ಅಂದು ಐಟಂ ಸಾಂಗ್‌ಗೆ ಕುಣಿದಿದ್ದ ಜೋಡಿ ಈಗ ತಾಯಿ ಮಗನಾಗಿ ನಟನೆ: ಸಿಕ್ಕಾಪಟ್ಟೆ ಟ್ರೋಲ್
ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೂ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ಎರಡನೇ ದಿನಕ್ಕೆ ಡಲ್ ಆಗಿದೆ. ತ್ರಿವಿಕ್ರಮ್ ಶ್ರೀನಿವಾಸ್ ಕಥೆ, ಚಿತ್ರಕಥೆ, ನಿರ್ದೇಶನದ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಮಹೇಶ್ ಬಾಬು ಚಿತ್ರವನ್ನು ಬಚಾವ್ ಮಾಡಿದ್ದಾರೆ.
ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ 'ಗುಂಟೂರು ಖಾರಂ' ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಕನ್ನಡ ನಟಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ಜಯರಾಂ, ಪ್ರಕಾಶ್ ರಾಜ್, ಜಗಪತಿ ಬಾಬು, ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಸ್. ತಮನ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ ಎನಿಸಿಕೊಂಡಿದೆ.

ಚಿತ್ರದಲ್ಲಿ ಮಹೇಶ್ ಬಾಬು ತಾಯಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ತಾಯಿ ಮಗನ ಬಾಂಧವ್ಯದ ಕಥೆ ಚಿತ್ರದಲ್ಲಿದೆ. ಸದಾ ಪವರ್‌ಫುಲ್ ತಾಯಿ ಪಾತ್ರಗಳಲ್ಲಿ ರಮ್ಯಾ ಕೃಷ್ಣ ಗಮನ ಸೆಳೆಯುತ್ತಾರೆ. 'ಗುಂಟೂರು ಖಾರಂ' ಅದೇ ಪ್ರಯತ್ನ ನಡೆದಿದೆ. ಆದರೆ ಈ ಸಿನಿಮಾ ಬೆನ್ನಲ್ಲೇ ಹಳೇ ಹಾಡೊಂದನ್ನು ತೋರಿಸಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅದು ಮಹೇಶ್ ಬಾಬು ಹಾಗೂ ರಮ್ಯಾ ಕೃಷ್ಣ ಹೆಜ್ಜೆ ಹಾಕಿದ್ದ ಐಟಂ ಸಾಂಗ್.
ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವರೇ ಮತ್ತೊಂದು ಚಿತ್ರದಲ್ಲಿ ತಾಯಿಯಾಗಿ ಅಥವಾ ಸಹೋದರಿಯಾಗಿ ನಟಿಸಿರುವ ಉದಾಹರಣೆಗಳಿವೆ. ಮಗಳಾಗಿ ನಟಿಸಿದವರು ಮುಂದೆ ನಾಯಕಿಯಾಗಿ ಕಾಣಿಸಿಕೊಂಡ ಉದಾಹರಣೆಯಿದೆ. 60,70, 80ರ ದಶಕಗಳಲ್ಲಿ ಇದು ಜಾಸ್ತಿ ಇತ್ತು. ಇತ್ತೀಚೆಗೆ ಕಮ್ಮಿ ಆಗಿದೆ. ಆದರೆ 'ಗುಂಟೂರು ಖಾರಂ' ಚಿತ್ರದಲ್ಲಿ ತಾಯಿ ಮಗನಾಗಿ ನಟಿಸಿರುವ ಮಹೇಶ್ ಬಾಬು ಹಾಗೂ ರಮ್ಯಾಕೃಷ್ಣ ಈ ಹಿಂದೆ ಐಟಂ ಸಾಂಗ್‌ವೊಂದಕ್ಕೆ ಬಿಂದಾಸ್ ಆಗಿ ಕುಣಿದಿದ್ದರು.
20 ವರ್ಷಗಳ ಹಿಂದೆ ಬಂದಿದ್ದ 'ನಾನಿ' ಎನ್ನುವ ಚಿತ್ರದಲ್ಲಿ ಮಹೇಶ್ ಬಾಬು- ರಮ್ಯಾ ಕೃಷ್ಣ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಆರಂಭದಲ್ಲಿ ಥಿಯೇಟರ್‌ನಲ್ಲಿ ಹಾಡನ್ನು ಪ್ರದರ್ಶಿಸಿದ್ದರು ಬಳಿಕ ತೆಗೆದುಬಿಟ್ಟಿದ್ದರು. ಆ ರೊಮ್ಯಾಂಟಿಕ್ ಹಾಡನ್ನು ಈಗ ಟ್ರೋಲ್ ಮಾಡಲಾಗುತ್ತಿದೆ. ಅಂದು ಹೀಗೆ ಕುಣಿದವರನ್ನು ಈಗ ಈ ರೀತಿ ತೋರಿಸಿದ್ದೀರಲ್ಲಾ? ನಿರ್ದೇಶಕರೇ? ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪ್ರಭಾಸ್ ನಟನೆಯ 'ಅಡವಿ ರಾಮುಡು' ಎನ್ನುವ ಚಿತ್ರದಲ್ಲಿ ಕೂಡ ರಮ್ಯಾಕೃಷ್ಣ ಇದೇ ರೀತಿ ಸ್ಪೆಷಲ್ ಸಾಂಗ್‌ವೊಂದಕ್ಕೆ ಕುಣಿದಿದ್ದರು. ಬಳಿಕ 'ಬಾಹುಬಲಿ' ಚಿತ್ರದಲ್ಲಿ ಪ್ರಭಾಸ್ ತಾಯಿಯ ಪಾತ್ರದಲ್ಲಿ ನಟಿಸಿದ್ದರು. ಆಗ ಯಾರು ಟ್ರೋಲ್ ಮಾಡಲಿಲ್ಲ. ಈಗ ಯಾಕೆ ಟ್ರೋಲ್ ಎಂದು ಮಹೇಶ್ ಬಾಬು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಮೊದಲ ದಿನವೇ 'ಗುಂಟೂರು ಖಾರಂ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಸಿನಿಮಾ 94 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ 2ನೇ ದಿನ 33 ಕೋಟಿ ರೂ. ಮಾತ್ರ ಗಳಿಕೆ ಕಂಡಿರುವುದಾಗಿ ಹೇಳಲಾಗಿದೆ. ಒಟ್ಟಾರೆ 2 ದಿನಕ್ಕೆ ಸಿನಿಮಾ 127 ಕೋಟಿ ರೂ. ಬಾಚಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಆದರೆ ಮೊದಲ ದಿನದ ಕಲೆಕ್ಷನ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಹಾಗಾಗಿ 2ನೇ ದಿನದ ಕಲೆಕ್ಷನ್ ಕಮ್ಮಿ ಹೇಳಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











