ಲವ್ ಸ್ಟೋರಿಗೆ ಸಕ್ಕತ್ ರೆಸ್ಪಾನ್ಸ್-ಅಡ್ವಾನ್ಸ್ ಬುಕಿಂಗ್ ಜೋರು
ತೆಲುಗಿನ ಬಹುನಿರೀಕ್ಷಿತ ಚಿತ್ರ 'ಲವ್ ಸ್ಟೋರಿ'. ನಾಗಚೈತನ್ಯ- ಸಾಯಿಪಲ್ಲವಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಶೇಖರ್ ಕಮ್ಮೂಲ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ಪ್ರವೀಣ್ ಅವರ ಸಂಗೀತವಿದ್ದು ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆ ಮಾಡಲಾದ 'ಸಾರಂಗ ಧರಿಯ' ಹಾಡು ಯೂಟ್ಯೂಬ್ ಸೆನ್ಸೇಷನಲ್ ಆಗಿ ಚಿತ್ರದ ಮೇಲಿನ ನಿರೀಕ್ಷೆ ಗಳನ್ನು ಹೆಚ್ಚಿಸಿತ್ತು. ಇನ್ನು ಚಿತ್ರದ ಕಥೆಯ ವಿಷಯಕ್ಕೆ ಬರುವುದಾದರೆ ಸಣ್ಣ ಪಟ್ಟಣದ ಒಬ್ಬ ನಿರುದ್ಯೋಗಿ ಯುವಕ ಮತ್ತು ಯುವತಿಯ ಜೀವನದ ಕನಸುಗಳ ಸುತ್ತಲೂ 'ಲವ್ ಸ್ಟೋರಿ'ಕಥೆಯನ್ನು ಹೆಣೆಯಲಾಗಿದೆ.
ಸೆಪ್ಟೆಂಬರ್ 24ಕ್ಕೆ ಬಿಡುಗಡೆಗೆ ಸಿದ್ಧವಾಗಿರುವ 'ಲವ್ ಸ್ಟೋರಿ' ಕಳೆದ ಏಪ್ರಿಲ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಮೂಲ ತೆಲುಗು ಚಿತ್ರದೊಂದಿಗೆ ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಿ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಕರೋನದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಕಳೆದ ಒಂದು ತಿಂಗಳ ಹಿಂದಿನವರೆಗೂ ಈ ಚಿತ್ರದ ಬಿಡುಗಡೆಯ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಚಿತ್ರತಂಡದ ಕಡೆಯಿಂದ ಬಂದಿರಲಿಲ್ಲ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೊದಲು ಬಿಡುಗಡೆಗೆ ಚಿತ್ರತಂಡ ಯೋಚಿಸಿತ್ತು. ಆದರೆ ಆ ಸಮಯದಲ್ಲಿ ನಾನಿ ಅಭಿನಯಿಸಿರುವ 'ಟಕ್
ಜಗದೀಶ್ 'ಬಿಡುಗಡೆಯಾಗಬಹುದು ಎಂಬ ಮಾತುಗಳು ಕೇಳಿ ಬಂದಿದ್ದರಿಂದ ಚಿತ್ರತಂಡ ಹಿಂದೆ ಸರಿದಿತ್ತು. ಆದರೆ ಜಗದೀಶ್ ಥಿಯೇಟರುಗಳಿಗೆ ಬದಲಾಗಿ OTTನಲ್ಲಿ ಬಿಡುಗಡೆಯಾಯಿತು. ಮುಂದೆ ಓದಿ...

ತೆಲುಗಿನಲ್ಲಿ ಮಾತ್ರ ಬಿಡುಗಡೆ
ಈಗ ಚಿತ್ರತಂಡ ಕೊನೆಗೂ ತನ್ನ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಆದರೆ ಈಗ ಚಿತ್ರವನ್ನು ಕೇವಲ ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರವನ್ನು ಸದ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ. ಕಳೆದ ವಾರದ ಹಿಂದೆಯಷ್ಟೇ ಚಿತ್ರದ ಅಧಿಕೃತ ಟ್ರೈಲರ್ ಅನ್ನು ಕೂಡ ಬಿಡುಗಡೆಗೊಳಿಸಿದೆ. ಕಳೆದ ವಾರ ಬಿಡುಗಡೆಯಾದ ಟ್ರೈಲರ್ ಗೆ ಅದ್ಭುತವಾದ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದರಿಂದ ಚಿತ್ರತಂಡದ ಉತ್ಸಾಹ ಇಮ್ಮಡಿಗೊಂಡಿದೆ.

ಸೂಕ್ಷ್ಮ ಸಂವೇದನಾಶೀಲ ನಿರ್ದೇಶಕನ ಚಿತ್ರ
ಶೇಕರ್ ಕಮ್ಮೂಲ ತೆಲುಗಿನ ಒಬ್ಬ ಸೂಕ್ಷ್ಮ ಸಂವೇದನಶೀಲ ನಿರ್ದೇಶಕರಲ್ಲಿ ಒಬ್ಬರು. ಮಧ್ಯಮ ವರ್ಗ ಸಮಾಜದ ಸಂವೇದನ ತೆಯನ್ನು ಪ್ರೇಮಕಥೆಯೊಂದಿಗೆ ಜೋಡಿಸಿ ಸಿನಿಮಾ ಮಾಡುವುದರಲ್ಲಿ ಸಿದ್ಧಹಸ್ತರು ಇವರು. ಅದರಲ್ಲೂ ತೆಲಂಗಾಣ ಸ್ಲ್ಯಾಂಗ್ ನಲ್ಲಿ ಮೂಡಿಬರುವ ಇವರ ಚಿತ್ರಗಳು ಪ್ರೇಕ್ಷಕರ ಮನಗೆದ್ದಿದೆ. ಅವರ ಹಿಂದಿನ ಚಿತ್ರ ವರುಣ್ ತೇಜ್ ಸಾಯಿಪಲ್ಲವಿ ನಟಿಸಿದ್ದ 'ಫಿದಾ' ನೂರು ಕೋಟಿ ಹಣಗಳಿಸಿತು. ಹಿಂದೆ ಅವರು ನಿರ್ದೇಶಿಸಿದ ಹ್ಯಾಪಿಡೇಸ್ ,ಲೀಡರ್, ಗೋದಾವರಿ, ಆನಂದ್ ಇದೆಲ್ಲವೂ ಸದಾಭಿರುಚಿಯ ಚಿತ್ರಗಳಾಗಿ ಜನಮನ್ನಣೆಗಳಿಸಿವೆ. ಹೀಗಾಗಿ ಸಹಜವಾಗಿ ಶೇಖರ್ ಕಮ್ಮೂಲ ಚಿತ್ರಗಳು ಅಂದಾಗ ಅಲ್ಲೊಂದು ನಿರೀಕ್ಷೆ ಇರುವುದು ಸಹಜ. ಹೀಗಾಗಿಯೇ ಲವ್ ಸ್ಟೋರಿ ಮೇಲೆ ಪ್ರೇಕ್ಷಕರ ನಿರೀಕ್ಷೆ ಕೂಡ ದೊಡ್ಡದಾಗಿದೆ.

ಅಡ್ವಾನ್ಸ್ ಬುಕ್ಕಿಂಗ್ ಗೆ ಸಕ್ಕತ್ ರೆಸ್ಪಾನ್ಸ್
ಇತ್ತೀಚೆಗೆ ಬಿಡುಗಡೆಯಾಗಿರುವ ಹಿಂದಿಯ 'ಬೆಲ್ ಬಾಟಮ್' ತಮಿಳಿನ 'ತಲೈವಿ' ಸೇರಿದಂತೆ ಯಾವುದೇ ಚಿತ್ರಕ್ಕೂ ಕೂಡ ಮೊದಲ ದಿನದ ಅತ್ಯುತ್ತಮ ಗಳಿಕೆ ಅಥವಾ ಸಮಾಧಾನದ ಗಳಿಕೆ ಕೂಡ ದೊರೆತಿಲ್ಲ. ಇಂತಹ ಸಮಯದಲ್ಲಿ ಬಿಡುಗಡೆಯಾಗುತ್ತಿರುವ 'ಲವ್ ಸ್ಟೋರಿ' ಚಿತ್ರದ ಅಡ್ವಾನ್ಸ್ ಬುಕಿಂಗ್ ಮಾತ್ರ ಸಿನಿ ಪಂಡಿತರ ಹುಬ್ಬೇರಿಸಿದೆ. ಚಿತ್ರ ಬಿಡುಗಡೆಯ ವಾರಕ್ಕೆ ಮೊದಲೇ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು ಆರಂಭದ ದಿನವೇ ಚಿತ್ರಕ್ಕೆ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಹೈದರಾಬಾದಿನ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರದ ಮೊದಲ ದಿನದ ಬಹುತೇಕ ಮಾರ್ನಿಂಗ್ ಶೋ ಅಡ್ವಾನ್ಸ್ ಬುಕ್ಕಿಂಗ್ ಇಂದಲೇ ಹೌಸ್ ಫುಲ್ ಬೋರ್ಡನ್ನು ಕಂಡಿದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಕೂಡ ಬುಕಿಂಗ್ ಜೋರಾಗಿ ನಡೆದಿದೆ. ಬುಕಿಂಗ್ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಹೈದರಾಬಾದಿನ ಮೊದಲ ದಿನದ 245 ಪ್ರದರ್ಶನಗಳಲ್ಲಿ 85 ಪ್ರದರ್ಶನಗಳು ಹೌಸ್ ಫುಲ್ ಆಗಿದೆ.

ದೊಡ್ಡ ಓಪನಿಂಗ್ ನಿರೀಕ್ಷೆ
ಕೊರೊನಾ ನಂತರ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲೇ 'ಲವ್ ಸ್ಟೋರಿ' ದೊಡ್ಡ ಓಪನಿಂಗ್ ಪಡೆಯುವ ಚಿತ್ರವಾಗುತ್ತಿದೆ. ಇನ್ನು ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದರೆ ದೊಡ್ಡ ಪ್ರಮಾಣದಲ್ಲಿ ಚಿತ್ರ ಗೆಲ್ಲುವುದು ಖಾತ್ರಿಯಾಗಿದೆ. 'ಲವ್ ಸ್ಟೋರಿ' ಬಿಡುಗಡೆಯ ನಂತರ ಬಹುಶಃ
ದೊಡ್ಡ ಚಿತ್ರಗಳು ಸಾಲುಗಟ್ಟಿ ಬಿಡುಗಡೆಯಾಗುವ ಲಕ್ಷಣಗಳು ಕಾಣಿಸುತ್ತಿದೆ.


Click it and Unblock the Notifications