ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ 'ಸರ್ಕಾರು ವಾರಿ ಪಾಟ': ಕಲೆಕ್ಷನ್ ಎಷ್ಟು?
ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಸರ್ಕಾರು ವಾರಿ ಪಾಟ' ಮೇ 12 ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಎಲ್ಲೆಡೆ ಅದ್ಬುತವಾಗಿ ಪ್ರದರ್ಶನಗೊಳ್ಳುತ್ತಿದೆ. ಇತ್ತೀಚಿಗೆ ಪ್ಯಾನ್ ಇಂಡಿಯಾ ಕ್ರೇಜ್ ಹೆಚ್ಚಾಗಿರುವ ನಡುವೆಯೂ ಮಹೇಶ್ ಬಾಬು ನಟನೆಯ 'ಸರ್ಕಾರಿ ವಾರು ಪಾಟ' ಸಿನಿಮಾ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಿದೆ.
ಸದ್ಯ ಮಹೇಶ್ ಬಾಬು ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಕಾದು ಕುಳಿತಿದ್ದರು. ಅಂತಹವರಿಗೆಲ್ಲಾ ಸಿನಿಮಾ ಭರ್ಜರಿ ಮನರಂಜನೆ ನೀಡಿದೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿಕೊಳ್ಳವಲ್ಲಿ ಸಿನಿಮಾ ಗೆದ್ದಿದೆ.
ಮೇ 12 ರಂದು ರಿಲೀಸ್ ಆದ ಸಿನಿಮಾ ಅಮೆರಿಕ ಸೇರಿದಂತೆ ಹಲವು ಕಡೆ ಪ್ರದರ್ಶನ ನೀಡುತ್ತಿದ್ದು, ಕಲೆಕ್ಷನ್ ಕೂಡ ಜೋರಾಗಿದೆ. ದಕ್ಷಿಣ ಭಾರತದಲ್ಲಿ ನಟ ಮಹೇಶ್ ಬಾಬು ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಸಿನಿಮಾವನ್ನು ನೋಡಲು ಥಿಯೇಟರ್‌ಗಳಿಗೆ ಮುಗಿ ಬೀಳ್ತಿದ್ದಾರೆ. ಹೀಗಾಗಿ ಈ ಚಿತ್ರ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದು, ಹೊಸ ದಾಖಲೆಯನ್ನು ಬರೆದಿದೆ.

2 ದಿನದಲ್ಲಿ 'ಸರ್ಕಾರು ವಾರಿ ಪಾಟ' ಕಲೆಕ್ಷನ್ ಎಷ್ಟು?
ನಟ ಮಹೇಶ್ ಬಾಬು ನಟಿಸುತ್ತಿರುವ ಸಿನಿಮಾಗಳನ್ನು ಹೆಚ್ಚಾಗಿ ಟಾಲಿವುಡ್ ಮಂದಿ ಇಷ್ಟಪಟ್ಟು ನೋಡುತ್ತಾರೆ. ಆ ಮಟ್ಟಿಗಿನ ಫ್ಯಾನ್ ಫಾಲೋವರ್ಸ್ ಅನ್ನ ಮಹೇಶ್ ಬಾಬು ಹೊಂದಿದ್ದಾರೆ. ಹೀಗಾಗಿ 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗೇ ಸ್ವಾಗತಿಸಿದ್ದಾರೆ. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಸಹ ಥಿಯೇಟರ್‌ಗಳಿಗೆ ಹೋಗುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ಕೇವಲ ಎರಡೇ ದಿನದಲ್ಲಿ 100 ಕೋಟಿಗೂ ಅಧಿಕ ಹಣ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿದೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ RRR ಸಿನಿಮಾ ಮಾಡಿದ ಕಲೆಕ್ಷನ್ ಅನ್ನು ಬ್ರೇಕ್ ಮಾಡಿದೆ, ದಾಖಲೆ ಬರೆದಿದೆ.

ಮಹೇಶ್ ಬಾಬು ನಟನೆಗೆ ಫುಲ್ ಮಾರ್ಕ್ಸ್
ನಟ ಮಹೇಶ್ ಬಾಬು ಯಾವಾಗಲೂ ವಿಭಿನ್ನ ಕಥಾಹಂದರವಿರುವ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಾರೆ. ಈ ಬಾರಿಯೂ ಕೂಡ ಜನರಿಗೆ ಹತ್ತಿರವಾಗುವ ಹಾಗೆ ಇರುವ ಚಿತ್ರಕಥೆಯಲ್ಲಿ ಅಭಿನಯಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕ್‌ಗೆ ಮಾಡಿರುವ ವಂಚನೆ ವಿಷಯವನ್ನೇ ಕಥಾ ವಸ್ತುವಾಗಿ ಇಟ್ಟುಕೊಂಡು ಸಿನಿಮಾವನ್ನು ನಿರ್ದೇಶನ ಮಾಡಲಾಗಿದೆ. ಮೊದಲಾರ್ಧದಲ್ಲಿ ಸಿನಿಮಾವನ್ನು ಎಂಜಾಯ್ ಮಾಡಿದ ಪ್ರೇಕ್ಷಕರು ಸೆಕೆಂಡ್ ಹಾಫ್‌ನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಸಿನಿ ಪ್ರೇಕ್ಷಕರು ಮಹೇಶ್ ಬಾಬು ಕೈ ಬಿಟ್ಟಿಲ್ಲ. ಈಗಲೂ ಕೂಡ ಹಲವು ಕಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಮೊದಲ ದಿನದ ಕಲೆಕ್ಷನ್ ಎಷ್ಟು?
'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ರಿಲೀಸ್ ಆದ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು. ಒಂದೇ ದಿನದಲ್ಲಿ 75.21 ಕೋಟಿ ಕಲೆಕ್ಷನ್ ಮಾಡಿಕೊಂಡಿದ್ದರೆ, ಎರಡನೇ ದಿನ 27.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟು ಎರಡು ದಿನಗಳಲ್ಲಿ 102.71 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್ ಮಾಡುತ್ತಾ ಸಿನಿಮಾ ಭರ್ಜರಿಯಾಗಿ ಈಗಲೂ ಪ್ರದರ್ಶನಗೊಳ್ಳುತ್ತಿದೆ. ಅಲ್ಲದೆ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗುವ ಮಾಡಲಿದ್ದು, ಮುಂದಿನ ವಾರಕ್ಕೆ 200 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮೆರಿಕದಲ್ಲೂ 'ಸರ್ಕಾರು ವಾರಿ ಪಾಟ'ಗೆ ಸಖತ್ ರೆಸ್ಪಾನ್ಸ್
ಮೇ 12 ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ 'ಸರ್ಕಾರು ವಾರಿ ಪಾಟ' ಅಮೆರಿಕದಲ್ಲೂ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದಿದ್ದರೂ ಸಹ ಸಿನಿಮಾಗೆ ಅಮೆರಿಕದಲ್ಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ತೆಲುಗಿನಲ್ಲಿ ಮಾತ್ರ ತೆರೆಗೆ ಬಂದಿರುವ ಸಿನಿಮಾವನ್ನು ಅಮೆರಿಕದ ಜನರು ಕೂಡ ಮೆಚ್ಚಿಕೊಂಡಿದ್ದಾರೆ. ಕೇವಲ ಭಾರತದಲ್ಲಿ ಮಾತ್ರ ಮಹೇಶ್ ಬಾಬುಗೆ ಫ್ಯಾನ್ಸ್ ಇಲ್ಲದೆ ಅಮೆರಿಕದಲ್ಲೂ ಕೂಡ ಹೆಚ್ಚಿನ ಫ್ಯಾನ್ಸ್ ಫಾಲೋವಿಂಗ್ ಹೊಂದಿದ್ದಾರೆ. ಹೀಗಾಗಿ ಅಮೆರಿಕದಲ್ಲೂ ಮಹೇಶ್ ಬಾಬು ಸಿನಿಮಾವನ್ನು ನೋಡುತ್ತಿದ್ದಾರೆ. ಈವರೆಗೆ 7.73 ಕೋಟಿ ಕಲೆಕ್ಷನ್ ಮಾಡಿದ್ದು, ಸಿನಿಮಾ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ.


Click it and Unblock the Notifications











