ಪ್ರಶಾಂತ್ ನೀಲ್ ಚಿತ್ರದಲ್ಲಿ ನಟಿಸೋಕೆ ನೋ ಎಂದಿದ್ದೇಕೆ ಮಲಯಾಳಂ ನಟ?
ದೊಡ್ಡ ಸಿನಿಮಾಗಳಲ್ಲಿ ನಟಿಸೋಕೆ ನಟ, ನಟಿಯರು ಸದಾ ಸಿದ್ಧರಿರುತ್ತಾರೆ. ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ನೂರಾರು ಕೋಟಿ ಬಂಡವಾಳ ಸುರಿದು ವರ್ಷಗಳಗಟ್ಟಲೆ ಸಿನಿಮಾ ಮಾಡ್ತಾರೆ. ಒಳ್ಳೆ ಸಂಭಾವನೆ ಕೂಡ ಕೊಡ್ತಾರೆ. ದಿನಕ್ಕೆ ಒಂದು ಎರಡು ಶಾಟ್ ಶೂಟ್ ಮಾಡ್ತಾರೆ. ಹಾಗಾಗಿ ಚಿತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆ ಆದಾಯ ಬರುತ್ತದೆ.
ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಎಲ್ಲರೂ ಒಪ್ಪಿಕೊಳ್ಳಲ್ಲ. ಕಥೆ, ಚಿತ್ರಕಥೆ ಇಷ್ಟವಾಗಲಿಲ್ಲ ಎಂದು ನೋ ಹೇಳುವವರು ಒಂದು ಕಡೆ. ದೊಡ್ಡವರ ಸಹವಾಸ ಬೇಡಪ್ಪ. ಬಿಗ್ ಬಜೆಟ್ ಸಿನಿಮಾ ಮಾಡ್ತಾ ಟೈಂ ವೇಸ್ಟ್ ಮಾಡುವ ಬದಲು ಚಿಕ್ಕ ಸಿನಿಮಾಗಳಲ್ಲಿ ಒಳ್ಳೆ ಅವಕಾಶ ಸಿಕ್ಕರೆ ನಟಿಸೋಣ ಎನ್ನುವವರು ಇದ್ದಾರೆ. ಮಲಯಾಳಂ ನಟ ಟೊವಿನೊ ಥಾಮಸ್ ಇದೇ ಕಾರಣಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಒಲ್ಲೆ ಎಂದಿದ್ದಾರೆ.

'ಸಲಾರ್' ಬಳಿಕ ಜ್ಯೂ. ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಚಿತ್ರಕ್ಕೆ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಜೂನ್ 25ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಸದ್ಯಕ್ಕೆ ಆ ಪರಿಸ್ಥಿತಿ ಕಾಣ್ತಿಲ್ಲ. ಅದೇ ದಿನ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲಿದೆ.
ತಾರಕ್ ಹಾಗೂ ಪ್ರಶಾಂತ್ ನೀಲ್ ಜೋಡಿಯ ಚಿತ್ರದಲ್ಲಿ ನಟಿಸುವಂತೆ ಕೇಳಿದ್ರು. ಆದರೆ ನಾನೇ ಒಪ್ಪಲಿಲ್ಲ ಎಂದು ಟೊವಿನೊ ಥಾಮಸ್ ಹೇಳಿದ್ದಾರೆ. ಸದ್ಯ ಅವರು ನಟಿಸಿರುವ 'ಪಳ್ಳಿ ಚಟ್ಟಂಬಿ' ಎಂಬ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವನ್ನು ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ಡ್ರ್ಯಾಗನ್' ಚಿತ್ರದಲ್ಲಿ ಯಾಕೆ ನಟಿಸಲಿಲ್ಲ ಎನ್ನುವ ಪ್ರಶ್ನೆಗೆ ಡೇಟ್ಸ್ ಸಮಸ್ಯೆಯಿಂದ ಒಪ್ಪಲಿಲ್ಲ ಎಂದು ನಟ ಟೊವಿನೊ ಥಾಮಸ್ ಹೇಳಿದ್ದಾರೆ. "ನಾನು ಒಮ್ಮೆಲೆ ಒಂದಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಮಲಯಾಳಂನಲ್ಲಿ, ನಾವು ಒಂದು ಚಿತ್ರವನ್ನು ಒಂದೇ ಶೆಡ್ಯೂಲ್‌ನಲ್ಲಿ ಪೂರ್ಣಗೊಳಿಸುತ್ತೇವೆ. ಆದರೆ ತೆಲುಗಿನಲ್ಲಿ, ಒಂದು ಚಿತ್ರವನ್ನು ಪೂರ್ಣಗೊಳಿಸಲು ಸುಮಾರು ಒಂದು ವರ್ಷ ಆಗುತ್ತೆ. ನಾನು ಯಾವುದೇ ಚಿತ್ರಕ್ಕೆ ಮೂರು ತಿಂಗಳು ಕಾಲ್‌ಶೀಟ್ ಕೊಡ್ತೀನಿ. ಇಡೀ ವರ್ಷ ಮೀಸಲಿಡಲು ಸಾಧ್ಯವಿಲ್ಲ. ನಾನು ಮಾಡಬಾರದು ಎಂದಲ್ಲ. ಆದರೆ ಇದರಿಂದ ನನ್ನ ಇತರ ಚಿತ್ರಗಳಿಗೆ ಅಡ್ಡಿಯಾಗುತ್ತದೆ" ಎಂದು ವಿವರಿಸಿದ್ದಾರೆ.
ಹಲವು ಹಿಟ್ ಸಿನಿಮಾಗಳಲ್ಲಿ ಟೊವಿನೊ ಥಾಮಸ್ ನಟಿಸಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಪಲ್ಲಿಚಟ್ಟಂಬಿ', 'ಟಾಕ್ಸಿಕ್' ಹಾಗೂ 'ಅಥಿರಡಿ' ಹೀಗೆ 3 ಸಿನಿಮಾಗಳು ಈಗ ಅವರ ಕೈಯಲ್ಲಿವೆ. ಕಳೆದ ವರ್ಷ 'ಲೋಕಾ: ಚಾಪ್ಟರ್-1 ಚಂದ್ರ' ಚಿತ್ರದಲ್ಲಿ ಕೂಡ ಮಿಂಚಿದ್ದರು.
ಟೊವಿನೊ ಮಾತು ನೂರಕ್ಕೆ ನೂರು ನಿಜ. ಮಲಯಾಳಂ ಕಲಾವಿದರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಗೋಜಿಗೆ ಹೆಚ್ಚಾಗಿ ಹೋಗಲ್ಲ. ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ರೀತಿಯ ಸ್ಟಾರ್ ನಟರ ಕೈಯಲ್ಲಿ ಎರಡ್ಮೂರು ಸಿನಿಮಾಗಳು ಸದಾ ಇರುತ್ತವೆ. ಟೊವಿನೊ ಥಾಮಸ್ ನಾಲ್ಕೈದು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಮುಂದಿನ ವಾರ 'ಪಲ್ಲಿಚಟ್ಟಂಬಿ' ಸಿನಿಮಾ ಬಿಡುಗಡೆ ಆಗಲಿದೆ. ಡಿಯೊ ಜೊಸ್ ಆಂಟನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಯಾದು ಲೊಹರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯ್ ರಾಘವನ್ ಸೇರಿ ಬಹುತೇಕ ಹೊಸಬರು ಚಿತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











