ಚಿರಂಜೀವಿಗೆ ಅವಮಾನ ಮಾಡಿದ್ರಾ ಕೀರ್ತಿ ಸುರೇಶ್? 'ಮಹಾನಟಿ' ಫುಲ್ ಟ್ರೋಲ್
ಕೀರ್ತಿ ಸುರೇಶ್ ನಟನೆಯ 'ರಘುತಾತ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಈಗಾಗಲೇ ಪ್ರಮೋಷನ್ ಶುರುವಾಗಿದೆ. 'ಮಹಾನಟಿ' ಆಗಿ ಸಕ್ಸಸ್ ಕಂಡ ಕೀರ್ತಿ ಮತ್ತೊಮ್ಮೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಆದರೆ ದಿಢೀರನೆ ಆಕೆ ಸಖತ್ ಟ್ರೋಲ್ ಆಗುತ್ತಿದ್ದಾರೆ.
ಸೆಲೆಬ್ರೆಟಿಗಳು ಯಾವಾಗ ಯಾಕೆ ಟ್ರೋಲ್ ಆಗುತ್ತಾರೆ ಎಂದು ಹೇಳುವುದು ಕಷ್ಟ. ಇದೀಗ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ಕೊಟ್ಟ ಉತ್ತರವೊಂದು ಆಕೆ ಮೇಲೆ ಕೆಲವರು ಗರಂ ಆಗುವಂತೆ ಮಾಡಿದೆ. ಅಂದಹಾಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ರಘುತಾತ' ಸಿನಿಮಾ ನಿರ್ಮಿಸಿದೆ. ಸುಮನ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು 60, 70ರ ದಶಕದ ಕಾಮಿಡಿ ಎಂಟರ್‌ಟ್ರೈನರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.

ಮಲಯಾಳಂ ಬೆಡಗಿ ಕೀರ್ತಿ ಸುರೇಶ್ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಕೀರ್ತಿ ನಟನೆಯ ಹಿಂದಿ ಸಿನಿಮಾ 'ಬೇಬಿ ಜಾನ್' ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಇನ್ನು ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ಬಗ್ಗೆ ಮಾತನಾಡುತ್ತಲೇ ಮಹಿಳೆ ಸ್ವಾವಲಂಬಿಯಾಗಿ ಬದುಕಿ ಸಾಧಿಸುವ ಕಥೆಯನ್ನು 'ರಘುತಾತ' ಚಿತ್ರದಲ್ಲಿ ಹೇಳಲಾಗುತ್ತಿದೆ.
ಸದ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತೆಲುಗು ನಟ ಚಿರಂಜೀವಿ ಬಗ್ಗೆ ನೀಡಿದ ಹೇಳಿಕೆ ಕೆಲವರ ಬೇಸರಕ್ಕೆ ಕಾರಣವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಡ್ಯಾನ್ಸ್ ಬಗ್ಗೆ ಹೇಳುವುದೇ ಬೇಕಾಗಿಲ್ಲ. ಸಾಕಷ್ಟು ಯುವ ನಟರಿಗೆ ಚಿರು ಡ್ಯಾನ್ಸ್ ದೊಡ್ಡ ಸ್ಫೂರ್ತಿ. ಮೆಗಾಸ್ಟಾರ್ ಡ್ಯಾನ್ಸ್ ನೋಡಿ ನಮಗೂ ಡ್ಯಾನ್ಸ್ ಬಗ್ಗೆ ಒಲವು ಮೂಡಿತು ಎಂದು ಹಲವು ನಟ-ನಟಿಯರು ಹೇಳಿದ್ದಾರೆ.
ವಯಸ್ಸು 60 ದಾಟಿದರೂ ಚಿರಂಜೀವಿ ಸ್ಟೆಪ್ಸ್ ಎಂಥಹವರಿಗೂ ಅಚ್ಚರಿ ಮೂಡಿಸುತ್ತದೆ. ಆ ಗ್ರೇಸ್, ಸ್ವ್ಯಾಗ್ ನಿಜಕ್ಕೂ ಗ್ರೇಟ್ ಎಂದು ಸ್ಟಾರ್ ನಟ-ನಟಿಯರೇ ಒಪ್ಪಿಕೊಂಡಿದ್ದಾರೆ. ಆದರೆ ಕೀರ್ತಿ ಸುರೇಶ್ ಸಂದರ್ಶನದಲ್ಲಿ ಮಾತನಾಡುತ್ತಾ ಚಿರಂಜೀವಿಗಿಂತ ದಳಪತಿ ವಿಜಯ್ ಬೆಸ್ಟ್ ಡ್ಯಾನ್ಸರ್ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಆಕೆಯನ್ನು ಟ್ರೋಲ್ ಮಾಡಲಾಗುತ್ತಿದೆ. ಆದರೆ ಅಭಿಮಾನಿಗಳು ಮಾತ್ರ ಕೀರ್ತಿ ಬೆಂಬಲಕ್ಕೆ ನಿಂತಿದ್ದಾರೆ.
ದಳಪತಿ ವಿಜಯ್ ಹಾಗೂ ಚಿರಂಜೀವಿ ಇಬ್ಬರ ಜೊತೆಗೂ ಕೀರ್ತಿ ಸುರೇಶ್ ನಟಿಸಿದ್ದಾರೆ. 'ಭೈರವ' ಹಾಗೂ 'ಸರ್ಕಾರ್' ಸಿನಿಮಾಗಳಲ್ಲಿ ವಿಜಯ್ ಜೋಡಿಯಾಗಿ ಮಹಾನಟಿ ಮಿಂಚಿದ್ದರು. 'ಭೋಳಾ ಶಂಕರ್' ಚಿತ್ರದಲ್ಲಿ ಮೆಗಾಸ್ಟಾರ್ ಸಹೋದರಿ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದರು. ಆದರೆ ಇಬ್ಬರಲ್ಲಿ ಯಾರು ಬೆಸ್ಟ್ ಡ್ಯಾನ್ಸರ್ ಎನ್ನುವ ಪ್ರಶ್ನೆಗೆ ಉತ್ತರ ಕೊಡುವ ಭರದಲ್ಲಿ ಮೆಗಾ ಫ್ಯಾನ್ಸ್ ಕಂಗಣ್ಣಿಗೆ ಗುರಿಯಾಗಿದ್ದಾರೆ.
ಸಂದರ್ಶನದಲ್ಲಿ ಬೆಸ್ಟ್ ಡ್ಯಾನ್ಸರ್ ಬಗ್ಗೆ ರ್ಯಾಪಿಡ್ ಫೈಯರ್ ಎದುರಾಯಿತು. ನಿರೂಪಕ ಪ್ರಶ್ನೆಗಳಿಗೆ ಒಂದು ಕ್ಷಣ ಯೋಚಿಸದೇ ಥಟ್ ಎಂದು ಕೀರ್ತಿ ಉತ್ತರ ಕೊಟ್ಟಿದ್ದಾರೆ. ಧನುಷ್ ಹಾಗೂ ನಾನಿ ಇಬ್ಬರಲ್ಲಿ ನಿಮ್ಮ ನೆಚ್ಚಿನ ಡ್ಯಾನ್ಸರ್ ಯಾರು ಎಂದು ನಿರೂಪಕ ಕೇಳಿದ್ದಾನೆ. ಇದಕ್ಕೆ ಕೀರ್ತಿ ಸುರೇಶ್ ಧನುಷ್ ಎಂದು ಉತ್ತರ ನೀಡಿದ್ದಾರೆ. ಧನುಷ್, ಅಲ್ಲು ಅರ್ಜುನ್ ಇಬ್ಬರಲ್ಲಿ ಬೆಸ್ಟ್ ಡ್ಯಾನ್ಸರ್ ಯಾರು ಎಂದಾಗ ಅಲ್ಲು ಅರ್ಜುನ್ ಎಂದು ಉತ್ತರ ನೀಡಿದ್ದಾರೆ.
ಅಲ್ಲು ಅರ್ಜುನ್ ಹಾಗೂ ಮಹೇಶ್ ಬಾಬು ಇಬ್ಬರಲ್ಲಿ ಯಾರು ಎಂದರೆ ಅಲ್ಲು ಅರ್ಜುನ್ ಎಂದಿದ್ದಾರೆ. ಅದೇ ರೀತಿ ಅಲ್ಲು ಅರ್ಜುನ್ ಹಾಗೂ ಚಿರು ಇಬ್ಬರಲ್ಲಿ ಯಾರ ಡ್ಯಾನ್ಸ್ ಎಂದರೆ ಇಷ್ಟ ಎಂದು ಕೇಳಿದಾಗ ಚಿರು ಸರ್ ಎಂದು ಹೇಳಿದ್ದಾರೆ. ಕೊನೆಗೆ ಚಿರು, ದಳಪತಿ ವಿಜಯ್ ಇಬ್ಬರಲ್ಲಿ ಯಾರ ಡ್ಯಾನ್ಸ್ ಎಂದರೆ ಇಷ್ಟ ಎಂದು ಕೇಳಿದಾಗ ವಿಜಯ್ ಎಂದು ಕೀರ್ತಿ ಸುರೇಶ್ ಉತ್ತರ ನೀಡಿದ್ದು ಈಗ ಚರ್ಚೆ ಕಾರಣವಾಗಿದೆ.

ದಶಕಗಳ ಹಿಂದೆಯೇ ತಮ್ಮ ವಿಭಿನ್ನ ಡ್ಯಾನ್ಸ್ ಮೂಲಕ ಮೋಡಿ ಮಾಡಿದವರು ಚಿರಂಜೀವಿ. ನಮ್ಮ ಹೀರೋ ಡ್ಯಾನ್ಸ್ ಬಗ್ಗೆ ದೊಡ್ಡ ದೊಡ್ಡ ನಟರು ಏನು ಹೇಳಿದ್ದಾರೆ ಕೇಳಿ. ಚಿರುಗಿಂತ ವಿಜಯ್ ಒಳ್ಳೆ ಡ್ಯಾನ್ಸರಾ? ಎಂದು ಮೆಗಾ ಫ್ಯಾನ್ಸ್ ಗರಂ ಆಗಿದ್ದಾರೆ. ಆದರೆ ಕೀರ್ತಿ ತಮ್ಮ ಇಷ್ಟದ ಡ್ಯಾನ್ಸರ್ ಬಗ್ಗೆ ಹೇಳಿದ್ದಾರೆ. ಆಕೆ ವಿಜಯ್ ಗ್ರೇಟ್ ಡ್ಯಾನ್ಸರ್ ಎಂದು ಹೇಳಿಲ್ಲ ಅಲ್ವಾ? ಆಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಲ್ಲಿ ತಪ್ಪೇನಿದೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.


Click it and Unblock the Notifications











