ಮಹೇಶ್ ಬಾಬು, ವಿಕ್ಟರಿ ವೆಂಕಟೇಶ್ ಕೈಯಲ್ಲಿ ಎಕ್ಕ ರಾಜ ರಾಣಿ: ಫೋಟೊ ವೈರಲ್
ಸೆಲೆಬ್ರೆಟಿಗಳು ನಿಂತ್ರು ಕುಂತ್ರು ಸುದ್ದಿಯಾಗುತ್ತದೆ. ಇನ್ನು ಪಬ್ಲಿಕ್ ಆಗಿ ಇಸ್ಪೀಟ್ ಆಡಿದ್ರೆ ಕತೆ ಮುಗೀತು. ಟಾಲಿವುಡ್ ನಟರಾದ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ವಿಕ್ಟರ್ ವೆಂಕಟೇಶ್ ಕೈಯಲ್ಲಿ ಎಕ್ಕ ರಾಜ ರಾಣಿ ಹಿಡಿದು ಕಾಣಿಸಿಕೊಂಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಿಕ್ಟರಿ ವೆಂಕಟೇಶ್ ಹಾಗೂ ಮಹೇಶ್ ಬಾಬು ಇಬ್ಬರು 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಚಿತ್ರದಲ್ಲಿ ಅಣ್ಣ ತಮ್ಮನಾಗಿ ಪದ್ದೋಡು ಚಿನ್ನೋಡು ಎಂದು ಕಾಣಿಸಿಕೊಂಡಿದ್ದಾರೆ. ಆ ಸಿನಿಮಾ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು. ದಗ್ಗುಬಾಟಿ ಹಾಗೂ ಘಟ್ಟಮನೇನಿ ಕುಟುಂಬಗಳ ನಡುವೆಯೂ ಒಳ್ಳೆ ಅನುಬಂಧ ಇದೆ. ಸದ್ಯ ತೆಲುಗಿನ ಸ್ಟಾರ್ ನಟರಿಬ್ಬರು ಇಸ್ಪೀಟ್ ಆಡುತ್ತಾ ಕುಳಿತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ.

ಮಹೇಶ್- ವೆಂಕಿ ಇಬ್ಬರೂ ಸಿನಿಮಾ ಕೆಲಸಗಳು ಬಿಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಹೀಗಿರುವಾಗ ಇಬ್ಬರು ಒಟ್ಟಿಗೆ ಕೂತು ಇಸ್ಪೀಟ್ ಆಡುತ್ತಿರುವುದು ಎಲ್ಲಿ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಕ್ಲಬ್‌ವೊಂದರ ಉದ್ಘಾಟನೆ ವೇಳೆ ವೆಂಕಿ- ಮಹೇಶ್ ಇಬ್ಬರು ಭಾಗಿ ಆಗಿದ್ದರು. ಅಲ್ಲೇ ಈ ರೀತಿ ಇಸ್ಪೀಟ್ ಕಾರ್ಡ್ ಹಿಡಿದು ಚಿಲ್ ಆಗಿದ್ದಾರೆ ಎನ್ನಲಾಗ್ತಿದೆ. ಅದು ಕೆಸಿನೋ ರೀತಿಯ ಕ್ಲಬ್ ಆಗಿರುವುದರಿಂದ ಈ ರೀತಿ ಕೆಲವೊತ್ತು ಇಬ್ಬರು ಕಾಲ ಕಳೆದಿದ್ದಾರೆ. ಆದರೆ ದೂರದಿಂದ ಯಾರೋ ಇದನ್ನು ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ.
ಇನ್ನು ಮಹೇಶ್ ಬಾಬು ಈ ರೀತಿ ಇಸ್ಪೀಟ್ ಆಡುತ್ತಿರುವುದನ್ನು ಬೇರೆ ನಟರ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಸದ್ಯ ಈ ಫೋಟೊಗಳು ಸಖತ್ ವೈರಲ್ ಆಗುತ್ತಿದೆ. ಸಿನಿಮಾ ವಿಚಾರಕ್ಕೆ ಬಂದರೆ ಮಹೇಶ್ ಬಾಬು ಸದ್ಯ 'ಗುಂಟೂರು ಖಾರಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಶೀಘ್ರದಲ್ಲೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಎಸ್. ತಮನ್ ಸಂಗೀತ ಚಿತ್ರಕ್ಕಿದೆ.
'ಗುಂಟೂರು ಖಾರಂ' ಸಿನಿಮಾ ಸೆಟ್ಟೇರಿದ ದಿನದಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಿದೆ. ನಾಯಕಿ ಪೂಜಾ ಹೆಗ್ಡೆ ಚಿತ್ರದಿಂದ ಹೊರ ನಡೆದರು, ಸಂಗೀತ ನಿರ್ದೇಶಕ ಬದಲಾದರು, ಮಹೇಶ್ ಬಾಬು- ತ್ರಿವಿಕ್ರಮ್ ನಡುವೆ ಕಿರಿಕ್ ನಡೀತು ಅಂತೆಲ್ಲಾ ಗುಸುಗುಸು ಕೇಳಿಬಂದಿತ್ತು. ಆದರೆ ಯಾವುದರ ಬಗ್ಗೆಯೂ ಚಿತ್ರತಂಡ ಪ್ರತಿಕ್ರಿಯಿಸಲಿಲ್ಲ. ಇನ್ನು ಈ ಚಿತ್ರಕ್ಕೆ ಕನ್ನಡ ನಟಿ ಶ್ರೀಲೀಲಾ ಕೂಡ ಬಣ್ಣ ಹಚ್ಚಿದ್ದಾರೆ. ಬಹಳ ಅದ್ಧೂರಿಯಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರಲಿದೆ.
ಮತ್ತೊಂದು ಕಡೆ ಇತ್ತೀಚೆಗೆ ತೆರೆಮೇಲೆ ವಿಕ್ಟರಿ ವೆಂಕಟೇಶ್ ಮ್ಯಾಜಿಕ್ ನಡೀತಿಲ್ಲ. ವೆಂಕಿಗೆ ದೊಡ್ಡ ಸಕ್ಸಸ್ ಸಿಕ್ಕಿ ಬಹಳ ವರ್ಷಗಳಾಯಿತು. 'F2' ಸಿನಿಮಾ ಒಂದು ಹಂತಕ್ಕೆ ಸದ್ದು ಮಾಡಿತ್ತು. ಬಳಿಕ 'ನಾರಪ್ಪ', 'ವೆಂಕಿಮಾಮ', 'ದೃಶ್ಯಂ- 2', 'F3' ಹೀಗೆ ಯಾವ ಸಿನಿಮಾ ಕೂಡ ಸದ್ದು ಮಾಡಲಿಲ್ಲ. ಟಾಲಿವುಡ್‌ನಲ್ಲಿ ಸೀನಿಯರ್ ಹೀರೊಗಳಾದ ಚಿರಂಜೀವಿ, ಬಾಲಕೃಷ್ಣ ಸದ್ದು ಮಾಡುತ್ತಲೇ ಇದ್ದಾರೆ. ಆದರೆ ನಾಗಾರ್ಜುನ ಹಾಗೂ ವೆಂಕಟೇಶ್ ಕೊಂಚಮಟ್ಟಿಗೆ ಡಲ್ ಆಗಿಬಿಟ್ಟಿದ್ದಾರೆ.
ಸದ್ಯ ವೆಂಕಟೇಶ್ 'ಸೈಂಧವ್' ಎನ್ನುವ ಆಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೈಲೇಶ್ ಕೊಲನು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರದ್ದಾ ಶ್ರೀನಾಥ್, ನವಾಜುದ್ದೀನ್ ಸಿದ್ದಿಕಿ, ಮುಖೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಂಕ್ರಾಂತಿ ಸಂಭ್ರಮದಲ್ಲೇ 'ಸೈಂಧವ್' ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ.


Click it and Unblock the Notifications











