ಪ್ರಭಾಸ್ ನಟನೆಯ 'ಸಲಾರ್'ನಲ್ಲಿ ಮಲಯಾಳಂ ಸ್ಟಾರ್ ಹೀರೋ!
ಪ್ಯಾನ್ ಇಂಡಿಯಾ ಸಿನಿಮಾಗಳಿಂದಾಗಿ ವಿವಿಧ ಚಿತ್ರರಂಗಗಳ ನಡುವಿನ ಗಡಿ ಬಹುತೇಕ ಅಳಿಸಿ ಹೋಗಿದೆ. ಪರಸ್ಪರ ಚಿತ್ರರಂಗದ ನಟ-ನಟಿಯರು ಈ ಹಿಂದಿಗಿಂತಲೂ ಹೆಚ್ಚು ಆತ್ಮೀಯವಾಗಿದ್ದಾರೆ. ಸಿನಿಮಾ ವ್ಯವಹಾರದ ಕಾರಣಕ್ಕೆ ಇದು ಅವಶ್ಯಕವೂ ಆಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ಜಮಾನ ಆರಂಭವಾದ ಬಳಿಕ ದೊಡ್ಡ ಸಿನಿಮಾಗಳು ಹೊಸ ತಂತ್ರವನ್ನು ಅನುಸರಿಸುತ್ತಿವೆ. ಒಂದೊಂದು ಸಿನಿಮಾ ರಂಗದಿಂದ ಒಬ್ಬೊಬ್ಬರು ಜನಪ್ರಿಯ ನಟರನ್ನು ತಮ್ಮ ಸಿನಿಮಾಗಳಿಗೆ ಹಾಕಿಕೊಂಡು ಸಿನಿಮಾ ಮಾಡುತ್ತಿವೆ. ಮಾರುಕಟ್ಟೆ ತಂತ್ರವಾಗಿಯೂ ಇದನ್ನು ಬಳಸಲಾಗುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಒಳ್ಳೆಯ ನಿರ್ದೇಶಕ ಆಗಿರುವ ಜೊತೆಗೆ ಚಾಣಾಕ್ಷ ಮಾರುಕಟ್ಟೆ ತಂತ್ರಗಾರರೂ ಆಗಿದ್ದು, ತಮ್ಮ 'ಸಲಾರ್' ಸಿನಿಮಾಕ್ಕೆ ಈಗ ಇಂಥಹುದೇ ತಂತ್ರ ಬಳಸಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾಕ್ಕೆ ಮಲಯಾಳಂನ ಸ್ಟಾರ್ ನಟರೊಬ್ಬರನ್ನು ಆಯ್ಕೆ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಆ ನಟರೇ ಹೇಳಿದ್ದಾರೆ.

'ಕುಡುವ' ಸಿನಿಮಾದ ಪ್ರಚಾರದಲ್ಲಿ ಸುಕುಮಾರನ್
ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ ಪೃಥ್ವಿರಾಜ್ ಸುಕುಮಾರನ್, ತಮ್ಮ ಪ್ಯಾನ್ ಇಂಡಿಯಾ ಸಿನಿಮಾ 'ಕುಡುವ'ದ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದು, ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಹೋದಾಗ, ತಾವು ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದಲ್ಲಿ ನಟಿಸಲಿದ್ದು, ಇದು ತಮ್ಮ ಮೊದಲ ತೆಲುಗು ಸಿನಿಮಾ ಆಗಲಿದೆ ಎಂದಿದ್ದಾರೆ.

''ಸಲಾರ್' ಕತೆಯನ್ನು ಎರಡು ವರ್ಷಗಳ ಹಿಂದೆಯೇ ಕೇಳಿದ್ದೆ''
'ಫಹಾದ್ ಫಾಸಿಲ್, ದುಲ್ಕರ್ ಸಲ್ಮಾನ್ ಆಯಿತು. ನೀವು ತೆಲುಗು ಸಿನಿಮಾದಲ್ಲಿ ನಟಿಸುವುದು ಯಾವಾಗ?' ಎಂಬ ಪ್ರಶ್ನೆಯನ್ನು ಸುಕುಮಾರನ್‌ಗೆ ತೆಲುಗು ಮಾಧ್ಯಮಗಳು ಕೇಳಿವೆ. ಪ್ರಶ್ನೆಗೆ ಉತ್ತರಿಸಿರುವ ಪೃಥ್ವಿರಾಜ್ ಸುಕುಮಾರನ್, ''ಸಲಾರ್' ಸಿನಿಮಾದ ಕತೆಯನ್ನು ಎರಡು ವರ್ಷದ ಹಿಂದೆಯೇ ನನಗೆ ಹೇಳಿ, ಪಾತ್ರವೊಂದರಲ್ಲಿ ನಟಿಸುವಂತೆ ಹೇಳಲಾಗಿತ್ತು. ನಾನು ಸಹ ಡೇಟ್ಸ್ ನೀಡಿದ್ದೆ. ಆದರೆ ಕೋವಿಡ್ ಬಂದು ಚಿತ್ರೀಕರಣದಲ್ಲಿ ವ್ಯತ್ಯಯ ಆದ ಕಾರಣ ನನ್ನ ಡೇಟ್ಸ್ ಸಹ ಬದಲಾಗಿ ಸಿನಿಮಾದಿಂದ ಹೊರಗೆ ಉಳಿಯಬೇಕಾಯ್ತು'' ಎಂದಿದ್ದಾರೆ ಪೃಥ್ವಿ.

ಈಗ ಡೇಟ್ಸ್ ಹೊಂದಿಸಿಕೊಳ್ಳಬಲ್ಲೆ: ಪೃಥ್ವಿರಾಜ್ ಸುಕುಮಾರನ್
''ಆದರೆ ಆ ಬಳಿಕ ನಟ ಪ್ರಭಾಸ್ ಡೇಟ್ಸ್ ಸಹ ವ್ಯತ್ಯಾಸವಾದ್ದರಿಂದ ಚಿತ್ರೀಕರಣ ತಡವಾಗಿದ್ದು, ಈಗ ನನ್ನ ಡೇಟ್ಸ್ ಅನ್ನು ಹೊಂದಿಸಿಕೊಂಡಿದ್ದೇನೆ. ಪ್ರಭಾಸ್ ಜೊತೆ ನಟಿಸುವ ಅವಕಾಶ ಬಿಡುವುದುಂಟೆ ಅಲ್ಲದೆ ನಿರ್ದೇಶಕ ಪ್ರಶಾಂತ್ ನೀಲ್ ನನ್ನ ಗೆಳೆಯ ಸಹ ಅವರೊಟ್ಟಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಇದು ನನ್ನ ಮೊದಲ ತೆಲುಗು ಸಿನಿಮಾ ಆಗಿರಲಿದೆ'' ಎಂದಿದ್ದಾರೆ ಪೃಥ್ವಿರಾಜ್ ಸುಕುಮಾರನ್.

ಪೃಥ್ವಿರಾಜ್ ಸಿನಿಮಾಕ್ಕೆ ಹೊಂಬಾಳೆ ಬಂಡವಾಳ
'ಕೆಜಿಎಫ್' ಸರಣಿ ಸಿನಿಮಾಗಳು ಹಾಗೂ '777 ಚಾರ್ಲಿ' ಸಿನಿಮಾವನ್ನು ಕೇರಳದಲ್ಲಿ ವಿತರಣೆ ಮಾಡಿದ್ದರು ಪೃಥ್ವಿರಾಜ್ ಸುಕುಮಾರನ್. ಇದೀಗ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಪೃಥ್ವಿರಾಜ್ ಸುಕುಮಾರನ್ ಜೊತೆ ಕೈ ಜೋಡಿಸಿದ್ದು, ಅವರ ಮುಂದಿನ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ ಹೊಂಬಾಳೆ. ಕನ್ನಡದಲ್ಲಿಯೂ ಅವರೇ ನಾಯಕರಾಗಿರುತ್ತಾರೆಯೋ ಅಥವಾ ಬೇರೆಯವರು ನಾಯಕರಾಗಿರುತ್ತಾರೆಯೋ ಕಾದು ನೋಡಬೇಕಿದೆ. ಹೊಂಬಾಳೆ ನಿರ್ಮಾಣ ಮಾಡಿ ಪೃಥ್ವಿರಾಜ್ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು 'ಟೈಸನ್'. ಇದು ಐಎಎಸ್ ಅಧಿಕಾರಿಯ ಕತೆಯನ್ನು ಒಳಗೊಂಡಿದೆ.


Click it and Unblock the Notifications











