ರಾಮ್‌ಚರಣ್ ಸಿನಿಮಾ ಸೆಟ್‌ನಲ್ಲಿ ಲಘು ಪ್ರವಾಹ ಪರಿಸ್ಥಿತಿ; ಅವಘಡದಲ್ಲಿ ಕೆಲವರಿಗೆ ಪೆಟ್ಟು
ಸಿನಿಮಾ ಚಿತ್ರೀಕರಣದ ವೇಳೆ ಎಷ್ಟೇ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ತೆಲುಗಿನ 'ದಿ ಇಂಡಿಯನ್ ಹೌಸ್' ಸಿನಿಮಾ ಶೂಟಿಂಗ್ ವೇಳೆ ಎಡವಟ್ಟಾಗಿ ಕೆಲವರು ಗಾಯಗೊಂಡಿದ್ದಾರೆ. ಶಂಷಾಬಾದ್ ಸಮೀಪ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿತ್ತು.
ನಿಖಿಲ್ ನಟನೆಯ 'ದಿ ಇಂಡಿಯನ್ ಹೌಸ್' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿದೆ. ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಲುಗು ನಟ ರಾಮ್‌ಚರಣ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ವಂಶಿಕೃಷ್ಣ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಸಾಯಿ ಮಂಜ್ರೇಕರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು ಅನುಪಮ್ ಖೇರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಮುದ್ರದ ಸನ್ನಿವೇಶವನ್ನು ಚಿತ್ರೀಕರಿಸಲು ದೊಡ್ಡ ಟ್ಯಾಂಕ್‌ನಲ್ಲಿ ಸಾವಿರಾರು ಲೀಟರ್ ನೀರನ್ನು ಸಂಗ್ರಹಿಸಲಾಗಿತ್ತು. ಒಮ್ಮೆಲೆ ವಾಟರ್ ಟ್ಯಾಂಗ್ ಒಡೆದು ನೀರು ನುಗ್ಗಿದೆ. ಸಣ್ಣ ಪ್ರಮಾಣದ ಪ್ರವಾಹ ಪರಿಸ್ಥಿತಿ ಸೆಟ್ ಒಳಗೆ ಕಂಡುಬಂದಿದೆ. ಈ ವೇಳೆ ಕ್ಯಾಮರಾವನ್ನು ಸುರಕ್ಷಿತವಾಗಿ ಅಲ್ಲಿಂದ ತೆಗೆದುಕೊಂಡು ಬರಲು ಅಸಿಸ್ಟೆಂಟ್ ಕ್ಯಾಮರಾಮನ್ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಗಂಭೀರವಾಗಿ ಪೆಟ್ಟಾಗಿದೆ ಎಂದು ವರದಿಯಾಗಿದೆ.
ಟ್ಯಾಂಕ್‌ನಲ್ಲಿ ನೀರು ತುಂಬಿಸಲಾಗುತ್ತಿತ್ತು. ಇತ್ತ ಚಿತ್ರತಂಡ ಚಿತ್ರೀಕರಣದಲ್ಲಿ ಮಗ್ನವಾಗಿತ್ತು. ದಿಢೀರನೆ ಟ್ಯಾಂಗ್ ಒಡೆದು ಒಮ್ಮೆಲೆ ನೀರು ನುಗ್ಗಿದ್ದರಿಂದ ಚಿತ್ರತಂಡ ಶಾಕ್ ಆಗಿತ್ತು. ಇಳಿಜಾರು ಇರುವ ಕಡೆಗೆ ಒಮ್ಮೆ ನೀರು ಬಂದಿದ್ದು ಅಲ್ಲಿದ್ದ ಶೂಟಿಂಗ್ ಪರಿಕರಗಳನ್ನು ಕೊಚ್ಚಿಕೊಂಡು ಹೋಗಿದೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಚಿತ್ರೀಕರಣ ನಿಲ್ಲಿಸಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಕ್ರಂ ರೆಡ್ಡಿ ಎಂಬುವವರ ಜೊತೆ ಸೇರಿ ರಾಮ್‌ಚರಣ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 1905 ರ ಕಾಲಘಟ್ಟದ ಪೀರಿಯಡ್ ಕಥೆ ಇದ್ದಾಗಿದ್ದು ಪ್ರೀತಿ ಮತ್ತು ಕ್ರಾಂತಿಯ ಸುತ್ತಾ ಸಿನಿಮಾ ಸಾಗುತ್ತದೆ. ಹಂಪಿಯ (ಕಿಷ್ಕಿಂದೆ) ವಿರೂಪಾಕ್ಷ ದೇವಸ್ಥಾನದಲ್ಲಿ ಕಳೆದ ವರ್ಷ ಪೂಜೆ ಸಲ್ಲಿಸಿ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಚಿತ್ರದಲ್ಲಿ ಸಮುದ್ರದ ಪಾತ್ರ ದೊಡ್ಡದಾಗಿದೆ. ಹಾಗಾಗಿ ನೈಜವಾಗಿ ಸಮುದ್ರದ ತಡಿಯಲ್ಲಿ 'ದಿ ಇಂಡಿಯನ್ ಹೌಸ್' ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಜೊತೆಗೆ ಕೆಲ ಮುಖ್ಯವಾದ ಸನ್ನಿವೇಶಗಳನ್ನು ಬ್ಲೂ ಮ್ಯಾಟ್ ಸೆಟ್‌ನಲ್ಲಿ ಸೆರೆಹಿಡಿಲಾಗುತ್ತಿದೆ.
ಸೆಟ್ ಒಳಗೆ ಸಣ್ಣ ಪ್ರಮಾಣದ ಸಮುದ್ರದ ರೀತಿ ನೀರು ತುಂಬಿಸಿ ಚಿತ್ರೀಕರಣ ನಡೆಸಿ ಬಳಿಕ ಸಿಜಿಯಲ್ಲಿ ಅದನ್ನು ದೊಡ್ಡದಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಪ್ರಯತ್ನ ಸರ್ವೇಸಾಮಾನ್ಯ. ಇತ್ತೀಚೆಗೆ ತೆಲುಗಿನ 'ದೇವರ' ಚಿತ್ರದಲ್ಲಿ ಕೂಡ ಇಂತಹ ಪ್ರಯತ್ನ ಮಾಡಲಾಗಿತ್ತು. ಆ ಚಿತ್ರದಲ್ಲಿ ಕೂಡ ಸಮುದ್ರದ ಸನ್ನಿವೇಶಗಳು ಹೆಚ್ಚಿದ್ದವು. ಅದರಲ್ಲಿ ಕೆಲ ಸನ್ನಿವೇಶಗಳನ್ನು ಇದೇ ರೀತಿ ಸೆಟ್‌ನಲ್ಲಿ ನೀರು ತುಂಬಿಸಿ ಶೂಟ್ ಮಾಡಿದ್ದರು.
ನಿಖಿಲ್ ನಟಿಸಿದ್ದ 'ಕಾರ್ತಿಕೇಯ'-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಹಾಗಾಗಿ ಅವರನ್ನು ನಂಬಿ 'ದಿ ಇಂಡಿಯನ್ ಹೌಸ್' ಚಿತ್ರಕ್ಕೆ ರಾಮ್‌ಚರಣ್ ಬಂಡವಾಳ ಹೂಡಿದ್ದಾರೆ. ಈ ವರ್ಷವೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಹಾಲಿವುಡ್ ಕಲಾವಿದರು ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊನಿದೇಲ ಸಂಸ್ಥೆ ಬ್ಯಾನರ್‌ನಲ್ಲಿ ದೊಡ್ಡ ಸಿನಿಮಾಗಳನ್ನು ರಾಮ್‌ಚರಣ್ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಸಣ್ಣ ಬಜೆಟ್ ಸಿನಿಮಾಗಳನ್ನು ನಿರ್ಮಿಸಿ ಹೊಸಬರಿಗೆ ಅವಕಾಶ ಕೊಡುತ್ತಿದ್ದಾರೆ.
ಇನ್ನು ಚಿತ್ರೀಕರಣದ ವೇಳೆ ನಡೆದ ಈ ಅವಘಡದ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ. 'ಕಾರ್ತಿಕೇಯ- 2' ಬಳಿಕ 'ದಿ ಇಂಡಿಯನ್ ಹೌಸ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











