Karthikeya: ಅಜಿತ್ ಚಿತ್ರಗಳು ದೊಡ್ಡ ಕಲೆಕ್ಷನ್ ಮಾಡಲು ಇದೇ ಕಾರಣ; ಯುವ ನಟನ ಹೇಳಿಕೆಗೆ ನಕ್ಕ ನೆಟ್ಟಿಗರು!
2017ರಲ್ಲಿ ಬಿಡುಗಡೆಗೊಂಡ ಪ್ರೇಮತೋ ಮೀ ಕಾರ್ತಿಕ್ ಎಂಬ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ತೆಲುಗು ನಟ ಕಾರ್ತಿಕೇಯ ಗುಮ್ಮಕೊಂಡ ಸದ್ಯ ತೆಲುಗು ಚಿತ್ರರಂಗದಲ್ಲಿ ಸರಿಯಾದ ಹಿಟ್ ಕೊಟ್ಟು ಗಟ್ಟಿಯಾಗಿ ನೆಲೆಯೂರಲು ಸತತವಾಗಿ ಪ್ರಯತ್ನ ಮಾಡುತ್ತಿರುವ ನಟ. ತೆಲುಗು ನಟ ಕಾರ್ತಿಕೇಯ ಎಂದರೆ ಬಹುತೇಕರಿಗೆ ತಿಳಿಯದ ಈ ನಟ ಆರ್ ಎಕ್ಸ್ 100 ಸಿನಿಮಾದ ಹೀರೋ ಎಂದರೆ ಹಲವರ ನೆನಪಿಗೆ ಬರುತ್ತಾರೆ.
ಹೌದು, ತನ್ನ ಎರಡನೇ ಸಿನಿಮಾ ಆರ್ ಎಕ್ಸ್ 100 ಮೂಲಕ ಕಾರ್ತಿಕೇಯ ಗುಮ್ಮಕೊಂಡ ದೊಡ್ಡ ಮಟ್ಟದಲ್ಲಿಯೇ ಗೆದ್ದಿದ್ದರು. ಆದರೆ ನಂತರ ಬಂದ ಸಿನಿಮಾಗಳ ಮೂಲಕ ಆರ್ ಎಕ್ಸ್ 100 ರೀತಿಯ ಗಟ್ಟಿ ಗೆಲುವು ಕಾರ್ತಿಕೇಯಗೆ ಸಿಗಲೇ ಇಲ್ಲ. ಆ ಬಳಿಕ ಐದಾರು ಚಿತ್ರಗಳನ್ನು ಮಾಡಿರುವ ಕಾರ್ತಿಕೇಯ ಕೈ ಸುಟ್ಟುಕೊಂಡಿದ್ದೇ ಹೆಚ್ಚು. ಇನ್ನು ನಾನಿಯ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ವಿಲನ್ ಆಗಿಯೂ ಸಹ ನಟಿಸಿದ್ದ ಕಾರ್ತಿಕೇಯ ಕಳೆದ ವರ್ಷ ತೆರೆಗೆ ಬಂದ ಅಜಿತ್ ಕುಮಾರ್ ನಟನೆಯ ತಮಿಳು ಸಿನಿಮಾ ವಾಲಿಮೈನಲ್ಲಿಯೂ ಸಹ ಖಳನಟನಾಗಿ ಮಿಂಚಿದ್ದರು.

ಹೀಗೆ ನಾಯಕನಾಗಿ ಹಾಗೂ ಖಳನಾಯಕನಾಗಿಯೂ ಸಹ ಬಣ್ಣ ಹಚ್ಚಿರುವ ನಟ ಕಾರ್ತಿಕೇಯ ಸದ್ಯ 'ಬೆದುರುಲಂಕ 2012' ಎಂಬ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರ ಇದೇ ಶುಕ್ರವಾರ ( ಆಗಸ್ಟ್ 25 ) ಬಿಡುಗಡೆಯಾಗಲಿದೆ. ಇನ್ನು ಈ ಚಿತ್ರದ ಬಿಡುಗಡೆ ಸಮೀಪಿಸುತ್ತಿದ್ದಂತೆ ಚಿತ್ರದ ಪ್ರಮೋಷನ್ ಕಾರ್ಯಗಳಿಗೆ ಇಳಿದಿರುವ ನಟ ಕಾರ್ತಿಕೇಯ ಗುಮ್ಮಕೊಂಡ ನಡೆದ ಸಂದರ್ಶನವೊಂದರಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರು ನಡೆದುಕೊಳ್ಳುವ ರೀತಿಯ ಕುರಿತು ಮಾತನಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಹೌದು, ನಟರು ಹೆಚ್ಚಾಗಿ ಹೊರಗೆ ಕಾಣಿಸಿಕೊಂಡರೆ ಅವರ ಚಿತ್ರಗಳು ದೊಡ್ಡ ಓಪನಿಂಗ್ ಪಡೆದುಕೊಳ್ಳುವುದಿಲ್ಲ, ಬದಲಾಗಿ ಅಪರೂಪಕ್ಕೆ ಹೊರಗೆ ಬಂದರೆ ಅಂತಹ ನಟರ ಚಿತ್ರಗಳು ದೊಡ್ಡ ಓಪನಿಂಗ್ ಪಡೆದುಕೊಳ್ಳುತ್ತವೆ ಎಂದು ಕಾರ್ತಿಕೇಯ ಗುಮ್ಮಕೊಂಡ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರನ್ನು ಕಾರ್ತಿಕೇಯ ಉದಾಹರಣೆಯಾಗಿ ನೀಡಿ ನೆಟ್ಟಿಗರಿಂದ ನೆಗೆಟಿವ್ ಕಾಮೆಂಟ್ ಪಡೆದುಕೊಂಡಿದ್ದಾರೆ.
"ಅಜಿತ್ ಅವರು ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಹಾಗಾಗಿಯೇ ಅವರ ಚಿತ್ರಗಳಿಗೆ ಬರುವಂತಹ ದೊಡ್ಡ ಓಪನಿಂಗ್ ಬೇರೆ ನಟರ ಚಿತ್ರಗಳಿಗೆ ಬರುವುದಿಲ್ಲ, ಅವರ ಕ್ರೇಜ್ ದೊಡ್ಡ ಮಟ್ಟದಲ್ಲಿ ಇರುತ್ತದೆ. ನನಗೆ ಅಂತಹ ನಟರನ್ನು ನೋಡಿದರೆ ಬಹಳ ಸ್ಪೂರ್ತಿದಾಯಕವಾಗಿರುತ್ತದೆ. ಚಿತ್ರ ಬಿಡುಗಡೆಯ ಸಮಯವನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಹೊರಗಡೆ ಕಾಣಿಸಿಕೊಳ್ಳಬಾರದು ಎಂದುಕೊಳ್ತೇನೆ" ಎಂದು ಕಾರ್ತಿಕೇಯ ಹೇಳಿಕೆ ನೀಡಿದ್ದಾರೆ.
ಇನ್ನು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ನಟನ ಕಾಲೆಳೆದಿದ್ದಾರೆ. ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಗುವುದು ನಟರ ಸ್ಟಾರ್‌ಡಂನಿಂದಲೇ ಹೊರತು ಎಲ್ಲಿಯೂ ಹೊರಗೆ ಬಾರದೇ ಇರುವುದರಿಂದ ಅಲ್ಲ, ಅಲ್ಲದೇ ಅಜಿತ್ ಕುಮಾರ್ ಸ್ಟಾರ್‌ಡಂನಿಂದ ಅವರ ಚಿತ್ರಗಳು ದೊಡ್ಡ ಓಪನಿಂಗ್ ಪಡೆದುಕೊಳ್ಳುತ್ತವೆ ಹೊರತು ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದಲ್ಲ. ನಿಮ್ಮ ಊಹೆಯಂತೆ ನೀವೇನಾದರೂ ಹಿಟ್‌ಗಾಗಿ ಅಜಿತ್ ಹಾದಿಯನ್ನು ಹಿಡಿದರೆ ನಿಮ್ಮನ್ನು ಜನ ಮರೆತುಬಿಡುತ್ತಾರೆ ಅಷ್ಟೇ ಎಂದು ಕಾಮೆಂಟ್ ಮಾಡಿದ್ದಾರೆ. -೦ಪ]]


Click it and Unblock the Notifications











