ಮತ್ತೆ ಮಹೇಶ್ ಬಾಬುಗೆ ಪಾಸ್‌ಪೋರ್ಟ್ ವಾಪಸ್ ಕೊಟ್ಟ ನಿರ್ದೇಶಕ ರಾಜಮೌಳಿ
ತೆಲುಗು ನಟ ಮಹೇಶ್ ಬಾಬು 'ವಾರಣಾಸಿ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಲೆಕ್ಕಾಚಾರದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರಲಿದೆ. ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ಬಿಡುಗಡೆ ಆಗಲಿದೆ. ಭರದಿಂದ ಸಿನಿಮಾ ಚಿತ್ರೀಕರಣ ನಡೀತಿದೆ. ಇದೀಗ ಸಣ್ಣ ಬ್ರೇಕ್ ತಗೊಂಡು ಮಹೇಶ್ ಬಾಬು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.
ನಟ ಮಹೇಶ್ ಬಾಬು ದೇಶ ವಿದೇಶ ಸುತ್ತುತ್ತಿರುತ್ತಾರೆ. ಆಗಾಗ್ಗೆ ಫ್ಯಾಮಿಲಿ ಜೊತೆ ಸುಂದರ ತಾಣಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. 'ವಾರಣಾಸಿ' ಸಿನಿಮಾ ಆರಂಭಿಸುವಾಗ ಇದೇ ವಿಚಾರವನ್ನು ಪ್ರಸ್ತಾಪಿಸಿ ನಿರ್ದೇಶಕ ರಾಜಮೌಳಿ ಪೋಸ್ಟ್ ಮಾಡಿದ್ದರು. ಸಿಂಹ ಬೋನಿನಲ್ಲಿ ಇರುವ ಫೋಟೊ ಮುಂದೆ ನಿಂತು ಪಾಸ್‌ಪೋರ್ಟ್ ಹಿಡಿದುಕೊಂಡ ಫೋಟೊವನ್ನು ಜಕ್ಕಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು. ಕೆಲ ದಿನಗಳ ಕಾಲ ಮಹೇಶ್ ಬಾಬು ಎಲ್ಲಿಗೂ ಹೋಗುವಂತಿಲ್ಲ, ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಬೇಕು ಅಷ್ಟೇ, ಎನ್ನುವಂತೆ ಕಾಮೆಂಟ್ ಮಾಡಿದ್ದರು.

ಇತ್ತೀಚೆಗೆ 'ವಾರಣಾಸಿ' ಚಿತ್ರದ ಸಾಂಗ್ ಶೂಟ್ ಮುಗಿಸಿ ರಾಜಮೌಳಿ ಬ್ರೇಕ್ ಕೊಟ್ಟಿದ್ದಾರೆ. ಹಾಗಾಗಿ ಮಹೇಶ್ ಬಾಬು ಫ್ಯಾಮಿಲಿ ಜೊತೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತೆ ಮಹೇಶ್ ಬಾಬುಗೆ ರಾಜಮೌಳಿ ಪಾಸ್‌ಪೋರ್ಟ್ ವಾಪಸ್ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ ತಮಾಷೆ ಮಾಡುತ್ತಿದ್ದಾರೆ. ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಫ್ಯಾಮಿಲಿ ಜೊತೆ ಮಹೇಶ್ ಬಾಬು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಮಹೇಶ್ ಬಾಬು ಹಾಗೂ ರಾಜಮೌಳಿ ಕ್ರೇಜಿ ಕಾಂಬಿನೇಷನ್ ಸಿನಿಮಾ 'ವಾರಣಾಸಿ'. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಚಿತ್ರವನ್ನು ಕಟ್ಟಿಕೊಡಲಾಗ್ತಿದೆ. 1300 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ತೆಲುಗು ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಚಿತ್ರೀಕರಣ ನಡೆಸಲಾಗ್ತಿದೆ. ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತಯಾರಿಸಲಾಗ್ತಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್, ಪ್ರಕಾಶ್ ರಾಜ್ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಕೂಡ ಮಹೇಶ್ ಬಾಬು ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ನನಗೆ ಪಾಸ್‌ಪೋರ್ಟ್ ವಾಪಸ್ ಸಿಕ್ತು ಎನ್ನುವಂತೆ ಕ್ಯಾಮರಾಗಳ ಕಡೆ ಪಾಸ್‌ಪೋರ್ಟ್ ತೋರಿಸಿ ಹೋಗಿದ್ದರು. 'ಗುಂಟೂರು ಖಾರಂ' ಬಳಿಕ ಮಹೇಶ್ ಬಾಬು 'ವಾರಣಾಸಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'RRR' ಸಿನಿಮಾ ನಂತರ ರಾಜಮೌಳಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಕೆ. ಎಲ್ ನಾರಾಯಣ ಜೊತೆ ಸೇರಿ ಕಾರ್ತಿಕೇಯ ಈ ಚಿತ್ರ ನಿರ್ಮಿಸುತ್ತಿದ್ದಾರೆ.
'RRR' ಚಿತ್ರಕ್ಕೆ ಹಾಲಿವುಡ್ ಪ್ರೇಕ್ಷಕರಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಈ ಬಾರಿ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು 'ವಾರಣಾಸಿ' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಕಲಿಯುಗದಿಂದ ತ್ರೇತಾಯುಗದವರೆಗೆ ಸಾಗುವ ಕಥೆ ಚಿತ್ರದಲ್ಲಿದೆ. ರಾಮಾಯಣದ ಕೆಲ ಸನ್ನಿವೇಶಗಳು ಇರಲಿದ್ದು ಶ್ರೀರಾಮನ ಅವತಾರದಲ್ಲಿ ಮಹೇಶ್ ಬಾಬು ಕೆಲ ಹೊತ್ತು ಕಾಣಿಸಿಕೊಳ್ಳಲಿದ್ದಾರೆ.
ವಾರಣಾಸಿಯಲ್ಲಿ ಚಿತ್ರದ ಕಥೆ ಸಾಗಲಿದೆ. ರುದ್ರ ಎಂಬ ಶಿವಭಕ್ತನ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಮುಂದೆ ಕಥೆ ಪ್ರೇಕ್ಷಕರನ್ನು ವಿದೇಶಗಳಿಗೆ ಕರೆದುಕೊಂಡು ಹೋಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲಾಗುತ್ತಿದೆ. ಈ ಸಿನಿಮಾ ಮೂಲಕ ಮಹೇಶ್ ಬಾಬು ಪ್ಯಾನ್ ವರ್ಲ್ಡ್ ಸ್ಟಾರ್ ಆಗ್ತಾರೆ ಎನ್ನಲಾಗ್ತಿದೆ. ಮಹೇಶ್ ಬಾಬು ಹುಟ್ಟುಹಬ್ಬದ(ಆಗಸ್ಟ್ 9) ಸಂಭ್ರಮದಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗುವ ನಿರೀಕ್ಷೆಯಿದೆ.
ಚಿತ್ರಕ್ಕಾಗಿ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಿಯಾಂಕ ಚೋಪ್ರಾ ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಆಕೆಯನ್ನು ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.


Click it and Unblock the Notifications