ರಾಜಮೌಳಿ ಚಿತ್ರಕ್ಕಾಗಿ ಮಹೇಶ್ ಬಾಬು ಹೊಸ ಲುಕ್? "ಅಣ್ಣನಿಗೆ ವಯಸ್ಸು 48 ಅಂತ ಯಾರಾದ್ರು ನೆನಪಿಸ್ರೋ"
ವಯಸ್ಸು 45 ದಾಟಿದ್ರು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿಕ್ಕಾಪಟ್ಟೆ ಯಂಗ್ ಅಂಡ್ ಎನರ್ಜಿಟಿಕ್ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. 'ಗುಂಟೂರು ಖಾರಂ' ಚಿತ್ರದಲ್ಲಿ ಸದ್ಯ ಟಾಲಿವುಡ್ ಪ್ರಿನ್ಸ್ ಬಣ್ಣ ಹಚ್ಚಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇತ್ತೀಚೆಗೆ ಸ್ಟೈಲಿಶ್ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದರು. ಇದೀಗ ಮತ್ತಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ಮೂಲಕ ಮಹೇಶ್ ಬಾಬು ಅಭಿಮಾನಿಗಳ ಮನಗೆದ್ದಿದ್ದಾರೆ. ತಂದೆ ಕೃಷ್ಣ ರೀತಿಯಲ್ಲೇ ತಮ್ಮ ಸ್ಟೈಲಿಶ್ ಲುಕ್‌ನಿಂಗ ಮಹೇಶ್ ಬಾಬು ಸಿನಿರಸಿಕರನ್ನು ಸೆಳೆಯುತ್ತಾರೆ. ಕೆಲವರು ಮಹೇಶ್ ಹಾಲಿವುಡ್ ಹೀರೊ ತರ ಕಾಣ್ತಾರೆ ಅನ್ನುತ್ತಾರೆ. 'ಸರ್ಕಾರಿವಾರು ಪಾಟ' ನಂತರ ಮತ್ತೊಂದು ಸಿನಿಮಾ ತಡವಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್‌ನಲ್ಲೇ 'ಗುಂಟೂರು ಖಾರಂ' ಸಿನಿಮಾ ರಿಲೀಸ್ ಆಗಬೇಕಿತ್ತು. ಆ ಸಿನಿಮಾ ತಡವಾಗ್ತಿರೋದ್ರಿಂದ ರಾಜಮೌಳಿ ಸಿನಿಮಾ ಕೂಡ ಮುಂದಕ್ಕೆ ಹೋಗುವಂತಾಗಿದೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಖಾರಂ' ಚಿತ್ರದಲ್ಲಿ ಪೂಜಾ ಹೆಗ್ಡೆ, ಶ್ರೀಲೀಲಾ ನಾಯಕಿಯರಾಗಿ ನಟಿಸ್ತಿದ್ದಾರೆ. ಇತ್ತೀಚೆಗೆ ಆಕ್ಷನ್ ಪ್ಯಾಕ್ಡ್ ಟೀಸರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ ಚಿತ್ರತಂಡ. ಈಗಾಗಲೇ ಒಂದಷ್ಟು ಶೆಡ್ಯೂಲ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲೇ ಮತ್ತೊಂದು ಶೆಡ್ಯೂಲ್ ಆರಂಭವಾಗಿದೆ. ಇದೆಲ್ಲದರ ನಡುವೆ ಮಹೇಶ್ ಬಾಬು ಪೋಸ್ಟ್ ಮಾಡಿರುವ ಹೊಸ ಫೋಟೊಗಳು ಸಖತ್ ವೈರಲ್ ಆಗ್ತಿದೆ.
ಸ್ಟೈಲಿಶ್ ಲುಕ್‌ನಲ್ಲಿ ಪ್ರಿನ್ಸ್
ನೀಲಿ ಬಣ್ಣದ ಡೆನಿಮ್ ಶರ್ಟ್ ಹಾಗೂ ಕಪ್ಪು ಬಣ್ಣದ ಡೆನಿಮ್ ಪ್ಯಾಂಟ್‌ನಲ್ಲಿ ಮಹೇಶ್ ಬಾಬು ಫೋಟೊಶೂಟ್ ಮಾಡಿಸಿದ್ದಾರೆ. ಸನ್ ಗ್ಲಾಸ್ ತೊಟ್ಟು ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಜತಿನ್ ಕಂಪಾನಿ ಫೋಟೊ ಕ್ಲಿಕ್ಕಿಸಿದ್ದಾರೆ. ಪಟ್ಟಾಭಿ ರಾಮಾರಾವ್ ಮೇಕಪ್ ಹಾಗೂ ಅಲಿಮ್ ಹಾಕಿಮ್ ಹೇರ್‌ಸ್ಟೈಲ್ ಮಾಡಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಅಭಿಮಾನಿಗಳು ಫಿದಾ
ಟಾಲಿವುಡ್ ಪ್ರಿನ್ಸ್‌ನ ಹೊಸ ಲುಕ್‌ನಲ್ಲಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ. ಅಭಿಮಾನಿಯೊಬ್ಬರು "ಅಣ್ಣನಿಗೆ ವಯಸ್ಸು 48 ಅಂತ ಯಾರಾದ್ರು ನೆನಪಿಸ್ರೋ" ಎಂದು ಕಾಮೆಂಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಯಸ್ಸು 48 ಆದರೂ ಬಹಳ ಯಂಗ್ ಲುಕ್‌ನಲ್ಲಿ ಟಾಲಿವುಡ್ ಪ್ರಿನ್ಸ್ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾ ಬರ್ತಿದ್ದಾರೆ.

ರಾಜಮೌಳಿ ಚಿತ್ರದಲ್ಲಿ ಮಹೇಶ್
'ಗುಂಟೂರು ಖಾರಂ' ಚಿತ್ರದ ನಂತರ ಮಹೇಶ್ ಬಾಬು ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ. ಈ ಚಿತ್ರವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಕಟ್ಟಿಕೊಡಲಿದ್ದಾರೆ ಜಕ್ಕಣ್ಣ. ಅಂದರೆ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಫೋಟೊಗಳಲ್ಲಿ ಮಹೇಶ್ ಬಾಬುನ ನೋಡಿದವರು ಜಕ್ಕಣ್ಣನ ಹಾಲಿವುಡ್ ಚಿತ್ರಕ್ಕೆ ಹಾಲಿವುಡ್ ಹೀರೊನೇ ಸಿಕ್ಕಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ.
ಸಂಕ್ರಾಂತಿಗೆ 'ಗುಂಟೂರು ಖಾರಂ'
ಹಾರಿಕಾ ಮತ್ತು ಹಾಸಿನಿ ಬ್ಯಾನರ್‌ನಲ್ಲಿ 'ಗುಂಟೂರು ಖಾರಂ' ಸಿನಿಮಾ ನಿರ್ಮಾಣ ಆಗ್ತಿದೆ. ಚಿತ್ರದಲ್ಲಿ ಲೋಕಲ್ ಹುಡುಗನ ಪಾತ್ರದಲ್ಲಿ ಮಹೇಶ್ ಬಾಬು ಬಣ್ಣ ಹಚ್ಚಿದ್ದಾರೆ. ಹಣೆಗೆ ಪಟ್ಟಿ ಸುತ್ತಿಕೊಂಡು, ಬೀಡಿ ಸೇದುತ್ತಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ಜಗಪತಿ ಬಾಬು, ಸುನೀಲ್, ರಮ್ಯಾಕೃಷ್ಣ, ಪ್ರಕಾಶ್ ರಾಜ್ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದಾರೆ. ಮುಂದಿನ ವರ್ಷ ಜನವರಿ 13ಕ್ಕೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











