ರಾಜಮೌಳಿಗೆ ಮುನ್ನ ಹಿಟ್ ನಿರ್ದೇಶಕನ ಜೊತೆ ಕೈ ಜೋಡಿಸಿದ ಮಹೇಶ್ ಬಾಬು
ಕಳೆದ ಕೆಲ ವರ್ಷಗಳಿಂದಲೂ ಬ್ಲಾಕ್ ಬಸ್ಟರ್ ಸಿನಿಮಾ ಒಂದನ್ನು ನೀಡಲು ಮಹೇಶ್ ಬಾಬು ಯತ್ನಿಸುತ್ತಿದ್ದಾರೆ ಆದರೆ ಸಾಧ್ಯವಾಗುತ್ತಿಲ್ಲ. 2015 ರ 'ಶ್ರೀಮಂತುಡು' ಬಳಿಕ ಬಂದ ಸಿನಿಮಾಗಳಲ್ಲಿ ಒಂದೆರಡು ಆವರೇಜ್ ಹಿಟ್ ಆದರೆ, ಉಳಿದವೆಲ್ಲ ಫ್ಲಾಪ್ ಎನಿಸಿಕೊಂಡವು. ಹಾಗಾಗಿ ದೊಡ್ಡ ಹಿಟ್ ಸಿನಿಮಾಕ್ಕಾಗಿ ಮಹೇಶ್ ಹಪ-ಹಪಿಸುತ್ತಿದ್ದಾರೆ.
ಇದೀಗ 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ನಟಿಸಿರುವ ಮಹೇಶ್ ಬಾಬು ಅದರ ಬಿಡುಗಡೆಗೆ ರೆಡಿಯಾಗಿದ್ದಾರೆ. ಆದರೆ ಅವರ ಈ ಹೊಸ ಸಿನಿಮಾಕ್ಕಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿರುವುದು ಮಹೇಶ್ ಬಾಬು ನಟಿಸಲಿರುವ ಮುಂದಿನ ಸಿನಿಮಾ! ಅದಕ್ಕೆ ಕಾರಣ ರಾಜಮೌಳಿ.
ರಾಜಮೌಳಿ ಇದೇ ಮೊದಲ ಬಾರಿಗೆ ಮಹೇಶ್ ಬಾಬು ನಟಿಸಲಿರುವ ಸಿನಿಮಾ ನಿರ್ದೇಶಿಸಲಿದ್ದಾರೆ. ಆದರೆ ರಾಜಮೌಳಿ ಸಿನಿಮಾಕ್ಕೆ ಮುನ್ನವೇ ತೆಲುಗು ಚಿತ್ರರಂಗದ ಮತ್ತೊಬ್ಬ ಹಿಟ್ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ ಮಹೇಶ್ ಬಾಬು.

ರಾಜಮೌಳಿ-ಮಹೇಶ್ ಬಾಬು ಕಾಂಬಿನೇಶನ್ ಸಿನಿಮಾ ನೋಡಲು ಉತ್ಸುಕರಾಗಿದ್ದ ಸಿನಿಮಾ ಅಭಿಮಾನಿಗಳಿಗೆ ಡಬಲ್ ಸಿಹಿ ಸುದ್ದಿ ನೀಡಿರುವ ಮಹೇಶ್ ಬಾಬು. ತಾವು ಹಿಟ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಹೊಸ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ನಿರ್ದೇಶಕ ತ್ರಿವಿಕ್ರಮ್, ಸಂಗೀತ ನಿರ್ದೇಶಕ ತಮನ್ ಹಾಗೂ ನಾಗ ವಂಶಿ ಅವರುಗಳು ಇಂದು ದುಬೈನಲ್ಲಿ ನಟ ಮಹೇಶ್ ಬಾಬುವನ್ನು ಭೇಟಿಯಾಗಿ ಸಿನಿಮಾದ ಬಗ್ಗೆ ಚರ್ಚೆ ಮಾಡಿದ್ದಾರೆ. 'ಸರ್ಕಾರು ವಾರಿ ಪಾಠ' ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಎಲ್ಲ ಮುಗಿಸಿರುವ ನಟ ಮಹೇಶ್ ಬಾಬು ಕುಟುಂಬದೊಂದಿಗೆ ರಜೆ ಕಳೆಯಲು ದುಬೈಗೆ ತೆರಳಿದ್ದಾರೆ. ಹೊಸ ವರ್ಷಾಚರಣೆಯನ್ನು ಅಲ್ಲಿಯೇ ಮಾಡಲಿದ್ದಾರೆ ಮಹೇಶ್ ಬಾಬು, ಇದೀಗ ತ್ರಿವಿಕ್ರಮ್ ಹಾಗೂ ತಂಡ ದುಬೈನಲ್ಲಿಯೇ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದೆ.
ತ್ರಿವಿಕ್ರಮ್ ನಿರ್ದೇಶಿಸಲಿರುವ ಸಿನಿಮಾವನ್ನು ಎಸ್ ರಾಧಾ ಕೃಷ್ಣ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾವು ಹಾರಿಕಾ ಮತ್ತು ಹನ್ಸಿನಿ ಬ್ಯಾನರ್ ಮೂಲಕ ತೆರೆಗೆ ಬರಲಿದೆ. ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಶನ್‌ನ ಸಿನಿಮಾದ ಚಿತ್ರೀಕರಣವು ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಮುಂಚೆಯೇ ಚಿತ್ರೀಕರಣ ಆರಂಭಿಸಲಿದೆ.
ಈ ಹಿಂದೆ ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ಸಿನಿಮಾ 'ಅತಡು' ಅನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದರು. ಅದಾದ ಬಳಿಕ 'ಖಲೇಜ' ಸಿನಿಮಾವನ್ನು ಸಹ ತ್ರಿವಿಕ್ರಮ್ ನಿರ್ದೇಶಿಸಿದ್ದರು. ಎರಡೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿದ್ದವು. ಇದೀಗ ಈ ಜೋಡಿಯ ಹಳೆಯ ಮ್ಯಾಜಿಕ್ ಅನ್ನು ತೆರೆಯ ಮೇಲೆ ನೋಡಲು ಸಿನಿ ಪ್ರೇಮಿಗಳು ಕಾತರರಾಗಿದ್ದಾರೆ.
ತ್ರಿವಿಕ್ರಮ್ ಖಾತೆಯಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಿವೆ, 'ನುವ್ವೆ-ನುವ್ವೆ' ಸಿನಿಮಾದಿಂದ ನಿರ್ದೇಶನ ಆರಂಭಿಸಿದ ತ್ರಿವಿಕ್ರಮ್, 'ಅತಡು', ಪವನ್ ಕಲ್ಯಾಣ್ ನಟನೆಯ 'ಜಲ್ಸಾ', ' ಮಹೇಶ್ ಬಾಬು ನಟನೆಯ 'ಖಲೇಜ', ಅಲ್ಲು ಅರ್ಜುನ್ ನಟನೆಯ 'ಜುಲಾಯಿ', ಪವನ್ ನಟನೆಯ ಬ್ಲಾಕ್ ಬಸ್ಟರ್ 'ಅತ್ತಾರಿಂಟಿಕಿ ದಾರೇದಿ', ಅಲ್ಲು ಅರ್ಜುನ್ ನಟನೆಯ 'ಸನ್ ಆಫ್ ಸತ್ಯಮೂರ್ತಿ', 'ಅಲಾ ವೈಕುಂಟಪುರಂಲೋ', ಜೂ ಎನ್‌ಟಿಆರ್ ನಟನೆಯ 'ಅರವಿಂದ ಸಮೇತ' ಸಿನಿಮಾ ಸೇರಿ ಇನ್ನೂ ಕೆಲವು ಹಿಟ್ ಸಿನಿಮಾಗಳಿವೆ.


Click it and Unblock the Notifications











