ನಾನು ಆ ಚಿತ್ರ ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಟಾರ್ಗೆಟ್ ಮಾಡಿದ್ರು; ಲಾವಣ್ಯ ತ್ರಿಪಾಠಿ
ತೆಲುಗು ನಟಿ ಲಾವಣ್ಯ ತ್ರಿಪಾಠಿ ಮದುವೆ ಆಗಿ ಒಂದು ಮಗುವಿನ ತಾಯಿಯಾದ ಬಳಿಕ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಮಾನಸಿಕ ಕಿರುಕುಳ ನೀಡಿದ ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದರು. ಹೈದರಾಬಾದ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿ ತಮಗೆ ಚಿತ್ರರಂಗದಲ್ಲಿ ಎದುರಾಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿ ಬೆಳೆದ ಲಾವಣ್ಯ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. ಬಳಿಕ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 'ಅಂದಾಲ ರಾಕ್ಷಸಿ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. 'ಮಿಸ್ಟರ್' ಎಂಬ ಚಿತ್ರದಲ್ಲಿ ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಜೊತೆ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಶುರುವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಪೋಷಕರ ಒಪ್ಪಿಗೆ ಪಡೆದು ಇಬ್ಬರೂ ಅದ್ಧೂರಿಯಾಗಿ ಮದುವೆ ಆಗಿದ್ದರು.

ತೆಲುಗು ಮಾತ್ರವಲ್ಲದೇ ಒಂದೆರಡು ತಮಿಳು ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತಮಿಳು ಚಿತ್ರವೊಂದರಲ್ಲಿ ಅವಕಾಶ ಸಿಕ್ಕಿತ್ತು. ಆ ಚಿತ್ರದ ನಿರ್ದೇಶಕನ ಜೊತೆ ನಟಿಸುವುದು ಇಷ್ಟವಾಗಲಿಲ್ಲ. ಹಾಗಾಗಿ ನೋ ಎಂದಿದ್ದೆ. ಅದೇ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಿದ್ದರು ಎಂದು ಲಾವಣ್ಯ ನೆನಪಿಸಿಕೊಂಡಿದ್ದಾರೆ. Mahi originals ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ಲಾವಣ್ಯ ಮಾತನಾಡಿ "ಒಂಟಿ ಮಹಿಳೆ ಆಗಿದ್ದಾಗ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಇದ್ದರೆ ಯಾರೊಬ್ಬರು ಸಹಾಯ ಮಾಡಲ್ಲ. ಒಮ್ಮೆ ಒಂದು ಚಿತ್ರದಲ್ಲಿ ನಾನು ನಟಿಸಬೇಕಿತ್ತು. ನನಗೆ ಯಾಕೋ ಆ ಚಿತ್ರದಲ್ಲಿ ನಟಿಸೋದು ಸರಿ ಎನಿಸಲಿಲ್ಲ. ಆ ನಿರ್ದೇಶಕನ ಜೊತೆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ನಾನೇ ತಪ್ಪು ಇರಬಹುದು. ಆದರೆ ನನಗೆ ಕಂಫರ್ಟ್ ಅನಿಸಲಿಲ್ಲ. ನಾನು ನೋ ಎಂದುಬಿಟ್ಟೆ. ಬಳಿಕ ಅವ್ರು ನನ್ನ ವಿರುದ್ಧ ಕೇಸ್ ಹಾಕಿದ್ರು. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರು. ಈಗ ಈ ಬಗ್ಗೆ ಮಾತನಾಡುತ್ತಿದ್ದೇನೆ. ಆಗ ಹೇಳಲು ಸಾಧ್ಯವಾಗಿರಲಿಲ್ಲ" ಎಂದಿದ್ದಾರೆ.
ಆ ಘಟನೆ ಸಮಯದಲ್ಲಿ ಬಹಳ ಅತ್ತುಬಿಟ್ಟೆ. ಸಾಮಾನ್ಯವಾಗಿ ನಾನು ಅಳುವುದಿಲ್ಲ. ಆದರೆ ಅಳುವುದು ಒಳ್ಳೆಯದು. ಅದು ಹುಡುಗ, ಹುಡುಗಿ ಯಾರೇ ಆಗಿರಲಿ. ನನಗೂ ಅಂತಹ ಸನ್ನಿವೇಶ ಎದುರಾಗಿತ್ತು ಎಂದು ಲಾವಣ್ಯ ಹೇಳಿದ್ದಾರೆ. "ಅದಾಗಲೇ ನಾನು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ ಯಾಕೆ ನನಗೆ ಅಂತಹ ಪರಿಸ್ಥಿತಿ ಎದುರಾಗಿತ್ತು ಗೊತ್ತಿಲ್ಲ. ಆಗ ಬಹಳ ಸಮಸ್ಯೆ ತಂದೊಡ್ಡಿದ್ದರು. ಎಲ್ಲವನ್ನು ಎದುರಿಸಿದೆ. ಬಳಿಕ ಹೊರಬಂದೆ" ಎಂದು ಆಕೆ ವಿವರಿಸಿದ್ದಾರೆ.
ಇದೇ ಸಂದರ್ಶನದಲ್ಲಿ 'ಗೀತಗೋವಿಂದಂ' ಚಿತ್ರದಲ್ಲಿ ನಾನು ನಟಿಸಬೇಕಿತ್ತು. ನಾಯಕಿ ಪಾತ್ರಕ್ಕೆ ಮೊದಲಿಗೆ ನನ್ನನ್ನು ಕೇಳಿದ್ರು. ಒಪ್ಪಿರಲಿಲ್ಲ. ಬಳಿಕ ಕಥೆ ಕೇಳಿ ಇಷ್ಟಪಟ್ಟಿದ್ದೆ. ಸಿನಿಮಾ ಗೆಲ್ಲುತ್ತದೆ ಎಂದು ಅನ್ನಿಸಿತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಸಾಧ್ಯವಾಗಲಿಲ್ಲ. ಬಳಿಕ ರಶ್ಮಿಕಾ ನಟಿಸಿದರು. ಈಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಆಗಿದ್ದಾರೆ. ಅವರಿಗೆ ಶುಭವಾಗಲಿ ಎಂದು ಲಾವಣ್ಯ ತಿಳಿಸಿದ್ದಾರೆ.
ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ನಟನೆಯ 'ಥನಾಲ್' ಎಂಬ ತಮಿಳು ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. 'ಸತಿ ಲೀಲಾವತಿ' ಎಂಬ ಮತ್ತೊಂದು ಚಿತ್ರದಲ್ಲಿ ಟೈಟಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.


Click it and Unblock the Notifications