'ವಾರಣಾಸಿ' ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು; ಹನುಮಂತನಾಗಿ ಈ ತಮಿಳು ನಟ?
ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಟಾಕ್ ಆಫ್ ದ ಟೌನ್ ಆಗಿದೆ. ನಾನಾ ಕಾರಣಗಳಿಂದ ಈ ಸಿನಿಮಾ ಸುದ್ದಿಯಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಜಕ್ಕಣ್ಣ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು ಅವರನ್ನು ಶ್ರೀರಾಮನ ಅವತಾರದಲ್ಲಿ ತೋರಿಸುತ್ತಿದ್ದಾರೆ. ಹಾಗಿದ್ದರೆ ಹನುಮಂತಾ ಯಾರು? ಎನ್ನುವ ಪ್ರಶ್ನೆ ಮೂಡಿದೆ.
ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮ ಮಾಡಿ 'ವಾರಣಾಸಿ' ಚಿತ್ರದ ಟೀಸರ್ ರಿಲೀಸ್ ಮಾಡಿದ್ದರು. 3 ನಿಮಿಷ 40 ಸೆಕೆಂಡ್‌ಗಳ ಟೀಸರ್‌ನಲ್ಲಿ ಯಾವುದೇ ದೃಶ್ಯಗಳು ಇಲ್ಲ. ಬರೀ ಮೋಷನ್ ಪೋಸ್ಟರ್ ರೀತಿ ಒಂದು ಅಷ್ಟು ವಿಚಾರಗಳನ್ನು ಕಟ್ಟಿಕೊಡಲಾಗಿದೆ. ನಾನಾ ಘಟ್ಟಗಳಲ್ಲಿ ಸಾಕಷ್ಟು ಉಪಕಥೆಗಳನ್ನು ಸೇರಿಸಿ 'ವಾರಣಾಸಿ' ಚಿತ್ರವನ್ನು ಜಕ್ಕಣ್ಣ ಕಟ್ಟಿಕೊಡುತ್ತಿದ್ದಾರೆ.

ಕಲಿಯುಗದಿಂದ ತ್ರೇತಾಯುಗಕ್ಕೆ ಪ್ರೇಕ್ಷಕರನ್ನು ರಾಜಮೌಳಿ ಕರೆದುಕೊಂಡು ಹೋಗಲಿದ್ದಾರೆ. ಲಂಕೆಯಲ್ಲಿ ನಡೆದ ಶ್ರೀರಾಮ- ರಾವಣರ ಯುದ್ಧನ ಚಿತ್ರವನ್ನು ಕಣ್ಣಮುಂದೆ ಕಟ್ಟಿಕೊಡಲಿದ್ದಾರೆ. ಶ್ರೀರಾಮನಾಗಿ ಮಹೇಶ್ ಬಾಬು ನಟಿಸುವುದು ಪಕ್ಕಾ ಆಗಿದೆ. ಇಡೀ ಸಿನಿಮಾ ಇದೇ ಕಥೆ ಇರಲ್ಲ. ಒಂದು ಎಪಿಸೋಡ್‌ನಲ್ಲಿ ರಾಮ, ರಾವಣ, ಹನುಮಂತನ ಕಥೆ ಕಟ್ಟಿಕೊಡಲಿದ್ದಾರೆ. ಇನ್ನುಳಿದಂತೆ ವಾರಣಾಸಿಯ ರುದ್ರನಾಗಿ ಮಹೇಶ್ ಬಾಬು ನಟಿಸುತ್ತಿದ್ದಾರೆ.
ಇದು ಜನ್ಮ ಜನ್ಮಾಂತರದ ರೀತಿಯ ಕಥೆ ಎನ್ನಬಹುದು. ಸೈನ್ಸ್ ಫಿಕ್ಷನ್ ಸಿನಿಮಾ ಕೂಡ ಹೌದು. ಇದೆಲ್ಲವನ್ನು ಜಕ್ಕಣ್ಣ ಹೇಗೆ ತೆರೆಮೇಲೆ ತರ್ತಾರೆ ಎಂದು ಊಹಿಸಿಕೊಂಡೇ ಸಿನಿರಸಿಕರು ಹುಬ್ಬೇರಿಸಿದ್ದಾರೆ. 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ. ಕುಂಭ ಆಗಿ ನೆಗೆಟಿವ್ ರೋಲ್‌ನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಮಂದಾಕಿನಿ ಎಂಬ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ಬಣ್ಣ ಹಚ್ಚಿದ್ದಾರೆ.

ಸದ್ಯ ಟೀಸರ್ ನೋಡಿದರೆ ವಾರನರು ಮಿರಮಿಡ್ ರೀತಿ ಒಬ್ಬರ ಮೇಲೆ ಒಬ್ಬರು ನಿಂತಿದ್ದರೆ ಮೇಲೆ ಬಿಲ್ಲು ಬಾಣ ಹಿಡಿದು ಶ್ರೀರಾಮ ನಿಂತಂತೆ ತೋರಿಸಲಾಗಿದೆ. ಅದೇ ರೀತಿ ಹನುಮಂತನ ಬಾಲದ ಮೇಲೆ ಕುಂಭನನ್ನು ಕರೆದುಕೊಂಡು ಹೋಗುವ ಚಿತ್ರಣವೂ ಇದೆ. ಇದೆಲ್ಲವೂ ಬಹಳ ಕುತೂಹಲ ಮೂಡಿಸಿದೆ. ರಾಜಮೌಳಿ 'ವಾರಣಾಸಿ' ಚಿತ್ರವನ್ನು ದೊಡ್ಡಮಟ್ಟದಲ್ಲಿ ಕಟ್ಟಿಕೊಡುತ್ತಿದ್ದಾರೆ. ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಆಯಾ ಭಾಷೆಯ ಒಬ್ಬೊಬ್ಬ ಕಲಾವಿದರನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ.
ಪ್ರಿಯಾಂಕ ಚೋಪ್ರಾ ಬಾಲಿವುಡ್ ಮಾತ್ರವಲ್ಲ ಈಗ ಹಾಲಿವುಡ್ ತಾರೆ ಕೂಡ. ಮಲಯಾಳಂನಿಂದ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಇನ್ನು ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ತಮಿಳು ನಟ ಮಾಧವರ್ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಹನುಮಂತನ ಪಾತ್ರದಲ್ಲಿ ಮಾಧವನ್ ನಟಿಸಿದರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ.
ಮಾಧವನ್ ರೊಮ್ಯಾಂಟಿಕ್ ಹೀರೊ ಆಗಿ ಚಿರಪರಿಚಿತ. ಆದರೆ ನಂಬಿ ನಾರಾಯಣನ್ ಬರೋಪಿಕ್ 'ರಾಕೆಟ್ರಿ' ನಟಿಸಿ ಮೋಡಿ ಮಾಡಿದ್ದರು. ತಾವೇ ಚಿತ್ರ ನಿರ್ದೇಶಿಸಿ ನಟಿಸಿ ಗೆದ್ದಿದ್ದರು. ಅವರ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ವಾರಣಾಸಿ ಚಿತ್ರದಲ್ಲಿ ಹನುಮಂತನಾಗಿ ಮಾಧವನ್ ನಟಿಸಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಇತ್ತೀಚೆಗೆ ನಡೆದ 'ವಾರಣಾಸಿ' ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ ಆಡಿದ ಮಾತು ವಿವಾದಕ್ಕೆ ಕಾರಣವಾಗಿದೆ. ಹನುಮಂತನನ್ನು ದೂಷಿಸುವ ರೀತಿ ಜಕ್ಕಣ್ಣ ಆಡಿದ ಮಾತುಗಳು ಭಾರೀ ಚರ್ಚೆ ಹುಟ್ಟಾಕ್ಕಿದೆ. ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಇನ್ನು ರಾಜಮೌಳಿ ಹೇಳಿಕೆ ಖಂಡಿಸಿ ರಾಷ್ಟ್ರೀಯ ವಾನರ ಸೇನಾ ಸಮಿತಿ ಹೈದರಾಬಾದ್‌ನ ಸರೂರ್ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜಮೌಳಿ ತಾವು ನಾಸ್ತಿಕ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತಾಂತ್ರಿಕ ದೋಷ ಉಂಟಾಗಿ ಟೀಸರ್ ಪ್ರದರ್ಶನಕ್ಕೆ ಅಡಚಣೆ ಆಗಿತ್ತು. ಇದು ರಾಜಮೌಳಿ ಬೇಸರಕ್ಕೆ ಕಾರಣವಾಗಿತ್ತು. "ಆ ಹನುಮಂತನೇ ಮುಂದೆ ನಿಂತು ಎಲ್ಲವನ್ನು ನಡೆಸುತ್ತಾನೆ ಎಂದು ನಮ್ಮ ತಂದೆ ಹೇಳುತ್ತಿರುತ್ತಾರೆ. ಹನುಮಂತ ಹೀಗೆನಾ ಮುನ್ನಡೆಸೋದು?" ಎಂದು ರಾಜಮೌಳಿ ಹೇಳಿದ್ದರು. ಅವರ ಹೇಳಿಕೆ ಹಿಂದೂಗಳ ಭಾವನೆ ಧಕ್ಕೆ ತಂದಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











