ನರೇಶ್ ಮನೆಗೆ 3ನೇ ಪತ್ನಿ ರಮ್ಯಾ ರಘುಪತಿ ಹೋಗದಂತೆ ಕೋರ್ಟ್ ನಿಷೇಧ: ಶೀಘ್ರದಲ್ಲೇ ವಿಚ್ಛೇದನ?
ತೆಲುಗು ನಟ ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿಗೆ ಡಿವೋರ್ಸ್ ಕೊಡದೇ ಕನ್ನಡ ನಟಿ ಪವಿತ್ರ ಲೋಕೇಶ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ನರೇಶ್ ಹಾಗೂ ರಮ್ಯಾ ನಡುವೆ ಭಾರೀ ರಂಪಾಟ ನಡೀತು. ಮಾಧ್ಯಮಗಳ ಮುಂದೆ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿದ್ದರು. ತಮ್ಮದೇ ಕಥೆಯನ್ನು ನರೇಶ್ ಸಿನಿಮಾ ಮಾಡಿದ್ದರು.
ನರೇಶ್- ಪವಿತ್ರಾ ಲೋಕೇಶ್ ನಟನೆಯ 'ಮಳ್ಳಿ ಪೆಳ್ಳಿ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಸಿನಿಮಾ ಪ್ರಚಾರದ ವೇಳೆ ಇಬ್ಬರು ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇರುವ ಸಂಗತಿ ಒಪ್ಪಿಕೊಂಡಿದ್ದರು. ತಮ್ಮ 3ನೇ ಪತ್ನಿ ರಮ್ಯಾ ರಘುಪತಿಯವರನ್ನು ಟಾರ್ಗೆಟ್ ಮಾಡಿಯೇ ನರೇಶ್ ಈ ಸಿನಿಮಾ ಮಾಡಿರುವುದಾಗಿ ಕೆಲವರು ವಾದಿಸಿದರು. ಇನ್ನು ಚಿತ್ರವನ್ನು ಥಿಯೇಟರ್ ಹಾಗೂ ಓಟಿಟಿಯಲ್ಲಿ ಪ್ರದರ್ಶನ ಮಾಡದಂತೆ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದರು.

ರಮ್ಯಾ ರಘುಪತಿ ಪಿಟಿಷನ್ ವಿಚಾರಣೆ ನಡೆಸಿದ ಕೋರ್ಟ್ ವಾದ, ಪ್ರತಿವಾದ ಆಲಿಸಿ ಮೆರಿಟ್ ಇಲ್ಲದ ಕಾರಣ ಪಿಟಿಷನ್ ರದ್ದು ಮಾಡಿದೆ. ಸೆನ್ಸಾರ್ ಮಂಡಳಿ ಈ ಸಿನಿಮಾ ಕಾಲ್ಪನಿಕ ಎಂದು ಹೇಳಿ ಸರ್ಟಿಫಿಕೇಟ್ ನೀಡಿದೆ. ಸ್ವತಃ ಸೆನ್ಸಾರ್ ಬೋರ್ಡ್ ಅದು ಕಾಲ್ಪನಿಕ ಸಿನಿಮಾ ಎಂದಮೇಲೆ ಖಾಸಗಿ ವ್ಯಕ್ತಿಗಳು ಸಿನಿಮಾ ಪ್ರದರ್ಶನ ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಹಾಗಾಗಿ ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್‌ಗೆ ಇದ್ದ ವಿಘ್ನ ನಿವಾರಣೆಯಾದಂತಾಗಿದೆ.
ನರೇಶ್‌ಗೆ ಡಬಲ್ ರಿಲೀಫ್
'ಮಳ್ಳಿ ಪೆಳ್ಳಿ' ಸಿನಿಮಾ ಓಟಿಟಿ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಮಾತ್ರವಲ್ಲ, ಮತ್ತೊಂದು ಕೇಸ್‌ನಲ್ಲೂ ನರೇಶ್ ಕೈ ಮೇಲಾಗಿದೆ. ತಮ್ಮ ಮನೆಗೆ ರಮ್ಯಾ ರಘುಪತಿ ಬರದಂತೆ ನರೇಶ್ ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ ತಡೆಯಾಜ್ಞೆ ಮೊಕದ್ದಮೆಯನ್ನು ನ್ಯಾಯಾಲಯವು ಅಂಗೀಕರಿಸಿತು. ಹೈದರಾಬಾದ್‌ನ ನಾನಕ್‌ರಾಮ್‌ಗುಡದಲ್ಲಿರುವ ತಮ್ಮ ಮನೆಗೆ ರಮ್ಯಾ ರಘುಪತಿ ಪ್ರವೇಶಿಸುವುದನ್ನು ನಿಷೇಧಿಸಿತು. ನರೇಶ್ ವಿರುದ್ಧ ರಮ್ಯಾ ರಘುಪತಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧದ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು ಗೊತ್ತೇ ಇದೆ.
ಗೃಹ ನಿಷೇಧ ಪ್ರಕರಣ
ರಮ್ಯಾ ದೂರಿಗೆ ಪ್ರತಿಯಾಗಿ ನರೇಶ್ ಮತ್ತು ಆತನ ಕುಟುಂಬಸ್ಥರು ರಮ್ಯಾ ವಿರುದ್ಧ ಗೃಹ ನಿಷೇಧ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯವು ರಮ್ಯಾಗೆ ನರೇಶ್ ಮನೆಗೆ ಪ್ರವೇಶಿಸದಂತೆ ಆದೇಶ ಹೊರಡಿಸಿತು. ಅಂದಹಾಗೆ ನರೇಶ್ ಮತ್ತು ಅವರ ಕುಟುಂಬದವರು ನೀಡಿರುವ ಸಾಕ್ಷ್ಯದ ಪ್ರಕಾರ, ರಮ್ಯಾ ರಘುಪತಿ ಈಗ ಅಲ್ಲಿ ವಾಸಿಸುತ್ತಿಲ್ಲ. ಆಸ್ತಿಯನ್ನು ವ್ಯಾಪಾರ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ರಮ್ಯಾಗಾಗಿ ಅಪರಿಚಿತ ವ್ಯಕ್ತಿಗಳು ಬರುವುದರಿಂದ ಅಲ್ಲಿ ವಾಸಿಸುವ ಹಿರಿಯ ನಾಗರಿಕರು ಮತ್ತು ನರೇಶ್‌ಗೆ ತೊಂದರೆ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ನರೇಶ್- ರಮ್ಯಾಗೆ ಶೀಘ್ರದಲ್ಲೇ ಡಿವೋರ್ಸ್?
ಇನ್ನು ನರೇಶ್ ಮತ್ತು ರಮ್ಯಾ ರಘುಪತಿ 6 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿಲ್ಲ ಎನ್ನುವ ನಿರ್ಣಯಕ್ಕೆ ಕೋರ್ಟ್ ಬಂದಿದೆ. ಈ ತೀರ್ಪು ನರೇಶ್ ಮತ್ತು ರಮ್ಯಾ ರಘುಪತಿ ವಿಚ್ಛೇದನದ ಹಾದಿ ಸುಮಗ ಮಾಡಿದಂತಾಗಿದೆ. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ, ಪತಿ ಮತ್ತು ಪತ್ನಿ ಎರಡಕ್ಕಿಂತ ಹೆಚ್ಚು ವರ್ಷಗಳ ಕಾಲ ಒಟ್ಟಿಗೆ ವಾಸಿಸದಿದ್ದರೆ ವಿವಾಹ ರದ್ದು ಮಾಡಬಹುದು. ನರೇಶ್ 3ನೇ ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ರಮ್ಯಾ ರಘುಪತಿ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.


Click it and Unblock the Notifications











