಿಕೆ ರಜಿನಿಕಾಂತ್ ಅಭಿನಯದ ಕಬಾಲಿ ಹಾಗೂ ರೊಬೊಟ್ ಹಿಂದಿ ಕಲೆಕ್ಷನ್ ಅನ್ನು ಮತ್ತು ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಹಿಂದಿ ಗಳಿಕೆಯನ್ನು ಹಿಂದಿಕ್ಕಿ ಹಿಂದಿಗೆ ಡಬ್ ಆಗಿ ಅತಿಹೆಚ್ಚು ಕಲೆಕ್ಷನ್ ಮಾಡಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಹಿಂದಿಗೆ ಡಬ್ ಆಗಿ ಅತಿಹೆಚ್ಚು ಗಳಿಸಿದ ಸೌತ್ ಮೂವೀಸ್ ಟಾಪ್ 10 ಪಟ್ಟಿ
1 ಬಾಹುಬಲಿ 2 - 2017 - 510.99
2 ಕೆಜಿಎಫ್ - ಚಾಪ್ಟರ್ 2 2022 - 434.70
3 RRR - 2022 - 274.31
4 2.0 - 2018 - 189.55
5 ಸಾಹೋ - 2019 - 142.95
6 ಬಾಹುಬಲಿ - ದಿ ಬಿಗಿನಿಂಗ್ - 2015 - 118.7
7 ಪುಷ್ಪ: ದಿ ರೈಸ್ - ಭಾಗ 1 - 2021 - 108.26
8 ಕೆಜಿಎಫ್ - ಚಾಪ್ಟರ್ 1 - 2018 - 44.09
9 ಕಾರ್ತಿಕೇಯ 2 - 2022 - 28.50
10 ಕಬಾಲಿ - 2016 - 28

ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್‌ಗೆ ಕಾರಣ?
ಕಾರ್ತಿಕೇಯ 2 ಹಿಂದಿಯಲ್ಲಿ ಈ ಮಟ್ಟಕ್ಕೆ ಸದ್ದು ಮಾಡುತ್ತಿದೆ ಆದರೆ, ಇದಕ್ಕೂ ಮುನ್ನ ಬಂದಿದ್ದ ಕಾರ್ತಿಕೇಯ ಸಿನಿಮಾ ಹಿಂದಿ ಡಬ್ ಆಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿಯೇ ಇರಲಿಲ್ಲ. ಹೀಗೆ ಈ ಬಾರಿ ಮಾತ್ರ ಹಿಂದಿಯಲ್ಲಿ ಡಬ್ ಆದ ಚಿತ್ರ ಇಷ್ಟು ದೊಡ್ಡ ಯಶಸ್ಸು ಸಾಧಿಸಲು ಕಾರಣ ಬಾಲಿವುಡ್ ಸಿನಿಪ್ರೇಕ್ಷಕರಿಗೆ ಹಿಡಿಸುವಂತ ಕತೆ ಚಿತ್ರದಲ್ಲಿದ್ದದ್ದು. ಹಿಂದೂ ಪುರಾಣ ಹಾಗೂ ಕೃಷ್ಣನ ಸುತ್ತ ಚಿತ್ರದ ಕತೆ ಸಾಗುವ ಕಾರಣದಿಂದಾಗಿ ಅಲ್ಲಿನ ಜನ ಚಿತ್ರವನ್ನು ಮೆಚ್ಚಿಕೊಂಡರು. ಅದರಲ್ಲಿಯೂ ಅವರದ್ದೇ ಸಿನಿಮಾಗಳನ್ನು ಬಾಯ್‌ಕಾಟ್ ಮಾಡಿ ಒಂದೊಳ್ಳೆ ಕಂಟೆಂಟ್ ಇರುವ ಸೌತ್ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿರುವ ಬಾಲಿವುಡ್ ಸಿನಿರಸಿಕರು ಈ ಚಿತ್ರದ ಕಂಟೆಂಟ್‌ಗೆ ಮಾರಿಹೋದರು. ಮೊದಲ ದಿನ ಕೇವಲ 50 ಪ್ರದರ್ಶನಗಳನ್ನು ಕಂಡಿದ್ದ ಕಾರ್ತಿಕೇಯ 2 ಹಿಂದಿ ಮೊದಲ ವಾರಾಂತ್ಯಕ್ಕೆ ದಿನವೊಂದಕ್ಕೆ 1000 ಪ್ರದರ್ಶನಗಳನ್ನು ಕಂಡಿತ್ತು.


Click it and Unblock the Notifications











