ಮತ್ತೆ 'ಪುಷ್ಪ'-2 ರಿಲೀಸ್ ಪೋಸ್ಟ್‌ಪೋನ್; ಹೊಸ ರಿಲೀಸ್ ಡೇಟ್ ಘೋಷಣೆ
ಪ್ಯಾನ್ ಇಂಡಿಯಾ ಸಿನಿಮಾಗಳ ಸಹವಾಸವೂ ಸಾಕು, ಫ್ಯಾನ್ಸ್ ಕಾಯುವುದು ಸಾಕಪ್ಪ ಸಾಕು ಎನ್ನುವಂತಾಗಿಬಿಟ್ಟಿದೆ. ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಪದೇ ಪದೇ ಮುಂದೂಡಲಾಗುತ್ತಿದೆ. ಇದೀಗ 'ಪುಷ್ಪ'-2 ರಿಲೀಸ್ ಮತ್ತೆ ಮುಂದಕ್ಕೆ ಹೋಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕಳೆದೊಂದು ವಾರದಿಂದ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಬಗ್ಗೆ ಗುಸುಗುಸು ಶುರುವಾಗಿತ್ತು. ಇದೀಗ ಅದು ನಿಜವಾಗಿದೆ. ಆಗಸ್ಟ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಕಳೆದ ವರ್ಷವೇ ಘೋಷಿಸಲಾಗಿತ್ತು. ಆದರೆ ಇನ್ನು 4 ತಿಂಗಳು ತಡವಾಗಿ ಮತ್ತೆ 'ಪುಷ್ಪ'ರಾಜ್ ಬರ್ತಿದ್ದಾನೆ. ಇದು ಸಹಜವಾಗಿಯೇ ಅಲ್ಲು ಅರ್ಜುನ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಈಗಾಗಲೇ 2 ಸಾಂಗ್ಸ್, ಟೀಸರ್ ರಿಲೀಸ್ ಮಾಡಿ ಸದ್ದು ಮಾಡಿದ್ದ ಚಿತ್ರತಂಡ ಇದೀಗ ನಿರಾಸೆ ಮೂಡಿಸಿದೆ.

'ಪುಷ್ಪ'-2 ರಿಲೀಸ್ ತಡವಾಗಲು ಕಾರಣ ಏನು ಎನ್ನುವುದನ್ನು ಚಿತ್ರತಂಡ ವಿವರಿಸಿದೆ. ಆಗಸ್ಟ್ 15 ರ ವೇಳೆಗೆ ಚಿತ್ರೀಕರಣ ಪೂರ್ಣಗೊಳ್ಳುವುದಿಲ್ಲ, ಒಳ್ಳೆ ಔಟ್‌ಪುಟ್ ಹಾಗೂ ಗುಣಮಟ್ಟಕ್ಕಾಗಿ ರಿಲೀಸ್ ಮುಂದೂಡಬೇಕಾಗುತ್ತದೆ, ಕಾಯಿಸಿದರೂ ಉತ್ತಮವಾದದ್ದನ್ನು ನೀಡಲಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಫ್ಯಾನ್ಸ್, ನಿರ್ಮಾಣ ಮತ್ತು ವ್ಯಾಪಾರ ಪಾಲುದಾರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
2021 ಡಿಸೆಂಬರ್ 17ಕ್ಕೆ 'ಪುಷ್ಪ' ಸಿನಿಮಾ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಸೀಕ್ವೆಲ್ ಅನ್ನು ಕಟ್ಟಿಕೊಡುವ ಪ್ರಯತ್ನ ಶುರುವಾಯಿತು. ಕೊಂಚ ತಡವಾಗಿ ಸಿನಿಮಾ ಸೆಟ್ಟೇರಿತ್ತು. ಈ ವರ್ಷ ಆಗಸ್ಟ್ 15ಕ್ಕೆ ಶತಾಯ ಗತಾಯ ಸಿನಿಮಾ ರಿಲೀಸ್ ಎಂದುಕೊಂಡಿದ್ದವರಿಗೆ ಬೇರಸವಾಗಿದೆ. ಇನ್ನು ಹೊಸ ಪೋಸ್ಟರ್ ಸಿನಿಮಾ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಪೋಸ್ಟ್‌ನಲ್ಲಿ 'ಪುಷ್ಪ'ರಾಜ್ ಹಣೆಗೆ ಬಟ್ಟೆ ಸುತ್ತಿಕೊಂಡು ಕತ್ತಿ ಹಿಡಿದು ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾನೆ. ಆದರೆ ಈ ಪೋಸ್ಟರ್ ನೋಡಿದ ಕೆಲವರು 'KGF' ಚಾಪ್ಟರ್-1 ಪೋಸ್ಟರ್ ನೆನಪಿಸಿಕೊಳ್ಳುತ್ತಿದ್ದಾರೆ. ರಾಕಿ ಭಾಯ್ ಆಗಿ ಯಶ್ ಹೆಚ್ಚು ಕಮ್ಮಿ ಇದೇ ರೀತಿ ತಲೆಗೆ ಬಟ್ಟೆ ಸುತ್ತಿಕೊಂಡಿದ್ದ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ಇದನ್ನು ಕೂಡ ಕಾಪಿ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಮೊದಲಿನಿಂದಲೂ 'KGF' ಹಾಗೂ 'ಪುಷ್ಪ' ಸಿನಿಮಾಗಳ ನಡುವೆ ಸಾಕಷ್ಟು ಹೋಲಿಕೆ ಇದೆ ಎಂದು ಕೆಲವರು ಹೇಳುತ್ತಾ ಬರ್ತಿದ್ದಾರೆ. ಇನ್ನು ಸುಕುಮಾರ್ ಶಿಷ್ಯ ಬುಚ್ಚಿಬಾಬು 'ಹತ್ತು ಕೆಜಿಎಫ್ ಸಿನಿಮಾಗಳು ಒಂದು 1 ಪುಷ್ಪ ಚಿತ್ರಕ್ಕೆ ಸಮ' ಎಂದಿದ್ದ ಹೇಳಿಕೆ ವೈರಲ್ ಆಗಿತ್ತು. ಬಳಿಕ ಇದೇ ಕಾರಣಕ್ಕೆ ಸಾಕಷ್ಟು ಟ್ರೋಲ್ಸ್ ಎದುರಿಸಬೇಕಾಯಿತು.
'ಪುಷ್ಪ' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ಕಲಾವಿದರು, ತಂತ್ರಜ್ಞರು ಸೀಕ್ವೆಲ್‌ಗೂ ಕೈ ಜೋಡಿಸಿದ್ದಾರೆ. ಬಜೆಟ್, ಸ್ಕೇಲ್, ಸಂಭಾವನೆ ಎಲ್ಲವೂ ಹೆಚ್ಚಾಗಿದೆ. ಮತ್ತೊಮ್ಮೆ ಶ್ರೀವಲ್ಲಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮಿಂಚಲಿದ್ದಾರೆ. ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಏಟು ಎದಿರೇಟು ಕೂಡ ಕುತೂಹಲ ಮೂಡಿಸಿದೆ. ಡಿಸೆಂಬರ್ 6ಕ್ಕೆ 'ಪುಷ್ಪ'-2 ತೆರೆಗೆ ಬರಲಿದೆ. ಅದೇ ಸಮಯದಲ್ಲಿ ಕನ್ನಡದ 'ಕೆಡಿ' ಚಿತ್ರ ಬಿಡುಗಡೆಗೆ ತಯಾರಿ ನಡೀತಿದೆ.
'ಪುಷ್ಪ'-2 ಎದುರು ಪ್ರೇಮ್ 'ಕೆಡಿ' ಸಿನಿಮಾ ಬಿಡುಗಡೆ ಮಾಡುತ್ತಾರಾ? ಕಾದು ನೋಡಬೇಕಿದೆ. ನಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿ ಬೇರೆ ಭಾಷೆಯ ಯಾವುದೇ ಸಿನಿಮಾ ಬಂದು ವಾರ್ ಗ್ಯಾರೆಂಟಿ ಎಂದು ಪ್ರೇಮ್ ಹೇಳಿದ್ದರು. ಹಾಗಾಗಿ 'ಕೆಡಿ' ವರ್ಸಸ್ 'ಪುಷ್ಪ-2' ಬಾಕ್ಸಾಫೀಸ್ ಕ್ಯ್ಲಾಶ್ ನಡೆಯುತ್ತಾ ಕಾದು ನೋಡಬೇಕಿದೆ.


Click it and Unblock the Notifications











