2023ರ ಮೊದಲ 6 ತಿಂಗಳಲ್ಲಿ ಅತಿಹೆಚ್ಚು ನಷ್ಟ ಕಂಡ ತೆಲುಗು ಚಿತ್ರಗಳು; ಆದಿಪುರುಷ್‌ಗೆ ಪೈಪೋಟಿ ಕೊಡ್ತಿದೆ ಈ ಚಿತ್ರ!
2023ರ ಮೊದಲ ಆರು ತಿಂಗಳು ಮುಕ್ತಾಯಗೊಂಡಿವೆ. ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ವಿವಿಧ ಚಿತ್ರರಂಗಗಳು ಈ ವರ್ಷವೂ ಸಹ ಒಳ್ಳೆಯ ಗಳಿಕೆಯನ್ನು ಮಾಡಿವೆ. ತಮಿಳು ಚಿತ್ರರಂಗದ ಅನೇಕ ಚಿತ್ರಗಳು ನೂರು ಕೋಟಿ ಗಳಿಕೆಯನ್ನು ಮಾಡಿದ್ದು, ತೆಲುಗು ಚಿತ್ರೆರಂಗದಿಂದಲೂ ಸಹ ಅನೇಕ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ.
ಇನ್ನು ಮಲಯಾಳಂ ಚಿತ್ರರಂಗದ ಚಿತ್ರಗಳೂ ಸಹ ಈ ವರ್ಷದ ಮೊದಲಾರ್ಧದಲ್ಲಿ ಸದ್ದು ಮಾಡಿದ್ದು, ಬಾಲಿವುಡ್ ಚಿತ್ರರಂಗ ಎಲ್ಲಾ ಚಿತ್ರರಂಗಗಳನ್ನೂ ಸಹ ಹಿಂದಿಕ್ಕಿ ಮೇಲುಗೈ ಸಾಧಿಸಿದೆ ಎನ್ನಬಹುದು. ಹೌದು, ಬಾಲಿವುಡ್‌ನ ಪಠಾಣ್ ಚಿತ್ರ ಈ ವರ್ಷ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಗಳಿಕೆ ಮಾಡಿದ್ದು, ವರ್ಷದಲ್ಲಿ ಇಲ್ಲಿಯವರೆಗೂ ಈ ಸಾಧನೆ ಮಾಡಿದ ಭಾರತದ ಏಕೈಕ ಚಿತ್ರ ಎನಿಸಿಕೊಂಡಿದೆ.

ಪಠಾಣ್ಮಾತ್ರವಲ್ಲದೇ ಬಾಲಿವುಡ್‌ನ ದ ಕೇರಳ ಸ್ಟೋರಿ, ತೂ ಜೂತಿ ಮೈನ್ ಮಕ್ಕರ್ ಮುಂತಾದ ಹಿಂದಿ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿವೆ. ಹೀಗೆ ಅಬ್ಬರಿಸಿದ ಬಾಲಿವುಡ್ ಚಿತ್ರಗಳ ನಡುವೆ ಆದಿಪುರುಷ್ ಮಕಾಡೆ ಮಲಗಿದೆ.
ಈ ಚಿತ್ರ ನಿರ್ಮಾಪಕರಿಗೆ ಬರೋಬ್ಬರಿ 200 ಕೋಟಿ ನಷ್ಟವನ್ನು ಉಂಟು ಮಾಡಿದ್ದು, ತೆಲುಗಿಗೂ ಸಹ ಡಬ್ ಆಗಿ ಬಿಡುಗಡೆಯಾಗಿದ್ದ ಈ ಚಿತ್ರ ತೆಲುಗಿನಲ್ಲಿಯೂ 50 ಕೋಟಿ ನಷ್ಟವನ್ನು ಅನುಭವಿಸಿದೆ. ಹೌದು, ತೆಲುಗು ರಾಜ್ಯಗಳಲ್ಲಿ ಭರ್ಜರಿ ಫ್ಯಾನ್ ಬೇಸ್ ಹೊಂದಿರುವ ಪ್ರಭಾಸ್ ನಟನೆಯ ಈ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಇರದಿದ್ದ ಕಾರಣ ದೊಡ್ಡ ನಷ್ಟವನ್ನು ಅನುಭವಿಸಿದೆ. ಈ ಮೂಲಕ ಆದಿಪುರುಷ್ ತೆಲುಗು ಅವತರಣಿಕೆ ಈ ವರ್ಷದ ಮೊದಲ 6 ತಿಂಗಳಿನಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿದ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಹಾಗಿದ್ದರೆ ಈ ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿದ ತೆಲುಗು ಚಿತ್ರಗಳು ಯಾವುವು ಹಾಗೂ ಆ ಚಿತ್ರಗಳು ಎಷ್ಟು ಕೋಟಿ ರೂಪಾಯಿ ನಷ್ಟವನ್ನು ಮಾಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಪ್ರಭಾಸ್ ನಟನೆಯ ಹಿಂದಿ ಸಿನಿಮಾ ಆದಿಪುರುಷ್‌ನ ತೆಲುಗು ವರ್ಷನ್ 50 ಕೋಟಿ ರೂಪಾಯಿ ನಷ್ಟವನ್ನು ಮಾಡಿ ಈ ವರ್ಷ ಅತಿಹೆಚ್ಚು ನಷ್ಟ ಅನುಭವಿಸಿದ ತೆಲುಗು ಸಿನಿಮಾ ಎನಿಸಿಕೊಂಡಿದೆ.
2. ಸಮಂತಾ ರುತ್ ಪ್ರಭು ನಟನೆಯ ಬಹು ನಿರೀಕ್ಷಿತ ಚಿತ್ರ ಶಾಕುಂತಲಂ ಈ ವರ್ಷ ಅತಿಹೆಚ್ಚು ನಷ್ಟ ಅನುಭವಿಸಿದ ಎರಡನೇ ತೆಲುಗು ಚಿತ್ರ ಎನಿಸಿಕೊಂಡಿದೆ. ಶಾಕುಂತಲಂ ಚಿತ್ರ ಸಹ 50 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.
3. ಅಖಿಲ್ ಅಕ್ಕಿನೇನಿ ನಟನೆಯ ಏಜೆಂಟ್ ಸಿನಿಮಾ 33 ಕೋಟಿ ರೂಪಾಯಿ ನಷ್ಟ ಕಂಡಿದ್ದು, ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ನಷ್ಟ ಅನುಭವಿಸಿದ ತೆಲುಗು ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
4. ಅಕ್ಕಿನೇನಿ ನಾಗಚೈತನ್ಯ ನಟನೆಯ ಕಸ್ಟಡಿ ಚಿತ್ರ 18 ಕೋಟಿ ನಷ್ಟ ಅನುಭವಿಸಿದ್ದು, ವರ್ಷದ ಮೊದಲ ಆರು ತಿಂಗಳುಗಳಲ್ಲಿ ಅತಿಹೆಚ್ಚು ನಷ್ಟ ಕಂಡ ತೆಲುಗು ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
5. ಗೋಪಿಚಂದ್ ನಟನೆಯ ರಾಮಬಾಣಂ ಸಿನಿಮಾ 16 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ವರ್ಷದ ಮೊದಲಾರ್ಧದಲ್ಲಿ ಅತಿಹೆಚ್ಚು ನಷ್ಟ ಕಂಡ ತೆಲುಗು ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.


Click it and Unblock the Notifications











