ಬಹುಭಾಷಾ ನಟಿ ಅಂಜಲಿ ಜೊತೆಗಿನ ರಿಲೇಷನ್‌ಶಿಪ್ ಬಗ್ಗೆ ಬಾಯ್ಬಿಟ್ಟ ಕೊನ ವೆಂಕಟ್
ಚಿತ್ರರಂಗದಲ್ಲಿ ಯಾವಾಗ ಯಾರಿಗೆ ಯಾರೊಟ್ಟಿಗೆ ಲವ್ ಆಗುತ್ತದೆ ಹೇಳೋಕೆ ಸಾಧ್ಯವಿಲ್ಲ. ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಪ್ರೀತಿಸಿ ಮದುವೆ ಆಗಿರುವ ಸಾಕಷ್ಟು ನಟ- ನಟಿಯರು ಇದ್ದಾರೆ. ಇನ್ನು ನಿರ್ಮಾಪಕ, ನಿರ್ದೇಶಕರನ್ನು ಪ್ರೀತಿಸಿ ಮದುವೆಯಾಗಿರುವ ನಟಿಯರು ಇದ್ದಾರೆ.
ಬಣ್ಣದಲೋಕದಲ್ಲಿ ಇರುವವರ ರಿಲೇಷನ್‌ಶಿಪ್ ಹೆಚ್ಚು ದಿನ ಗುಟ್ಟಾಗಿ ಉಳಿಯುವುದಿಲ್ಲ. ಕೆಲವರು ಮಾತ್ರ ಬಹಳ ಗುಟ್ಟಾಗಿ ಇದನ್ನು ಕಾಯ್ದುಕೊಳ್ಳುತ್ತಾರೆ. ಇಲಿ ಹೋದರೆ ಹುಲಿ ಹೋಯ್ತು ಎಂದು ರಂಗೀನ್ ಲೋಕದಲ್ಲಿ ಚರ್ಚೆ ಆಗುತ್ತದೆ. ಇನ್ನು ಗಾಸಿಪ್‌ಗಳಿವೆ ಬರವಿಲ್ಲ. ಯಾರಾದರೂ ಕೊಂಚ ಆತ್ಮೀಯವಾಗಿ ಕಾಣಿಸಿಕೊಂಡರೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಶುರುವಾಗಿಬಿಡುತ್ತದೆ. ನಟಿ ಅಂಜಲಿ ಹಾಗೂ ತೆಲುಗು ಸಿನಿಮಾ ಬರಹಗಾರ ನಿರ್ಮಾಪಕ ಕೊನ ವೆಂಕಟ್ ಬಗ್ಗೆಯೂ ಇದೇ ರೀತಿ ಮಾತುಗಳು ಕೇಳಿಬಂದಿತ್ತು.

ಇದೀಗ ಅಂಜಲಿ ಜೊತೆಗಿನ ಸಂಬಂಧದ ಬಗ್ಗೆ ಸ್ವತಃ ಕೊನ ವೆಂಕಟ್ ಮಾತನಾಡಿದ್ದಾರೆ. ತೆಲುಗಿನ Ntv ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನನಗೆ ಅಂಜಲಿ ಮೇಲೆ ಸಾಫ್ಟ್ ಕಾರ್ನರ್ ಇರುವುದು ನಿಜ. ಈ ಕ್ಷಣಕ್ಕೂ ಇದೆ. ಆಕೆಯನ್ನು ನನ್ನ ಸಹೋದರಿ, ಮಗಳು, ಸ್ನೇಹಿತೆ ಹೀಗೆ ಏನೇ ಕರೆದರೂ ಪರವಾಗಿಲ್ಲ. ಅದು ಬಿಟ್ಟು ಬೇರೆ ಯಾವುದೇ ರೀತಿಯ ರಿಲೇಷನ್‌ಶಿಪ್ ನಮ್ಮ ನಡುವೆ ಇಲ್ಲ" ಎಂದಿದ್ದಾರೆ.
ಮಾತು ಮುಂದುವರೆಸಿದ ಕೊನ ವೆಂಕಟ್ "ಅಂಜಲಿ ಚಿಕ್ಕಂದಿನಿಂದ ಸಾಕಷ್ಟು ನೋವು ಅನುಭವಿಸಿದ್ದಾಳೆ. ಆಕೆ ಪೋಷಕರ ಜೊತೆ ಬೆಳೆಯಲಿಲ್ಲ. ಚಿಕ್ಕಮ್ಮ ಸಾಕಿ ಸಲಹಿದರು. ಆಕೆಗೆ ಒಬ್ಬರ ಸಹಾಯ, ಬೆಂಬಲ ಬೇಕಿತ್ತು. ಆಕೆ ನೋವು ತೋಡಿಕೊಳ್ಳುವುದಕ್ಕೆ, ಅಳುವುದಕ್ಕೆ ಒಬ್ಬ ವ್ಯಕ್ತಿ ಬೇಕಿತ್ತು. ನಾನು ನನ್ನ ಮಗಳು, ಸ್ನೇಹಿತೆಗೆ ಹೇಗೆ ಬೆಂಬಲವಾಗಿ ನಿಲ್ತೀನೊ ಅದೇ ರೀತಿ ಆಕೆಯ ಜೊತೆಗೆ ನಿಂತೆ. ಆದರೆ ಅದಕ್ಕೆ ಯಾವುದೋ ಬಣ್ಣಕಟ್ಟಿ ಮಾತನಾಡಿದರು. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ನನ್ನ ಸಹೋದರಿ, ಮಗಳ ತರ ಎಂದು ಹೇಳಿದ್ದೇನೆ ಅಲ್ಲವೇ. ಅಷ್ಟೇ ಅದು ಬಿಟ್ಟು ಬೇರೆನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

"ಗೀತಾಂಜಲಿ ಸಿನಿಮಾ ಸಮಯದಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಅದೇ ವೇಳೆ ಚೆನ್ನೈನಲ್ಲಿ ಆಕೆಯ ಜೀವನದಲ್ಲಿ ಸಾಕಷ್ಟು ಘಟನೆಗಳು ನಡೆಯಿತು. ಆಕೆಯ ಆಸ್ತಿ ಕಬಳಿಸಿದರು. ಆಗ ಆಕೆಗೆ ಒಬ್ಬರ ಬೆಂಬಲ ಬೇಕಿತ್ತು. ತಂದೆ ಇಲ್ಲ. ಸಹೋದರ ಇದ್ದರೂ ಪ್ರಯೋಜನವಿಲ್ಲ, ಅದನ್ನೆಲ್ಲಾ ಅರ್ಥ ಮಾಡಿಕೊಂಡು ನಾನು ಬೆಂಬಲವಾಗಿ ನಿಂತೆ. ಅದು ಬಿಟ್ಟು ಬೇರೆ ಯಾವುದೇ ಅರ್ಥ ಅದಕ್ಕೆ ಕಲ್ಪಿಸಬೇಡಿ. ಆಕೆ ಕಾರು ಖರೀದಿಸಿದಾಗ ನನ್ನ ಕೈಯಾರೆ ತೆಗೆದುಕೊಳ್ಳಬೇಕು ಎಂದುಕೊಂಡಳು. ನಾನು ಕಾರ್ ಕೀ ಕೊಟ್ಟೆ. ಅದನ್ನು ನೋಡಿ ನಾನೇ ಕಾರ್ ಗಿಫ್ಟ್ ಕೊಟ್ಟೆ ಅಂತೆಲ್ಲ ಸುದ್ದಿಯಾಯಿತು" ಎಂದು ವೆಂಕಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಹುಭಾಷಾ ನಟಿ ಅಂಜಲಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಹೊಂಗನಸು' ಸಿನಿಮಾ ಮೂಲಕ ಆಕೆ ಸ್ಯಾಂಡಲ್‌ವುಡ್ ಪ್ರವೇಶಿಸಿದರು. 'ರಣವಿಕ್ರಮ', 'ಬೈರಾಗಿ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ಮಿಂಚಿದ್ದರು. 'ಈಗೈ' ಎಂಬ ತಮಿಳು ಸಿನಿಮಾ ಈಗ ಆಕೆಯ ಕೈಯಲ್ಲಿದೆ.
ಬರಹಗಾರರಾಗಿ ಕೊನ ವೆಂಕಟ್ ಟಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. 'ಬಾದ್‌ಶಾ', 'ದೂಕುಡು', 'ರೆಡಿ', 'ಬಾಲು', 'ಶಿವಮಣಿ', 'ಕಿಂಗ್' ಹೀಗೆ ಹಲವು ಸಿನಿಮಾಗಳಿಗೆ ಕೊನ ವೆಂಕಟ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಕೆಲ ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿ ಹಣ ಹೂಡಿದ್ದಾರೆ.


Click it and Unblock the Notifications











