ಪತಿಯಿಂದ ದೂರಾದೂರ; ಡಿವೋರ್ಸ್ ಬಗ್ಗೆ ಮೌನ ಮುರಿದ ಮಂಚು ಲಕ್ಷ್ಮಿ
ತೆಲುಗು ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿದೇಶದಲ್ಲಿ ಓದಿ ಬೆಳೆದ ಆಕೆಗೆ ಚಿತ್ರರಂಗದಲ್ಲಿ ದೊಡ್ಡ ಸಕ್ಸಸ್ ಸಿಗಲಿಲ್ಲ. ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರೂ ಪ್ರಯೋಜನವಾಗಲಿಲ್ಲ. ಇನ್ನು ಮಂಚು ಲಕ್ಷ್ಮಿ ಡಿವೋರ್ಸ್ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಿರುತ್ತದೆ.
ಸದ್ಯ ಮಂಚು ಲಕ್ಷ್ಮಿ ಮುಂಬೈನಲ್ಲಿ ನೆಲೆಸಿದ್ದಾರೆ. 'ದಿ ಓಡ್' ಹಾಗೂ 'ಡಿಯರ್ ಏರ್' ಎನ್ನುವ ಇಂಗ್ಲೀಷ್ ಚಿತ್ರಗಳ ಮೂಲಕ ಆಕೆ ಚಿತ್ರರಂಗಕ್ಕೆ ಬಂದಿದ್ದರು. 'ಅನಗನಗ ಓ ಧೀರುಡು' ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ ನಾಯಕಿಯಾಗಿ ಮಾತ್ರ ನಟಿಸೋ ಅವಕಾಶ ದೊಡ್ಡದಾಗಿ ಆಕೆ ಸಿಕ್ಕಿರಲಿಲ್ಲ.

ಮಲಯಾಳಂನ 'ಮಾನ್‌ಸ್ಟರ್' ಮಂಚು ಲಕ್ಷ್ಮಿ ನಟಿಸಿದ ಕೊನೆಯ ಸಿನಿಮಾ. 'ಆದಿಪರ್ವಂ' ಎಂಬ ತೆಲುಗು ಚಿತ್ರವೊಂದು ಆಕೆಯ ಕೈಯಲ್ಲಿದೆ. ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿ ಆಗಿಯೂ ಆಕೆ ಗಮನ ಸೆಳೆದಿದ್ದರು. ಇನ್ನು 2006ರಲ್ಲಿ ಐಟಿ ಉದ್ಯೋಗಿ ಶ್ರೀನಿವಾಸನ್ ಎಂಬುವವರ ಜೊತೆ ಆಕೆಯ ಮದುವೆ ನಡೆದಿತ್ತು. ದಂಪತಿ ಸಾರೋಗಸಿ ಪದ್ಧತಿಯಲ್ಲಿ ಹೆಣ್ಣು ಮಗುವನ್ನು ಪಡೆದಿದ್ದರು.
ಮಂಚು ಲಕ್ಷ್ಮಿ ಹಾಗೂ ಶ್ರೀನಿವಾಸನ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ, ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ಚರ್ಚೆ ನಡೆಯುತ್ತಿದೆ. ಇಬ್ಬರೂ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದು ಇದಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಿದೆ. ಸದ್ಯ ಈ ಬಗ್ಗೆ ಸ್ವತಃ ಮೋಹನ್ ಬಾಬು ಪುತ್ರಿ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಆಕೆ ಮಾತನಾಡಿದ್ದಾರೆ.
ನಮ್ಮ ಪತಿ ಶ್ರೀನಿವಾಸನ್ ವಿದೇಶದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾವು ಬಹಳ ಅನ್ಯೋನ್ಯವಾಗಿ ಇದ್ದೀವಿ. ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿರುವುದೆಲ್ಲಾ ಸುಳ್ಳು. ನಾವಿಬ್ಬರು ಸಮಾಜದಲ್ಲಿ ಪ್ರಶಾಂತವಾಗಿರುವ ಸ್ವಾತಂತ್ರ್ಯ ಕೊಟ್ಟು ತೆಗೆದುಕೊಳ್ಳುತ್ತೇವೆ. ನ್ಯೂಕ್ಲಿಯರ್ ಫ್ಯಾಮಿಲಿ ರೀತಿ ಬದುಕುತ್ತೇವೆ ಎಂದು ಲಕ್ಷ್ಮಿ ಹೇಳಿಕೊಂಡಿದ್ದಾರೆ.

ಸ್ವೇಚ್ಛೆ, ಪ್ರೈವೆಸಿ, ವ್ಯಕ್ತಿಗತ ಜವಾಬ್ದಾರಿಗಳಿಗೆ ನಾವು ಪ್ರಾಮುಖ್ಯತೆ ಕೊಡುತ್ತೇವೆ. ನಮಗೆ ಬೇಕಾದಂತೆ ಬದುಕುತ್ತಿದ್ದೇವೆ. ಬೇರೆಯವರು ಏನು ಅಂದುಕೊಳ್ಳುತ್ತಾರೆ ಎಂದು ಯೋಚಿಸುತ್ತಾ ತಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಲ್ಲ. ಈಗ ಮಗಳು ಕೂಡ ತಂದೆಯ ಜೊತೆ ಇದ್ದಾಳೆ ಎಂದು ಲಕ್ಷ್ಮಿ ವಿವರಿಸಿದ್ದಾರೆ. ಆ ಮೂಲಕ ಡಿವೋರ್ಸ್ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
'ಅನಗನಗ ಓ ಧೀರುಡು', 'ದೊಂಗಾಟ', 'ಗುಂಡೆಲ್ಲೊ ಗೋದಾರಿ', 'ಚಂದಮಾಮ ಕಥಲು' ಮುಂತಾದ ಸಿನಿಮಾಗಳಲ್ಲಿ ಮಂಚು ಲಕ್ಷ್ಮಿ ನಟಿಸಿದ್ದಾರೆ. ಇತ್ತೀಚೆಗೆ ಲಕ್ಷ್ಮಿ ಸಹೋದರರ ಕಿತ್ತಾಟ ಬೀದಿಗೆ ಬಂದು ಭಾರೀ ಸುದ್ದಿ ಆಗಿತ್ತು. ಖ್ಯಾತ ನಟ ಮೋಹನ್ ಬಾಬುಗೆ ಲಕ್ಷ್ಮಿ ಮಂಚು ಜೊತೆಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ವಿಷ್ಣು, ಮನೋಜ್ ಕೂಡ ಚಿತ್ರರಂಗದಲ್ಲಿ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟಿದ್ದಾರೆ.
ಆಸ್ತಿ ವಿಚಾರವಾಗಿ ಮನೋಜ್ ತಂದೆ ಮೋಹನ್ ಬಾಬು ಜೊತೆ ಕ್ಯಾತೆ ತೆಗೆದಿದ್ದಾರೆ. ವಿಷ್ಣು ತಂದೆಗೆ ಬೆಂಬಲವಾಗಿ ನಿಂತಿದ್ದಾರೆ. ಹಾಗಾಗಿ ಪದೇ ಪದೆ ಸಹೋದರರ ನಡುವೆ ಜಗಳ ನಡೆಯುತ್ತಿರುತ್ತದೆ. ಇತ್ತೀಚೆಗೆ ಮೋಹನ್ ಬಾಬು ಹಾಗೂ ಮನೋಜ್ ಇಬ್ಬರೂ ಪರಸ್ಪರ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು.


Click it and Unblock the Notifications











