ರಾಜಮೌಳಿ ಹಾಗೂ ಮಹೇಶ್ ಬಾಬು 'ವಾರಣಾಸಿ' ಚಿತ್ರಕ್ಕೆ ನೀರಿನ ಸಮಸ್ಯೆ
ಬಹುನಿರೀಕ್ಷಿತ 'ವಾರಣಾಸಿ' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ದೇಶ ವಿದೇಶಗಳಲ್ಲಿ ಸಿನಿಮಾ ದೃಶ್ಯಗಳನ್ನು ಕಟ್ಟಿಕೊಡಲಾಗುತ್ತಿದೆ. ಸದ್ಯ ಹೈದರಾಬಾದ್‌ನಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗ್ತಿದ್ದು ಹೊಸ ಸಮಸ್ಯೆ ಶುರುವಾಗಿದೆ.
ಮನೆ, ಅಪಾರ್ಟ್‌ಮೆಂಟ್ ಹಾಗೂ ಹೋಟೆಲ್‌ಗಳಲ್ಲಿ ನೀರಿನ ಸಮಸ್ಯೆ ಕಾಡುವುದು ಸಹಜ. ಅದರಲ್ಲೂ ಬೇಸಿಗೆ ಸಮಯದಲ್ಲಿ ನೀರು ಪೂರೈಕೆ ಸರಿಯಾಗಿ ಆಗದೇ ದೈನಂದಿನ ಚಟುವಟಿಕೆಗಳಿಗೆ ಸಂಕಷ್ಟ ಎದುರಾಗುತ್ತದೆ. ಆದರೆ 'ವಾರಣಾಸಿ' ಸಿನಿಮಾ ಚಿತ್ರೀಕರಣಕ್ಕೆ ಈಗ ನೀರಿನ ಅಭಾವ ಶುರುವಾಗಿದೆ. ಇದೇ ಕಾರಣಕ್ಕೆ ಚಿತ್ರೀಕರಣ ನಿಲ್ಲಿಸುವಂತಾಗಿದೆ. ಇದು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿತ್ರೀಕರಣ ತಡವಾದ್ರೆ ಸಿನಿಮಾ ಬಿಡುಗಡೆ ಕೂಡ ತಡವಾಗಬಹುದು ಎನ್ನುವ ಭೀತಿ ಕಾಡುತ್ತಿದೆ.

ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಹೊರ ದೇಶಗಳಲ್ಲಿ ಸಿನಿಮಾ ಚಿತ್ರೀಕರಣಕ್ಕೆ 'ವಾರಣಾಸಿ' ತಂಡ ಬ್ರೇಕ್ ಹಾಕಿದೆ. ಸಮುದ್ರದಲ್ಲಿ ದೋಣಿಗಳ ಮೇಲೆ ನಡೆಯುವ ಒಂದಷ್ಟು ದೃಶ್ಯಗಳನ್ನು ಸೆಟ್ ಹಾಕಿ ದೊಡ್ಡ ದೊಡ್ಡ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಆ ನೀರಿನ ತೊಟ್ಟಿಗಳಿಗೆ ಸಾಕಷ್ಟು ನೀರು ಬೇಕಿದೆ. ಬೇಸಿಗೆ ಸಮಯದಲ್ಲಿ ಅಷ್ಟು ಪ್ರಮಾಣದ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ದುಡ್ಡು ಕೊಟ್ಟರೂ ನೀರು ಇಲ್ಲ ಎನ್ನುವಂತಾಗಿದೆ. ಇದೇ ಈಗ ಚಿತ್ರೀಕರಣಕ್ಕೆ ಸಮಸ್ಯೆ ತಂದೊಡ್ಡಿದೆ.
ಹೈದರಾಬಾದ್ ರಾಜೇಂದ್ರನಗರದ ಗಗನ್‌ಪಹಾಡ್ ಪ್ರದೇಶದಲ್ಲಿ ಸೆಟ್ ಹಾಕಲಾಗಿದೆ. 10 ಸಾವಿರ ಲೀಟರ್ ಸಾಮರ್ಥ್ಯದ 150 ಟ್ಯಾಂಕರ್ ನೀರು ಬೇಕು ಎಂದು ಹೈದರಾಬಾದ್ ಜಲಮಂಡಳಿಗೆ ಚಿತ್ರತಂಡ ಮನವಿ ಮಾಡಿದೆ. ಜಲಮಂಡಳಿ ಇದಕ್ಕೆ ನಿರಾಕರಿಸಿದೆ ಎಂದು ವರದಿಯಾಗಿದೆ. ಮಹೇಶ್ ಬಾಬು ಸದ್ಯ ಜರ್ಮನಿ ಪ್ರವಾಸದಲ್ಲಿದ್ದಾರೆ. ಅಲ್ಲಿಂದ ಬಂದ ಕೂಡಲೇ ಚಿತ್ರೀಕರಣದಲ್ಲಿ ಭಾಗವಹಿಸಬೇಕಿದೆ. ಮೇ 18ರಿಂದ ಈ ನೀರಿನ ತೊಟ್ಟಿ ಸೆಟ್‌ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿಯೇ ನೀರು ಕೇಳಿ ಜಲಮಂಡಳಿಗೆ ಮನವಿ ಮಾಡಿದೆ ಚಿತ್ರತಂಡ.
ಬೇಸಿಗೆ ಅವಧಿಯಲ್ಲಿ ಹೈದರಾಬಾದ್‌ನಲ್ಲಿ ನೀರಿನ ಹಾಹಾಕಾರ ಇದೆ. ಇಂತಹ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಜಲಮಂಡಳಿ ಹೇಳಿರುವುದಾಗಿ ವರದಿಯಾಗಿದೆ. ಹೀಗಾಗಿ ಚಿತ್ರತಂಡ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ. ಈ ಹಿಂದೆ ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರದ ಕೆಲ ದೃಶ್ಯಗಳನ್ನು ಇದೇ ರೀತಿ ದೊಡ್ಡ ನೀರಿನ ತೊಟ್ಟಿಯಲ್ಲಿ ಚಿತ್ರೀಕರಿಸಲಾಗಿತ್ತು. ಬಳಿಕ ಸಿಜಿ ಬಳಸಿ ನಿಜವಾದ ಸಮುದ್ರದಲ್ಲಿ ಚಿತ್ರೀಕರಿಸಿದಂತೆ ತೋರಿಸಲಾಗಿತ್ತು. ನಿಜವಾದ ಸಮುದ್ರದಲ್ಲಿ ಚಿತ್ರೀಕರಣ ಮಾಡುವುದಕ್ಕಿಂತ ಇದು ಸುಲಭ. ಜೊತೆಗೆ ಬಹಳ ಸುರಕ್ಷಿತ ಎನ್ನುವ ಕಾರಣಕ್ಕೆ ಜಕ್ಕಣ್ಣ ಇದೇ ವಿಧಾನ ಬಳಸಿಕೊಳ್ಳುತ್ತಿದ್ದಾರೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ವಾರಣಾಸಿ' ಸಿನಿಮಾ ನಿರ್ಮಾಣವಾಗ್ತಿದೆ. ಮಹೇಶ್ ಬಾಬು ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಪ್ರಿಯಾಂಕಾ ಚೋಪ್ರಾ ಹಾಗೂ ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ಮಟ್ಟದಲ್ಲಿ ಈಗಾಗಲೇ ಪ್ರಚಾರ ಆರಂಭಿಸಲಾಗಿದೆ. ಗ್ಲೊಬ್ ಟ್ರಾಟರ್ ಟೈಮ್ ಟ್ರಾವಲ್ ಸಿನಿಮಾ ಇದು. 1000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕಲಿಯುಗದಿಂದ ತ್ರೇತಾಯುಗದವರೆಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುವ ಕಥೆ ಚಿತ್ರದಲ್ಲಿದೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಇನ್ನಿಲ್ಲದ ಕುತೂಹಲ ಮೂಡಿಸಿದೆ. 'ವಾರಣಾಸಿ' ಪಟ್ಟಣದ ಹಿನ್ನೆಲೆಯಲ್ಲಿ ಕಥೆ ನಡೆಯಲಿದೆ. ರುದ್ರ ಎಂಬ ಶಿವಭಕ್ತನ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಜೊತೆ ಕೆಲವೊತ್ತು ಶ್ರೀರಾಮನಾಗಿ ತೆರೆಮೇಲೆ ದರ್ಶನ ಕೊಡಲಿದ್ದಾರೆ.


Click it and Unblock the Notifications