ಕನ್ನಡ ನಟನ ಮೇಲೆ ಮಹಿಳೆಯಿಂದ ಹಲ್ಲೆ ಪ್ರಕರಣ; ಇದು ಪಬ್ಲಿಸಿಟಿ ಗಿಮಿಕ್ಕಾ?
ಸಿನಿಮಾ ನೋಡಿ ನಟ, ನಟಿಯರ ಅಭಿನಯವನ್ನು, ಅವರ ಪಾತ್ರಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ, ಪ್ರೀತಿಸುತ್ತಾರೆ. ಅದೇ ರೀತಿ ನೆಗೆಟಿವ್ ಪಾತ್ರಗಳ ಬಗ್ಗೆ ಬೇಸರ, ಆಕ್ರೋಶ, ದ್ವೇಷ ಬೆಳೆಸಿಕೊಳ್ಳುವುದು ಇದೆ. ಕನ್ನಡದ ಖ್ಯಾತ ಖಳನಟರಿಗೆ ಇಂತಹ ಅನುಭವ ಆಗಿರುವುದು ಇದೆ. ಅಷ್ಟರಮಟ್ಟಿಗೆ ಸಿನಿಮಾ ಪ್ರಭಾವ ಬೀರುತ್ತದೆ.
ರಿಯಾಲಿಟಿಗೆ ಬಹಳ ಹತ್ತಿರವಿರುವ ಪಾತ್ರಗಳನ್ನು ಪ್ರೇಕ್ಷಕರು ಬಹಳ ಹಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ತೆಲುಗಿನ 'ಲವ್ ರೆಡ್ಡಿ' ಎಂಬ ಸಿನಿಮಾ ಬಿಡುಗಡೆ ಆಗಿದೆ. ಚಿತ್ರದಲ್ಲಿ ಕನ್ನಡ ನಟ ಎನ್. ಟಿ ರಾಮಸ್ವಾಮಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರೇಮಿಗಳನ್ನು ದೂರ ಮಾಡುವ ಪಾತ್ರ ಅದು. ಆದರೆ ಚಿತ್ರದ ಸ್ಕ್ರೀನಿಂಗ್ ವೇಳೆ ಮಹಿಳೆಯೊಬ್ಬರು ಬಂದು ಎನ್. ಟಿ ರಾಮಸ್ವಾಮಿ ಮೇಲೆ ಹಲ್ಲೆ ಮಾಡಿ ರಂಪಾಟ ಮಾಡಿದ್ದಾರೆ. ಪ್ರೇಮಿಗಳನ್ನು ದೂರ ಮಾಡ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

ಅಂಜನ್ ಹಾಗೂ ಶ್ರಾವಣಿ 'ಲವ್ ರೆಡ್ಡಿ' ಚಿತ್ರ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಗುರುವಾರ ಚಿತ್ರತಂಡ ಹೈದರಾಬಾದ್ ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿತ್ತು. ನಿಜಾಂಪೇಟೆಯ ಜಿಪಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರತಂಡ ವೇದಿಕೆ ಏರಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿತ್ತು. ಈ ವೇಳೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಮಹಿಳೆ ಏಕಾಏಕಿ ವೇದಿಕೆ ಏರಿ ಬಂದು ನಟ ಎನ್. ಟಿ ರಾಮಸ್ವಾಮಿ ಮೇಲೆ ಹಲ್ಲೆಗೆ ಯತ್ನಿಸಿದ್ದರು.
ಅಂದಹಾಗೆ 'ಲವ್ ರೆಡ್ಡಿ' ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಭಾವುಕರಾದ ಮಹಿಳೆ ಚಿತ್ರದಲ್ಲಿ ಅಪ್ಪನ ಪಾತ್ರ ನಿರ್ವಹಿಸಿದ್ದ ಎನ್. ಟಿ. ರಾಮಸ್ವಾಮಿ ಜೋಡಿಯನ್ನು ನಿಜವಾಗಿಯೂ ದೂರ ಮಾಡಿದ್ದಾರೆ ಎಂದು ಭಾವಿಸಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಳೆದೆರಡು ದಿನಗಳಿಂದ ಈ ವೀಡಿಯೋ ವೈರಲ್ ಆಗಿ ಭಾರೀ ಸದ್ದು ಮಾಡ್ತಿದೆ. ಆದರೆ ಕೆಲವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
'ಲವ್ ರೆಡ್ಡಿ' ಚಿತ್ರದ ಪಬ್ಲಿಸಿಟಿಗಾಗಿ ಚಿತ್ರತಂಡವೇ ಇಂತಾದೊಂದು ಗಿಮಿಕ್ ಮಾಡಿದ್ಯಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಬಿಡುಗಡೆ ಆಗಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರು ಸಿನಿಮಾ ಚೆನ್ನಾಗಿದೆ ಎಂದಿದ್ದರು. ಬಳಿಕ ನಟ ಪ್ರಭಾಸ್ ಸಹ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಬೆಂಬಲ ಸೂಚಿಸಿದ್ದರು. ಇನ್ನು ಸಿನಿಮಾ ಬಿಡುಗಡೆಯಾದ ವಾರಕ್ಕೆ 'ಬ್ಲಾಕ್‌ಬಸ್ಟರ್ ಬಟ್ ಫೇಲ್ಯೂರ್ ಮೀಟ್' ಎಂದು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತ್ತು.
ಸಾಮಾನ್ಯವಾಗಿ ಸಿನಿಮಾ ಗೆದ್ದರೆ ಸಕ್ಸಸ್ ಮೀಟ್ ಮಾಡುತ್ತಾರೆ. ಆದರೆ ಏನಿದು 'ಫೇಲ್ಯೂರ್ ಮೀಟ್' ಎಂದು ಕೆಲವರು ಕೇಳಿದ್ದರು. ಇದು ಒಂದು ರೀತಿ ಗಮನ ಸೆಳೆಯುವ ಪ್ರಯತ್ನ, ಪಬ್ಲಿಸಿಟಿಗಾಗಿ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದ ಕನ್ನಡ ನಟ ಎನ್. ಟಿ ರಾಮಾಸ್ವಾಮಿ ಮೇಲೆ ಮಹಿಳೆ ಹಲ್ಲೆ ಮಾಡಿದ್ದು ಕೂಡ ಇದೇ ರೀತಿ ಪಬ್ಲಿಸಿಟಿ ಗಿಮಿಕ್ ಎಂದು ಕೆಲವರು ವಾದಿಸುತ್ತಿದ್ದಾರೆ.
'ಲವ್ ರೆಡ್ಡಿ' ಸಿನಿಮಾ ನೋಡಿ ಸಾಕಷ್ಟು ಜನ ಮೆಚ್ಚಿಕೊಂಡಿದ್ಧಾರೆ. ಯುವಜನತೆಗೆ ಇಷ್ಟವಾಗಿದೆ. ಯಾವುದೇ ಪಬ್ಲಿಸಿಟಿ ಗಿಮಿಕ್ ಮಾಡುವ ಅಗತ್ಯ ಇಲ್ಲ. ನಿಜಕ್ಕೂ ರಾಮಸ್ವಾಮಿ ಅವರ ನಟನೆ ನೋಡಿ ಆ ಮಹಿಳೆ ಹೀಗೆ ಪ್ರತಿಕ್ರಿಯಿಸಿದ್ದಾರೆ ಎಂದು ಕೆಲವರು ಚಿತ್ರತಂಡದ ಪರ ನಿಂತಿದ್ದಾರೆ.
ಈ ಚಿತ್ರಕ್ಕೆ ಸ್ಮರಣ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಸುನಂದಾ ಬಿ ರೆಡ್ಡಿ, ಹೇಮಲತಾ ರೆಡ್ಡಿ, ರವೀಂದ್ರ ಜಿ ಸೇರಿ ಕೆಲವರು ಬಮಡವಾಳ ಹೂಡಿದ್ದಾರೆ. 'ಮುದ್ದುಲಕ್ಷ್ಮಿ' ಸೇರಿ ಕನ್ನಡದ ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟ ರಾಮಸ್ವಾಮಿ ನಟಿಸಿದ್ದಾರೆ. ಸದ್ಯ ಅವರ ಮೇಲೆ ಮಹಿಳೆ ಹಲ್ಲೆ ಘಟನೆಯಿಂದ 'ಲವ್ ರೆಡ್ಡಿ' ಸಿನಿಮಾ ಗಮನ ಸೆಳೆದಿರುವುದು ಸುಳ್ಳಲ್ಲ.


Click it and Unblock the Notifications











