ರಾಜಮೌಳಿಗೆ ಕಥೆ ಬರೆಯಲು ಹೇಳಿಕೊಡಬೇಕೆ?
ಈ ಈಗ ನೋಡಿದ ಪ್ರತಿಯೊಬ್ಬರಿಗೂ ಈ ಕಥೆಯನ್ನು ಇಲ್ಲಿಗೆ ಮುಗಿಸದೇ ಮುಂದುವರಿಸಬಹುದು ಎನ್ನಿಸಿತ್ತು. ಅದೀಗ ನಿಜವಾಗುವ ಸಂಭವ ಹೆಚ್ಚಾಗಿದೆ. 'ಈಗ-2' ಮಾಡುವ ಉತ್ಸಾಹ ಚಿತ್ರತಂಡಕ್ಕೆ ಈಗ ಮೂಡಿದೆ. ಕಾರಣ, ಬೇರೇನೂ ಅಲ್ಲ, ಬಿಡಗಡೆಯಾಗಿರುವ ಈಗ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.
ಈಗ ಚಿತ್ರದ 'ಕ್ಲೈಮ್ಯಾಕ್ಸ್'ನಲ್ಲಿ ನೊಣ ವಿಲನ್ ಸುದೀಪ್ ಜೊತೆಗೇ ಸಾಯುತ್ತದೆ. ಆದರೆ, ಅಲ್ಲೊಂದು ಟ್ವಿಸ್ಟ್ ಇಟ್ಟಿದ್ದಾರೆ ನಿರ್ದೇಶಕ ರಾಜಮೌಳಿ. ಅದು, ಸತ್ತ ನೊಣ ಮತ್ತೆ ತೆರೆಯ ಮೇಲೆ ಬಂದು, "ನಾನು ಮತ್ತೆ ಬಂದಿದ್ದೇನೆ" ಎಂಬ ಆಸಕ್ತಿಕರ ಸಂದೇಶವೊಂದನ್ನು ಸಾರುತ್ತದೆ. ಇಷ್ಟೇ ಸಾಕು, ರಾಜಮೌಳಿಯವರಿಗೆ ಈ ಚಿತ್ರವನ್ನು ಮುಂದುವರಿಸುವ ಇರಾದೆ ಈ ಮೊದಲೇ ಇತ್ತು ಎಂಬುದಕ್ಕೆ ಸಾಕ್ಷಿ.
ಈಗ ಚಿತ್ರದ ಭಾಗ ಎರಡು ಬರಲಿರುವುದು ಎಲ್ಲರಿಗೂ ರೋಮಾಂಚನದ ವಿಷಯವೇ ಆಗಿದೆ. ಅದರಲ್ಲೂ ಕಿಚ್ಚ ಸುದೀಪ್ ಇರುತ್ತಾರಾ ಎಂಬುದು ಕನ್ನಡಿಗರೆಲ್ಲರ ಕುತೂಹಲಭರಿತ ಪ್ರಶ್ನೆಯಾಗಿದೆ. ಆದರೆ ಈ ಬಗ್ಗೆ ರಾಜಮೌಳಿ ಎಲ್ಲೂ ಯಾವುದೇ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಅವರೀಗ ಪ್ರಭಾಸ್ ನಾಯಕತ್ವದ 'ಪ್ರಭಾತ್' ಚಿತ್ರೀಕರಣದಲ್ಲಿ ಬಿಜಿ. ನಂತರ 'ಈಗ-2'ಗೆ ಕಥೆ, ಚಿತ್ರಕಥೆ ಹೆಣೆಯಲಿದ್ದಾರೆ. ರಾಜಮೌಳಿಗೆ ಕಥೆ ಬರೆಯಲು ಹೇಳಿಕೊಡಬೇಕೆ?
ಪ್ರಭಾತ್ ಚಿತ್ರ ಮುಗಿದ ಮೇಲೆ ರಾಜಮೌಳಿಯವರು ಈ ಚಿತ್ರ ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸಬಹುದೇನೋ. ಏಕೆಂದರೆ ಅಷ್ಟರಲ್ಲಿ ಈ ಚಿತ್ರದ ಯಶಸ್ಸು ಯಾವ ಮಟ್ಟಿಗಿದೆ ಎಂಬ ಸಂಪೂರ್ಣ ವಿವರಗಳೂ ಲಭ್ಯವಾಗಿರುತ್ತವೆ. ಅಲ್ಲಿಯವರೆಗೆ ಯಾವುದೇ ಮಾಹಿತಿ ಅಧಿಕೃತವಲ್ಲ. ಆದರೆ ಈ ಬಗ್ಗೆ ಚಿತ್ರತಂಡಕ್ಕೆ ಯೋಚನೆ ಬಂದಿರುವುದಂತೂ ಹೌದು ಎಂಬುದು ಸದ್ಯಕ್ಕೆ ಬಹಿರಂಗವಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












