ಆಚಾರ್ಯ ಲಾಸ್: ಹಣ ಹಿಂತಿರುಗಿಸಿದ ಕೊರಟಾಲ ಶಿವ, ಚಿರಂಜೀವಿ ವಾಪಸ್ ಕೊಟ್ಟಿದ್ದೆಷ್ಟು?
ಚಿರಂಜೀವಿ, ರಾಮ್ ಚರಣ್ ತೇಜ ನಟನೆಯ 'ಆಚಾರ್ಯ' ಸಿನಿಮಾ ಇತ್ತೀಚಿನ ಅತಿ ದೊಡ್ಡ ಫ್ಲಾಪ್ ಎನಿಸಿಕೊಂಡಿದೆ. ಸಿನಿಮಾ ಖರೀದಿಸಿದ್ದ ವಿತರಕರು ತೀವ್ರ ನಷ್ಟ ಅನುಭವಿಸಿದ್ದಾರೆ.
ಸಿನಿಮಾ ವಿತರಕರು ತಾವು ನಷ್ಟ ಹೋಗಿದ್ದು ಪರಿಹಾರ ನೀಡಿ ಎಂದು ಆರಂಭದಿಂದಲೂ ಮೆಗಾಸ್ಟಾರ್ ಚಿರಂಜೀವಿಯವರನ್ನು ಒತ್ತಾಯಿಸುತ್ತಲೇ ಇದ್ದರು. ಅಮೆರಿಕಕ್ಕೆ ದೀರ್ಘ ಪ್ರವಾಸ ತೆರಳಿದ್ದ ಚಿರಂಜೀವಿ, ಅಮೆರಿಕದಿಂದ ವಾಪಸ್ಸಾದ ಬಳಿಕ ಸೆಟಲ್‌ಮೆಂಟ್ ಮಾಡುವುದಾಗಿ ಹೇಳಿದ್ದರು.
ಅಂತೆಯೇ ಚಿರಂಜೀವಿ ವಾಪಸ್ಸಾಗಿದ್ದು, ಮೊದಲಿಗೆ 'ಆಚಾರ್ಯ' ಸಿನಿಮಾ ಯಾವ ಯಾವ ಏರಿಯಾಗಳಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಎಂಬ ಲೆಕ್ಕವನ್ನು ತರಿಸಿಕೊಂಡಿದ್ದಾರೆ. ಬಳಿಕ ಸಿನಿಮಾಕ್ಕೆ ಕೆಲಸ ಮಾಡಿದ ಎಲ್ಲರೂ ಇಂತಿಷ್ಟು ಸಂಭಾವನೆ ಮರಳಿಸಬೇಕೆಂದು ಹೇಳಿದ್ದಾರೆ.

ಅಂತೆಯೇ ನಿರ್ದೇಶಕ ಕೊರಟಾಲ ಶಿವ, ಸಿನಿಮಾ ಸೋಲಿನ ಸಂಪೂರ್ಣ ಜವಾಬ್ದಾರಿ ಹೊತ್ತು ತಮಗೆ ದೊರೆತ ಸಂಭಾವನೆಯ ಬಹುಭಾಗವನ್ನು ಮರಳಿಸಿದ್ದಾರೆ ಎನ್ನಲಾಗುತ್ತಿದೆ.
ತೆಲುಗಿನ ಸುದ್ದಿವಾಹಿಗಳ ವರದಿ ಪ್ರಕಾರ, ನಿರ್ದೇಶಕ ಕೊರಟಾಲ ಶಿವ ಬರೋಬ್ಬರಿ 33 ಕೋಟಿ ರುಪಾಯಿ ಹಣವನ್ನು ಮರಳಿಸಿದ್ದಾರಂತೆ. ತಮಗೆ ಹೇಳಿದ್ದಕ್ಕಿಂತಲೂ ಹೆಚ್ಚಿನ ಹಣವನ್ನು ಕೊರಟಾಲ ಶಿವ ಮರಳಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಸೋಲಿನ ಪೂರ್ಣ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡು ಈ ಕಾರ್ಯ ಮಾಡಿದ್ದಾರೆ.
ಇನ್ನು ನಟ ಚಿರಂಜೀವಿ ಹತ್ತು ಕೋಟಿ ರುಪಾಯಿ ಹಣವನ್ನು ವಾಪಸ್ಸು ಮಾಡಿದ್ದಾರಂತೆ. ಅವಶ್ಯಕತೆ ಬಿದ್ದರೆ ಇನ್ನಷ್ಟು ಹಣವನ್ನು ಮರಳಿ ನೀಡುವ ಭರವಸೆಯನ್ನೂ ನೀಡಿದ್ದಾರೆ ಎನ್ನಲಾಗುತ್ತಿದೆ.
'ಆಚಾರ್ಯ' ಸಿನಿಮಾವನ್ನು ಅಮೆಜಾನ್ ಪ್ರೈಂಗೆ ಮಾರಾಟ ಮಾಡಲಾಗಿದ್ದು, ಅದರ ಫೈನಲ್ ಪೇಮೆಂಟ್ ಇನ್ನೂ ಬಂದಿಲ್ಲವಾದ್ದರಿಂದ ಆ ಹಣ ವಾಪಸ್ಸಾದ ಬಳಿಕ ಇತರರಿಗೆ ಪೇಮೆಂಟ್ ಸೆಟಲ್‌ಮೆಂಟ್ ಮಾಡುವ ಯೋಚನೆಯಲ್ಲಿದ್ದಾರೆ ನಿರ್ಮಾಪಕ ರಾಮ್ ಚರಣ್ ತೇಜ.
'ಆಚಾರ್ಯ' ಸಿನಿಮಾವು ಏಪ್ರಿಲ್ 29 ರಂದು ಬಿಡುಗಡೆ ಆಗಿತ್ತು. ಚಿರಂಜೀವಿ, ರಾಮ್ ಚರಣ್ ತೇಜ, ಪೂಜಾ ಹೆಗ್ಡೆ ಇದ್ದ ಈ ಸಿನಿಮಾ ಧಾರುಣವಾಗಿ ನೆಲಕಚ್ಚಿತ್ತು. ಕೋಟಿಗಟ್ಟಲೆ ಹಣ ನೀಡಿ ಸಿನಿಮಾ ಖರೀದಿಸಿದ್ದ ವಿತರಕರು ತೀವ್ರ ನಷ್ಟ ಅನುಭವಿಸಿದರು. ಬಳಿಕ ಚಿರಂಜೀವಿಗೆ ಪತ್ರ ಬರೆದು ತಮಗೆ ನಷ್ಟವಾಗಿದ್ದು, ನಷ್ಟವಾಗಿದ್ದು ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಅಂತೆಯೇ ಚಿರಂಜೀವಿ ಪರಿಹಾರ ನೀಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











