ಮಹಾಸಮುದ್ರಂ ಟ್ರೇಲರ್: ತೆಲುಗಿನಲ್ಲಿ ಗರುಡನ ಹವಾ
ತೆಲುಗು ಸಿನಿಮಾ 'ಮಹಾಸಮುದ್ರಂ' ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, 'ಕೆಜಿಎಫ್' ಗರುಡ ಮುಖ್ಯ ವಿಲನ್‌ಗಳಲ್ಲಿ ಒಬ್ಬರಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಬಹುಭಾಷಾ ನಟ ಸಿದ್ಧಾರ್ಥ್, ಶರ್ವಾನಂದ್, ಅದಿತಿ ರಾವ್ ಹೈದಿರಿ, ಅನು ಇಮಾನ್ಯುಯೆಲ್, ಜಗಪತಿ ಬಾಬು, ರಾವ್ ರಮೇಶ್ ಇನ್ನೂ ಹಲವು ಪ್ರಮುಖ ನಟರು 'ಮಹಾಸಮುದ್ರಂ' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾವು ಆಕ್ಷನ್ ಉಳ್ಳ ಪ್ರೇಮಕತೆಯಾಗಿದೆ.
ಟ್ರೇಲರ್‌ನಲ್ಲಿ ಹೀರೋಗಳಿಗೆ ಕೊಟ್ಟಷ್ಟೆ ಮಹತ್ವವವನ್ನು ವಿಲನ್‌ಗಳಿಗೂ ಕೊಟ್ಟಿದ್ದು, ಗರುಡ ಖ್ಯಾತಿಯ ಕನ್ನಡಿಗ ರಾಮಚಂದ್ರ ರಾಜು ಟ್ರೇಲರ್‌ನಲ್ಲಿ ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ರಾಮಚಂದ್ರ ರಾಜುಗೆ ಬಹಳ ಪ್ರಮುಖವಾದ ಪಾತ್ರವನ್ನು ನೀಡಲಾಗಿದ್ದು, ಖಡಕ್ ಡೈಲಾಗ್‌ಗಳು, ಸನ್ನಿವೇಶಗಳು ರಾಂಚಂದ್ರ ರಾಜುಗೆ ಮೀಸಲಾಗಿವೆ.

'ಕೆಜಿಎಫ್; ಚಾಫ್ಟರ್ 1' ಸಿನಿಮಾದಲ್ಲಿ ಗರುಡ ಪಾತ್ರಕ್ಕೆ ಇದ್ದ ಲುಕ್ ಅನ್ನೇ 'ಮಹಾಸಮುದ್ರಂ' ಸಿನಿಮಾಕ್ಕೂ ಉಳಿಸಿಕೊಂಡಂತೆ ಕಾಣುತ್ತಿದೆ. ಅದೇ ಉದ್ದ ಗಡ್ಡ, ಕಪ್ಪು ಧರಿಸಿನಲ್ಲಿ ಗರುಡ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
'ಮಹಾಸಮುದ್ರಂ' ಸಿನಿಮಾದ ಮೇಕಿಂಗ್ ಬಹಳ ಭಿನ್ನವಾಗಿದೆ. ಟ್ರೇಲರ್‌ನಲ್ಲಿಯೇ ಅದು ಗೊತ್ತಾಗುತ್ತಿದೆ. ಸಿನಿಮಾದಲ್ಲಿ ಸಮುದ್ರ ಸಹ ಪ್ರಮುಖ ಪಾತ್ರವಹಿಸಿದೆ. ವಿಲನ್‌ಗಳ ಪಾತ್ರ ಪೋಷಣೆ ಸಹ ಕುತೂಹಲ ಮೂಡಿಸುತ್ತಿದೆ. ಅದರಲ್ಲೂ ರಾವ್ ರಮೇಶ್ ಪಾತ್ರ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಭುಜ ಮೇಲೆತ್ತಿಕೊಂಡು ಕೈ ಕಡಿಯುತ್ತಾ ಆಲೋಚನೆಗಳಲ್ಲೇ ವೈರಿಗಳನ್ನು ನಿರ್ನಾಮ ಮಾಡುವ ವಿಲನ್ ಪಾತ್ರದಲ್ಲಿ ರಾವ್ ರಮೇಶ್ ಕಾಣಿಸಿಕೊಂಡಿದ್ದಾರೆ.
'ಮಹಾಸಮುದ್ರಂ' ಸಿನಿಮಾವನ್ನು ಅಜಯ್ ಭೂಪತಿ ನಿರ್ದೇಶನ ಮಾಡಿದ್ದು ಇದು ಇವರ ಎರಡನೇ ಸಿನಿಮಾ. ಈ ಮೊದಲು ಆರ್‌ಎಕ್ಸ್ 100 ಸಿನಿಮಾವನ್ನು ಇವರು ನಿರ್ದೇಶಿಸಿದ್ದರು. ಸಿನಿಮಾ ನಿರ್ಮಾಣ ಮಾಡಿರುವುದು ಅನಿಲ್ ಸುಂಕಾರ್, ಇವರು ಈ ಮೊದಲು 'ದೂಕುಡು', 'ನೇನೊಕ್ಕಡಿನೆ', 'ಸರಿಲೇರು ನೀಕೆವ್ವರು', 'ರಾಜುಗಾರಿ ಗದಿ' ಇನ್ನೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಚೈತನ್ ಭಾರಾಧ್ವಾಜ್ ನೀಡಿದ್ದಾರೆ. ಸಿನಿಮಾವು ಅಕ್ಟೋಬರ್ 14 ರಂದು ತೆರೆಗೆ ಬರಲಿದೆ.


Click it and Unblock the Notifications











