ಅಲ್ಲು ಅರ್ಜುನ್ ಜೊತೆ 4ನೇ ಸಿನಿಮಾ ಘೋಷಿಸಿದ ತ್ರಿವಿಕ್ರಮ್: ಮಹೇಶ್ ಬಾಬು ಫ್ಯಾನ್ಸ್ ಗರಂ
ಸ್ಟಾರ್ ನಟರು, ನಿರ್ದೇಶಕರು ಒಂದು ಸಿನಿಮಾ ಕಂಪ್ಲೀಟ್ ಆಗುವುದಕ್ಕು ಮುನ್ನ ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಳ್ತಿದ್ದಾರೆ. 'ಪುಷ್ಪ'-2 ಶೂಟಿಂಗ್ ಹಂತದಲ್ಲೇ ಅಲ್ಲು ಅರ್ಜುನ್ ಮತ್ತೆ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಹಾಗೂ ಗೀತಾ ಆರ್ಟ್ಸ್ ಚಿತ್ರಕ್ಕಾಗಿ ಕೈಜೋಡಿಸಿವೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಾಜೆಕ್ಟ್ ಹೊರತುಪಡಿಸಿ ಬನ್ನಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಭರ್ಜರಿ ಮನರಂಜನೆ ಇರುವ ಸಿನಿಮಾಗಳ ಮೂಲಕ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಪ್ರತಿಬಾರಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಸದ್ಯ ಮಾತಿನ ಮಾಂತ್ರಿಕ ಮಹೇಶ್ ಬಾಬು ಜೊತೆ 'ಗುಂಟೂರು ಖಾರಂ' ಸಿನಿಮಾ ಮಾಡ್ತಿದ್ದಾರೆ. ಸಂಕ್ರಾಂತಿಗೆ ಆ ಸಿನಿಮಾ ತೆರೆಗೆ ಬರಲಿದೆ.

ಇನ್ನು ಗುರುಪೌರ್ಣಿಮೆ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಜೊತೆ ತ್ರಿವಿಕ್ರಮ್ ಹೊಸ ಸಿನಿಮಾ ಘೋಷಿಸಿದ್ದಾರೆ. ಈಗಾಗಲೇ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ಇವರಿಬ್ಬರು ಮತ್ತೆ ಒಂದಾಗಿರುವುದು ಭಾರೀ ನಿರೀಕ್ಷೆ ಹೆಚ್ಚಿಸಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಅಪ್ ಡೇಟ್ ಕೊಡಲಿದೆ.
4ನೇ ಬಾರಿ ಒಂದಾದ ಜೋಡಿ
ಈಗಾಗಲೇ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ 'ಜುಲಾಯಿ', 'ಸನ್ ಆಫ್ ಸತ್ಯಮೂರ್ತಿ', 'ಅಲ ವೈಕುಂಠಪುರಮುಲೋ' ಹೀಗೆ ಹ್ಯಾಟ್ರಿಕ್ ಹಿಟ್ ಕೊಟ್ಟಿದ್ದಾರೆ. ಈ ಕಾಂಬೋ ನಾಲ್ಕನೇ ಚಿತ್ರಕ್ಕೆ ಸಜ್ಜಾಗಿದೆ. ಬಹಳ ದಿನಗಳಿಂದಲೂ ಅಲ್ಲು-ತ್ರಿವಿಕ್ರಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಗಾಸಿಪ್‌ಗೆ ಅಧಿಕೃತ ಮುದ್ರೆ ಬಿದ್ದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆ ಕಾಣಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ.
ಮಹೇಶ್ ಬಾಬು ಫ್ಯಾನ್ಸ್ ಗರಂ
ತ್ರಿವಿಕ್ರಮ್ ಶ್ರೀನಿವಾಸ್ 'ಗುಂಟೂರು ಖಾರಂ' ಸಿನಿಮಾ ಮುಗಿಸೋಕು ಮುನ್ನ ಅಲ್ಲು ಅರ್ಜುನ್ ಜೊತೆ ಸಿನಿಮಾ ಘೋಷಿಸಿದ್ದಾರೆ. ಇದು ಮಹೇಶ್ ಬಾಬು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಒಂದು ಸಿನಿಮಾ ಮುಗಿಸೋಕು ಮುನ್ನ ಹೊಸ ಸಿನಿಮಾ ಘೋಷಿಸುವುದು ಯಾಕೆ? ಈ ಸಿನಿಮಾ ಬಿಟ್ಟು ಆ ಸಿನಿಮಾ ಕೆಲಸ ಮಾಡುತ್ತಾ ಕುಳಿತರೇ ಹೇಗೆ? ಎಂದು ಕೇಳುತ್ತಿದ್ದಾರೆ. ಸದ್ಯ 'ಗುಂಟೂರು ಖಾರಂ' ಸಿನಿಮಾ ಮೇಕಿಂಗ್ ಬಗ್ಗೆ ಭಾರೀ ಗೊಂದಲ ಇದೆ. ಇದೆಲ್ಲದರ ನಡುವೆ ಹೊಸ ಸಿನಿಮಾ ಘೋಷಿಸುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸುತ್ತಿದ್ದಾರೆ.

'ಗುಂಟೂರು ಖಾರಂ' ಗೊಂದಲ
ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಜೋಡಿಯ 3ನೇ ಸಿನಿಮಾ 'ಗುಂಟೂರು ಖಾರಂ' ವಿಚಿತ್ರ ಕಾರಣಗಳಿಗೆ ಸುದ್ದಿಯಾಗ್ತಿದೆ. ಸಿನಿಮಾ ಬಗ್ಗೆ ದಿನಕ್ಕೊಂದು ವದಂತಿ ಹರಿದಾಡ್ತಿದೆ. ಆದರೆ ಯಾವುದರ ಬಗ್ಗೆ ಕೂಡ ಚಿತ್ರತಂಡ ಸ್ಪಷ್ಟನೆ ನೀಡುತ್ತಿಲ್ಲ. ಮಹೇಶ್ ಬಾಬುಗೆ ತ್ರಿವಿಕ್ರಮ್ ಕೆಲಸ ಇಷ್ಟವಾಗ್ತಿಲ್ಲವಂತೆ, ಒಂದಷ್ಟು ಸನ್ನಿವೇಶ ರೀಶೂಟ್ ಮಾಡ್ತಿದ್ದಾರಂತೆ, ಪೂಜಾ ಹೆಗ್ಡೆ ಸಿನಿಮಾ ಬಿಟ್ಟು ಹೊರನಡೆದರಂತೆ ಹೀಗೆ ಸಾಕಷ್ಟು ಗುಸುಗುಸು ಕೇಳಿಬರ್ತಿದೆ. ಆದರೆ ಯಾವುದರ ಬಗ್ಗೆ ಕೂಡ ತಂಡ ಪ್ರತಿಕ್ರಿಯಿಸಿಲ್ಲ.
ಕುತೂಹಲ ಮೂಡಿಸಿದ ಪ್ರೊಡಕ್ಷನ್ ನಂ.8
ಸದ್ಯ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ 4ನೇ ಚಿತ್ರಕ್ಕೆ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ. ಪ್ರೊಡಕ್ಷನ್ ನಂ.8 ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಕೆಲಸ ಆರಂಭಿಸಲಾಗಿದೆ. 4 ಬಾರಿ ಜೊತೆಯಾಗುತ್ತಿರುವುದಕ್ಕೆ ಬಹಳ ದೊಡ್ಡದಾಗಿಯೇ ಪ್ಲ್ಯಾನ್ ಮಾಡಿರೋದಾಗಿ ಚಿತ್ರತಂಡ ಹೇಳಿದೆ. ಒಂದು ಅದ್ಭುತ ದೃಶ್ಯಕಾವ್ಯವನ್ನು ಪ್ರೇಕ್ಷಕರು ಮುಂದಿಡುವ ಪ್ರಯತ್ನ ನಡೀತಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.


Click it and Unblock the Notifications











