ಮಹೇಶ್ ಬಾಬು, ಪವನ್ ಕಲ್ಯಾಣ್ ಅವರ ಆ 2 ಚಿತ್ರಗಳಿಂದ 25 ಕೋಟಿ ನಷ್ಟವಾಗಿತ್ತು ಎಂದ ದಿಲ್ ರಾಜು!
ದಿಲ್ ರಾಜು ತೆಲುಗು ಚಿತ್ರರಂಗದ ದೊಡ್ಡ ವಿತರಕ ಹಾಗೂ ನಿರ್ಮಾಪಕ. ಮೊದಲಿಗೆ ವಿತರಕನಾಗಿ ಕೆಲಸ ಆರಂಭಿಸಿದ ದಿಲ್ ರಾಜು ಇದೀಗ ತೆಲುಗಿನ ದೊಡ್ಡ ಹಾಗೂ ಬಲಿಷ್ಠ ನಿರ್ಮಾಪಕರಲ್ಲಿ ಓರ್ವರಾಗಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ತೆಲುಗು ಮಾತ್ರವಲ್ಲದೇ ಹಿಂದಿ ಚಿತ್ರಗಳಿಗೂ ಸಹ ಹಣ ಹೂಡಿರುವ ದಿಲ್ ರಾಜು ನಿರ್ಮಾಪಕನಾದ ಬಳಿಕವೂ ಸಹ ವಿತರಣೆಯನ್ನು ಮುಂದುವರಿಸಿದ್ದಾರೆ.
ಇನ್ನು ನಿರ್ಮಾಪಕನಾಗಿ ಕೋಟಿ ಕೋಟಿ ಸಂಪಾದಿಸಿರುವ ದಿಲ್ ರಾಜು ವಿತರಣೆಯಿಂದಲೂ ಸಹ ಹಲವು ಚಿತ್ರಗಳಲ್ಲಿ ಲಾಭ ಸಂಪಾದಿಸಿದ್ದಾರೆ. ಆದರೆ ಕೆಲ ಸ್ಟಾರ್ ನಟರ ಚಿತ್ರಗಳನ್ನು ವಿತರಿಸಲು ಹೋಗಿ ಕೈಸುಟ್ಟಿಕೊಂಡದ್ದೂ ಇದೆ. ಹೌದು, ತೆಲುಗು ಚಿತ್ರರಂಗದ ಬಿಗ್ಗೆಸ್ಟ್ ಸ್ಟಾರ್ ನಟರು ಎನಿಸಿಕೊಂಡಿರುವ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ನಟನೆಯ ಚಿತ್ರಗಳನ್ನು ವಿತರಣೆಯನ್ನು ಮಾಡಲು ಹೋಗಿ ದಿಲ್ ರಾಜು ಬೃಹತ್ ನಷ್ಟವನ್ನು ಅನುಭವಿಸಿದ್ದಾರೆ.

ಈ ವಿಷಯದ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿರುವ ದಿಲ್ ರಾಜು ಇದೀಗ ಎನ್ ಟಿವಿ ಎಂಟರ್‌ಟೈನ್‌ಮೆಂಟ್ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿಯೂ ಸಹ ಮಾತನಾಡಿ ಆ ಚಿತ್ರಗಳು ಉಂಟು ಮಾಡಿದ ನಷ್ಟವೆಷ್ಟು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಹೌದು, 2017ರಲ್ಲಿ ನಾನು ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿ ಕೋಟಿ ಕೋಟಿ ಸಂಪಾದಿಸಿದ್ದೆ, ಆದರೆ ಅದೇ ವರ್ಷ ಬಿಡುಗಡೆಗೊಂಡ ಮಹೇಶ್ ಬಾಬು ನಟನೆಯ ಸ್ಪೈಡರ್ ಹಾಗೂ ಪವನ್ ಕಲ್ಯಾಣ್ ನಟನೆಯ ಅಜ್ಞಾತವಾಸಿ ಚಿತ್ರಗಳನ್ನು ವಿತರಿಸಲು ಹೋಗಿ 25 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ ಎಂದು ದಿಲ್ ರಾಜು ಹೇಳಿಕೊಂಡಿದ್ದಾರೆ.
ಮಹೇಶ್ ಬಾಬು ನಟನೆಯ ಸ್ಪೈಡರ್ ಚಿತ್ರದಿಂದ 12 ಕೋಟಿ ನಷ್ಟ ಅನುಭವಿಸಿದೆ ಹಾಗೂ ಪವನ್ ಕಲ್ಯಾಣ್ ಅಜ್ಞಾತವಾಸಿ ಚಿತ್ರದಿಂದ 13 ಕೋಟಿ ನಷ್ಟ ಅನುಭವಿಸಿದೆ, ಎರಡೂ ಚಿತ್ರಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದೆ, ನಿರ್ಮಾಪಕನಾಗಿ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿ ಅಂದು ನಾನು ಉಳಿದುಕೊಂಡೆ. ಕೇವಲ ವಿತರಕನಾಗಿದ್ದರೆ ಕಷ್ಟವಾಗುತ್ತಿತ್ತು. ಬೇರೆ ವಿತರಕರಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು ಅಷ್ಟೇ ಎಂದರು.

ವಿತರಕನಾಗಿ ನಾನು ಹೆಚ್ಚು ಲಾಭ ಪಡೆದುಕೊಂಡ ಚಿತ್ರವೆಂದರೆ ಅದು ಬಾಹುಬಲಿ. ಆ ಚಿತ್ರದ ಮೂಲಕ ಹತ್ತು ಕೋಟಿ ಲಾಭ ಬಂದಿತ್ತು. ಅತಿ ಹೆಚ್ಚು ನಷ್ಟ ಆಗಿದ್ದೆಂದರೆ ಸ್ಪೈಡರ್ ಹಾಗೂ ಅಜ್ಞಾತವಾಸಿ ಮೂಲಕ ಎಂದೂ ಸಹ ದಿಲ್ ರಾಜು ತಿಳಿಸಿದರು.
ಇನ್ನು ಮಹೇಶ್ ಬಾಬು ನಟನೆಯ ಸ್ಪೈಡರ್ ಚಿತ್ರವನ್ನು ತಮಿಳು ನಿರ್ದೇಶಕ ಎ ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದರು. ಚಿತ್ರ ಏಕಕಾಲಕ್ಕೆ ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಸೀರಿಯಲ್ ಕಿಲ್ಲರ್ ಓರ್ವನನ್ನು ನಾಯಕ ಹುಡುಕಿ ಮಟ್ಟ ಹಾಕುವ ಥ್ರಿಲ್ಲಿಂಗ್ ಕಥೆಯನ್ನು ಕಮರ್ಷಿಯಲ್ ಮಾರ್ಗದಲ್ಲಿ ಹೇಳಿದ್ದ ಎ ಆರ್ ಮುರುಗದಾಸ್ ಕೈಸುಟ್ಟುಕೊಂಡಿದ್ದರು. ಚಿತ್ರ ಸಿನಿ ರಸಿಕರಿಗೆ ಇಷ್ಟವಾಗಲೇ ಇಲ್ಲ. ಕಥೆ ಚೆನ್ನಾಗಿದ್ದರೂ, ಸ್ಕ್ರೀನ್‌ಪ್ಲೇ ವಿಚಾರವಾಗಿ ಚಿತ್ರ ಮಕಾಡೆ ಮಲಗಿತ್ತು.
ಇನ್ನು ಅಜ್ಞಾತವಾಸಿ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದರು. ಬಹುಶಃ ತ್ರಿವಿಕ್ರಮ್ ಸಿನಿ ಕೆರಿಯರ್‌ನಲ್ಲಿ ಅತಿ ಕೆಟ್ಟ ಚಿತ್ರ ಹಾಗೂ ದೊಡ್ಡ ನಷ್ಟ ಉಂಟು ಮಾಡಿದ ಚಿತ್ರವಿದು ಎಂದರೆ ತಪ್ಪಾಗಲಾರದು. ಈ ಹಿಂದೆ ಅತ್ತಾರಿಂಟಿಕಿ ದಾರೇದಿ ಎಂಬ ಸೂಪರ್ ಹಿಟ್ ಚಿತ್ರವನ್ನು ನೀಡಿದ್ದ ಈ ಜೋಡಿ ಫ್ಯಾಮಿಲಿ ಎಂಟರ್‌ಟೈನರ್ ಕಥೆಯೊಂದಿಗೆ ಬಂದರೂ ಸಹ ಸಿನಿ ರಸಿಕರಿಗೆ ಇಷ್ಟವಾಗಿರಲಿಲ್ಲ.


Click it and Unblock the Notifications











