ಸೌತ್ ಇಂಡಿಯಾ ತುಂಬೆಲ್ಲಾ ಸುದೀಪ್ ಭರ್ಜರಿ ಹವಾ
ಟಿವಿ ಮಾಧ್ಯಮಗಳಲ್ಲಿ, ಪ್ರಿಂಟ್ ಮೀಡಿಯಾಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಹೀಗೆ ಎಲ್ಲಾ ಕಡೆ ಸುದೀಪ್ ಹಾಗೂ ರಾಜಮೌಳಿಯ ಈಗ ಚಿತ್ರದ್ದೇ ಕಾರುಬಾರು. ಸೌತ್ ಇಂಡಿಯಾದಲ್ಲಿ ಸದ್ಯದಲ್ಲೇ ಕನ್ನಡಿಗ ಸುದೀಪ್ ಅವರ ದರ್ಭಾರ್ ಆರಂಭವಾಗಲಿದೆ ಎಂಬುದು ಕನ್ನಡಿಗರಿಗೆಲ್ಲಾ ಹೆಮ್ಮೆ ತಂದಿದೆ.
ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾದಲಿರುವ ಕನ್ನಡ ನಟ ಕಿಚ್ಚ ಸುದೀಪ್ ಚಿತ್ರ ಈಗ, ಪ್ರೇಕ್ಷಕರ ಭರ್ಜರಿ ನಿರೀಕ್ಷೆಗೆ ಕಾರಣವಾಗಿದೆ. ಪ್ರಸಿದ್ಧ ತಮಿಳು ಸನ್ ಟಿವಿ ವಾಹಿನಿ ಈ ಚಿತ್ರದ ಸ್ಯಾಟಲೈಟ್ ಹಕ್ಕನ್ನು ರು. 3.5 ಕೋಟಿಗೆ ಖರೀದಿ ಮಾಡಿದ್ದು ಎಲ್ಲರಿಗೂ ಗೊತ್ತು. ತಮಿಳಿನಲ್ಲಿ ಈ ಚಿತ್ರಕ್ಕೆ 'ನಾನ್ ಈ' ಎಂದು ಹೆಸರು.
ಆದರೆ ಕನ್ನಡದಲ್ಲಿ ಈ ಚಿತ್ರ ಡಬ್ ಆಗದಿರುವುದರಿಂದ ಕನ್ನಡಿಗರು ಕನ್ನಡನಟ ಕಿಚ್ಚನ ಈ ಚಿತ್ರವನ್ನು ತಮಿಳು ಅಥವಾ ತೆಲಗು ಭಾಷೆಯಲ್ಲಿ ನೋಡಬೇಕಾಗಿದೆ. ಈ ಚಿತ್ರ ಕರ್ನಾಟಕದಲ್ಲಿ 100ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಭರ್ಜರಿ ಪ್ರಚಾರಕಾರ್ಯ ಇಡೀ ಕರ್ನಾಟಕವನ್ನೇ ವ್ಯಾಪಿಸಿದೆ.
ನಿರ್ದೇಶಕ ಎಸ್ ಎಸ್ ರಾಜಮೌಳಿಯವರ ನಿರ್ದೇಶಿಸಿರುವ ಯಾವ ಚಿತ್ರವೂ ಇದುವರೆಗೂ ಸೋತಿಲ್ಲ. ಹೀಗಾಗಿ ಇಡೀ ದಕ್ಷಿಣ ಭಾರತ 'ಈಗ' ಚಿತ್ರದ ಬಿಡುಗಡೆಗೆ ಕಾದು ಕುಳಿತಿದೆ. ನಾಯಕನ ಪಾತ್ರಕ್ಕಿಂತಲೂ ಮಿಗಿಲಾದ ಖಳನಾಯಕನ ಪಾತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಮೋಘವಾಗಿ ನಟಿಸಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತು.
ಸುದೀಪ್ ನಟನೆ ಬಗ್ಗೆ ಸ್ವತಃ ರಾಜಮೌಳಿ ಹೋದೆಡೆಯಲ್ಲೆಲ್ಲಾ ಹೇಳಿದ್ದಾರೆ. ಸುದೀಪ್ ಅವರ ಇನ್ವಾಲ್ವ್ ಮೆಂಟ್, ಅಮೋಘ ಅಭಿನಯ ಹಾಗೂ ಸಿನಿಮಾ ಬಗೆಗಿನ ಪ್ರೀತಿ ನಿರ್ದೇಶಕ ರಾಜಮೌಳಿಯವರ ಮೆಚ್ಚುಗೆ, ಪ್ರೀತಿಗೆ ಕಾರಣವಾಗಿದೆ. ಚಿತ್ರೀಕರಣ ಹಂತದಲ್ಲೇ ಸುದೀಪ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದ ರಾಜಮೌಳಿ, ಈಗಂತೂ ಸುದೀಪ್ ಗುಣಗಾನ ಪ್ರಾರಂಭಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












