ವಿಜಯ್ ದೇವರಕೊಂಡ ಅವರ ಎಲ್ಲ ಗುಣಗಳು ನನಗೆ ಇಷ್ಟ- ರಶ್ಮಿಕಾ ಮಂದಣ್ಣ !
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ತುಂಬಾನೇ ಸಲೀಸು ಎಂಬಂತೆ ನಡೆದು ಹೋಗಿದೆ.
ಇಂಥಾ ರಶ್ಮಿಕಾ ಮಂದಣ್ಣ ಆಂಧ್ರದ ರೌಡಿ ವಿಜಯ್ ದೇವರಕೊಂಡ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಎನ್ನುವ ಅನುಮಾನ ಅನೇಕರಿಗೆ ಇದೆ. ಇಬ್ಬರ ನಡುವೆ ಇರುವುದು ಸ್ನೇಹ ಅಲ್ಲ ಬದಲಿಗೆ ಪ್ರೇಮ ಎನ್ನುವ ಮಾತು ಆಗಾಗ ಕೇಳಿ ಬರುತ್ತೆ. ಇದಕ್ಕೆ ಪೂರಕವಾಗಿ ಇಬ್ಬರ ನಡಾವಳಿ ಕೂಡ ಹಾಗೇ ಇದೆ. ಗೋವಾದಿಂದ ಹಿಡಿದು ಅಮೆರಿಕಾದವರೆಗೆ ಜೊತೆ ಜೊತೆಯಾಗಿಯೇ ಪ್ರವಾಸಕ್ಕೆ ತೆರಳುವ ಇಬ್ಬರು ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಜೊತೆಯಲ್ಲಿ ಆಚರಿಸುತ್ತಾ ಬಂದಿದ್ದಾರೆ.

ಇದರ ನಡುವೆ ಈಗ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ವಿಜಯ್ ದೇವರಕೊಂಡ ಕುರಿತು ಕೇಳಲಾದ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ. ಹೌದು, ಅಸಲಿಗೆ ರಶ್ಮಿಕಾ ಅಭಿನಯದ ಕುಬೇರ ಚಿತ್ರ ಈ ಜೂನ್ 20ರಂದು ತೆರೆಗೆ ಬರಲಿದೆ.
ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ನಿರೂಪಕಿ ಸುಮಾ, ರಶ್ಮಿಕಾ ಮಂದಣ್ಣಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ಸಮಯದಲ್ಲಿ ವಿಜಯ್ ದೇವರಕೊಂಡ ಹೆಸರನ್ನು ಕೂಡ ಪ್ರಸ್ತಾಪಿಸಿದ್ಧಾರೆ. ಆಗ ರಶ್ಮಿಕಾ ಮಂದಣ್ಣ ಅವರ ಮುಖ ಅರಳಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಈ ಕೆಳಗಿನವರಲ್ಲಿ ನೀವು ಯಾರಿಂದ ಏನೂ ಕದಿಯಲು ಬಯಸುತ್ತೀರಾ ಎಂದು ನಿರೂಪಕಿ ಸುಮಾ, ರ್ಯಾಪಿಡ್ ರೌಂಡ್ ಪ್ರಶ್ನೆಗಳನ್ನು ಶುರು ಮಾಡಿದ್ಧಾರೆ. ಮೊದಲಿಗೆ ನಾಗಾರ್ಜುನ ಹೆಸರನ್ನು ಸುಮಾ ತೆಗೆದುಕೊಂಡಾಗ ರಶ್ಮಿಕಾ ಅವರ ಚಾರ್ಮ್ ಮತ್ತು ಅವರು ಬೀರುವ ಪ್ರಭಾವ ಕದಿಯುವುದಾಗಿ ಹೇಳಿದ್ದಾರೆ.
ಆ ನಂತರ ಧನುಷ್ ಸರದಿ ಬಂದಾಗ ಅವರ ನೃತ್ಯ, ಅವರ ಅಭಿನಯ, ಅವರ ನಿರ್ದೇಶನದ ಕಲೆ, ಇಷ್ಟೇ ಅಲ್ಲ ಕೆಲಸ ಮಾಡುವ ಅವರ ಸಾಮರ್ಥ್ಯವನ್ನು ಕದಿಯುವುದಾಗಿ ರಶ್ಮಿಕಾ ಹೇಳಿದ್ದಾರೆ. ಆ ನಂತರ ಅಲ್ಲು ಅರ್ಜುನ್ ಅವರ ಸ್ವ್ಯಾಗ್ ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ವಿಜಯ್ ದೇವರಕೊಂಡ ಅವರ ಹೆಸರನ್ನು ಸುಮಾ ಪ್ರಸ್ತಾಪಿಸಿದ್ದಾರೆ. ಆಗ ಇಡೀ ಸಭಾಂಗಣದಲ್ಲಿ ನೆರೆದ ಜನಸ್ತೋಮ ಹುಚ್ಚೆದ್ದು ರಣಕೇಕೆ ಹಾಕಿದೆ. ಇದರಿಂದ ಇನ್ನೂ ನಾಚಿಕೊಂಡ ರಶ್ಮಿಕಾ ವಿಜಯ್ ಅವರಲ್ಲಿ ನನಗೆ ಎಲ್ಲವೂ ಇಷ್ಟ ಎಂದು ಹೇಳಿದ್ದಾರೆ. ನಗೆಯನ್ನು ಬೀರಿದ್ದಾರೆ.
ಸದ್ಯ ವಿಜಯ್ ದೇವರಕೊಂಡ ಕುರಿತು ರಶ್ಮಿಕಾ ಮಾತನಾಡಿರುವ ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನುಳಿದಂತೆ ಕಳೆದ ವರ್ಷದ ಅಂತ್ಯದಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಇದಕ್ಕೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಉತ್ತರವನ್ನು ನೀಡದಿದ್ದರು ಕೂಡ ಅನೇಕರು ಹಬ್ಬಿರುವ ಸುದ್ದಿ ನಿಜಾ ಎಂದೇ ವಾದ ಮಾಡುತ್ತಿದ್ದಾರೆ.
ಈ ವಾದಕ್ಕೆ ಪುಷ್ಠಿ ನೀಡುವಂತೆ ಅನೇಕ ವೇದಿಕೆಗಳಲ್ಲಿ ರಶ್ಮಿಕಾ ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಪರೋಕ್ಷವಾಗಿ ಹೇಳುತ್ತಲೇ ಬರುತ್ತಿದ್ಧಾರೆ. ಪುಷ್ಪ 2 ಚಿತ್ರದ ಬಿಡುಗಡೆ ಸಮಯದಲ್ಲಿ ಖೂಡ ರಶ್ಮಿಕಾಗೆ ನಿರೂಪಕರು ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನನ್ನು ಹುಡುಕುತ್ತೇವೆ ಎಂದು ಕೇಳಿದಾಗ ನಸು ನಕ್ಕಿದ್ದ ರಶ್ಮಿಕಾ ಎಲ್ಲರಿಗೂ ಈ ವಿಷಯ ಗೊತ್ತು ಎಂದು ಹೇಳಿದ್ದರು.


Click it and Unblock the Notifications











