ಪಹಲ್ಗಾಮ್ ಸಂತ್ರಸ್ತೆಯ ಕುಟುಂಬ ದತ್ತು ಪಡೆದ ಮಂಚು ವಿಷ್ಣು..!
ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಪ್ರವಾಸಿಗರ ಹತ್ಯೆಗೈಯಲಾಯ್ತು. ದೇಶದೆಲ್ಲೆಡೆ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತವಾಯ್ತು. ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಿಸಬೇಕು ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ಕೇಳಿ ಬಂತು. ಮತ್ತೊಂದೆಡೆ ಹಲವು ರಾಜಕಾರಣಿಗಳು ಸಂತ್ರಸ್ತರ ಮನೆಗೆ ತೆರಳಿ ಬದುಕುಳಿದ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.ಮೃತರ ಕುಟುಂಬಕ್ಕೆ ಪರಿಹಾರವನ್ನು ಕೂಡ ಘೋಷಿಸಿದರು.
ಚಿತ್ರರಂಗದ ತಾರೆಯರು ಕೂಡ ಸೋಶಿಯಲ್ ಮೀಡಿಯಾ ಮೂಲಕ ಕಾಶ್ಮೀರದಲ್ಲಿ ಹತರಾದವರನ್ನು ನೆನೆದು ಮರಗಿದರು. ಘಟನೆಯನ್ನು ಖಂಡಿಸಿದರು. ಇದರ ನಡುವೆ ಇದೀಗ ಟಾಲಿವುಡ್ ಸ್ಟಾರ್ ಮತ್ತು ತೆಲುಗಿನ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ ಮಂಚು ವಿಷ್ಣು ಕಾಶ್ಮೀರದಲ್ಲಾದ ಭಯೋತ್ಪಾದಕರ ದಾಳಿಯಿಂದ ನಲುಗಿದ ಕುಟುಂಬದ ಜೊತೆ ನಿಂತಿದ್ದಾರೆ. ಸಹಾಯದ ಹಸ್ತವನ್ನು ಚಾಚಿದ್ದಾರೆ.

ಹೌದು, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಯಿಂದ ಪ್ರಾಣ ಕಳೆದುಕೊಂಡ ಆಂಧ್ರದ ನೆಲ್ಲೂರು ಜಿಲ್ಲೆ ಕಾವೆಲ್ಲಿಯ ಸೋಮಿಸೆಟ್ಟಿ ಮಧುಸೂಧನ್ ರಾವ್ ಅವರ ನಿವಾಸಕ್ಕೆ ಮಂಚು ವಿಷ್ಣು ಭೇಟಿ ನೀಡಿದ್ದಾರೆ.
ಸೋಮಿಸೆಟ್ಟಿ ಮಧುಸೂಧನ್ ಅವರ ಪತ್ನಿ ಕಾಮಾಕ್ಷಿ ಪ್ರಸನ್ನ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಮಧುಸೂಧನ್ ಅವರ ಇಬ್ಬರು ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಕೂಡ ಮಂಚು ವಿಷ್ಣು ಹೇಳಿದ್ದಾರೆ. ಇದರ ಜೊತೆ ಆರ್ಥಿಕವಾಗಿ ಸಹಾಯವನ್ನು ಕೂಡ ಮಂಚು ವಿಷ್ಣು ಮಾಡಿದ್ದಾರೆ.
ಸದ್ಯ ಮಂಚು ವಿಷ್ಣು ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಮಂಚು ವಿಷ್ಣು ಅವರನ್ನು ಹೊಗಳುತ್ತಿದ್ದಾರೆ. ಆದರೆ ಇದರ ನಡುವೆ ಇನ್ನು ಕೆಲವರು ಇದೆಲ್ಲವೂ ಪ್ರಚಾರದ ತಂತ್ರ ಎಂದು ತೆಗಳುತ್ತಿದ್ದಾರೆ. ಯಾಕೆಂದರೆ ಮಂಚು ವಿಷ್ಣು ಸದ್ಯ 'ಕಣ್ಣಪ್ಪ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಚಿತ್ರದಲ್ಲಿ ಕಣ್ಣಪ್ಪನ ಪಾತ್ರದಲ್ಲಿ ವಿಷ್ಣು ನಟಿಸಿದ್ದಾರೆ.
ಮಂಚು ವಿಷ್ಣು ಅವರ ತಂದೆ ಮೋಹನ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿಯೇ ಜನರ ಗಮನ ಸೆಳೆಯಲು ಮಂಚು ವಿಷ್ಣು ಈ ಕೆಲಸ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ಸದ್ಯ ವ್ಯಕ್ತವಾಗುತ್ತಿದೆ.


Click it and Unblock the Notifications











