'ಲವ್ ಮಾಕ್ಟೇಲ್' ರೀಮೇಕ್: ತೆಲುಗಿನಲ್ಲಿ ಸಿನಿಮಾದ ಹೆಸರು ಅಂತಿಮ
'ಲವ್ ಮಾಕ್ಟೇಲ್' 2020ಯಲ್ಲಿ ಕನ್ನಡದ ಹಿಟ್ ಸಿನಿಮಾಗಳಲ್ಲಿ ಒಂದು. ಪ್ರೇಮಕತೆಯನ್ನು ಬಹು ತಾಜಾ ಆಗಿ ಹೇಳಿದ್ದ ಡಾರ್ಲಿಂಗ್ ಕೃಷ್ಣ ತೆರೆಯ ಮೇಲೆ ಯುವಕರ ಭಾವನೆಗಳ ಜೊತೆ ಆಟವಾಡಿದ್ದರು.
Recommended Video
ಚಿತ್ರಮಂದಿರಗಳಲ್ಲಿ ಚೆನ್ನಾಗಿಯೇ ಪ್ರದರ್ಶನ ಕಂಡಿದ್ದ ಈ ಸಿನಿಮಾ, ಹೆಚ್ಚಿನ ಪ್ರೇಕ್ಷಕರಿಗೆ ತಲುಪಿದ್ದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ಬಳಿಕ.
ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಇನ್ನೂ ಹಲವರು ನಟಿಸಿದ್ದ ಈ ಸಿನಿಮಾ ಇದೀಗ ತೆಲುಗಿಗೆ ರೀಮೇಕ್ ಆಗುತ್ತಿದ್ದು, ಸ್ಟಾರ್ ನಟಿ ತಮನ್ನಾ 'ನಿಧಿಮಾ' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾದ ಹೆಸರೂ ಸಹ ಅಂತಿಮವಾಗಿದ್ದ, ಭಿನ್ನವಾದ ಹೆಸರಿಟ್ಟಿದೆ ಚಿತ್ರತಂಡ.

ನಾಯಕ ಪಾತ್ರದಲ್ಲಿ ಸತ್ಯದೇವ್
ಲವ್ ಮಾಕ್‌ಟೇಲ್ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಪ್ರತಿಭಾನ್ವಿತ ನಟ ಸತ್ಯದೇವ್ ನಟಿಸುತ್ತಿದ್ದು, ಸಿನಿಮಾಕ್ಕೆ 'ಗುರ್ತುಂದಾ ಸೀತಾಕಾಲಂ' ಎಂದು ಹೆಸರಿಡಲಾಗಿದೆ. ಸಿನಿಮಾ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

ಸಿನಿಮಾಕ್ಕೆ ಹೆಸರು ಚೆನ್ನಾಗಿ ಒಪ್ಪುತ್ತದೆ
'ಗುರ್ತುಂದಾ ಸೀತಾಕಾಲಂ' ನ ಕನ್ನಡ ಅನುವಾದ 'ನೆನಪಿದೆಯೇ ಚಳಿಗಾಲ' ಎಂದಾಗುತ್ತದೆ. ನಾಯಕ ನಟ ತನ್ನ ನೆನಪಿನ ಸುರಳಿಗಳನ್ನು ಬಿಚ್ಚುವ ಕತೆಯ ಸಿನಿಮಾಕ್ಕೆ ಈ ಹೆಸರು ಚೆನ್ನಾಗಿ ಒಪ್ಪುತ್ತದೆ ಎಂಬುದು ಲವ್ ಮಾಕ್ಟೆಲ್ ಅಭಿಮಾನಿಗಳ ಅಭಿಪ್ರಾಯ.

ನಾಗಶೇಖರ್ ನಿರ್ದೇಶನ
ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್, ತೆಲುಗಿನಲ್ಲಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾದ ಇನ್ನಿತರೆ ಪಾತ್ರವರ್ಗವನ್ನು ಇನ್ನಷ್ಟೆ ಪರಿಚಯಿಸಬೇಕಿದೆ. ಸಿನಿಮಾಕ್ಕಾಗಿ ಲೊಕೇಶನ್ ಹುಡುಕುವ ಕಾರ್ಯ ನಡೆಯುತ್ತಿದೆ.

'ಲವ್ ಮಾಕ್ಟೆಲ್ 2' ಫರ್ಸ್ಟ್ ಲುಕ್ ಬಿಡುಗಡೆ
ಕನ್ನಡದಲ್ಲಿ ಹಿಟ್ ಆದ 'ಲವ್ ಮಾಕ್ಟೆಲ್' ಸಿನಿಮಾದ ಎರಡನೇ ಭಾಗ ಸಹ ಬರಲಿದ್ದು, ಲವ್ ಮಾಕ್ಟೆಲ್ 2 ಸಿನಿಮಾದ ಲುಕ್ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಲಾಕ್‌ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭವಾಗಲಿದೆ.


Click it and Unblock the Notifications











