ಖ್ಯಾತ ನಟನ ಬಯೋಪಿಕ್; ಹೀರೊ ಆಗಿ ನಟಿಸಲು ಸೂರ್ಯ ಒಪ್ಪಿಕೊಳ್ತಾರಾ?
ಚಿತ್ರರಂಗದಲ್ಲಿ ಬಯೋಪಿಕ್ ಟ್ರೆಂಡ್ ಮುಂದುವರೆಯುತ್ತಲೇ ಇದೆ. ವೀರ ಯೋಧರು, ಪರಾಕ್ರಮ ಮೆರೆದ ರಾಜರು, ಸ್ವಾತಂತ್ರ್ಯ ಹೋರಾಟಗಾರರು, ಖ್ಯಾತ ಕ್ರೀಡಾಪಟುಗಳು, ಉದ್ಯಮಿಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರ ಜೀವನಧಾರಿತ ಕಥೆಗಳು ದೃಶ್ಯ ರೂಪ ಪಡೆಯುತ್ತಿದೆ.
ಎಲ್ಲಾ ಬಯೋಪಿಕ್‌ಗಳು ಯಶಸ್ವಿ ಆಗಿಲ್ಲ. ಎಲ್ಲಾ ಸಾಧಕರ ಕಥೆಗಳನ್ನು ಸಿನಿಮಾ ಮಾಡಿ ಗೆಲ್ಲಿಸಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಕೆಲವರ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ಯೋಚಿಸಲಾಗುತ್ತದೆ. ಅಭಿಮಾನಿಗಳಿಗೆ ಅಂತಹ ಸಿನಿಮಾ ನೋಡಬೇಕು ಎನಿಸಬಹುದು. ಆದರೆ ಒಂದು ಚಿತ್ರದ ಕಥೆಗೆ ಬೇಕಾದ ಭಾವೋದ್ವೇಗದ ಅಂಶಗಳು, ಸಾಧಕನ ಜೀವನದ ಏರಿಳಿತಗಳು ಮುಖ್ಯವಾಗುತ್ತದೆ. ತೆಲುಗು ನಟಿ ಸಾವಿತ್ರಿ, ತೆಲುಗು ನಟ ಎನ್‌ಟಿಆರ್ ಸೇರಿದಂತೆ ಸಿನಿಮಾ ತಾರೆಯರ ಕಥೆಗಳನ್ನು ತೆರೆಗೆ ತರಲಾಗಿದೆ.

ಇದೀಗ ಮತ್ತೊಬ್ಬ ನಟನ ಕಥೆಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಬಗ್ಗೆ ಚರ್ಚೆ ನಡೀತಿದೆ. ಸ್ವತಃ ಅವರ ಪುತ್ರ ತಂದೆಯ ಬಯೋಪಿಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ನಟಿಸಿದರೆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ನಾನೇ ನಮ್ಮ ತಂದೆ ಬಯೋಪಿಕ್ ನಿರ್ಮಿಸಿದರೆ ತಮಿಳು ನಟ ಸೂರ್ಯ ನಟಿಸಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ತಮ್ಮ ತಂದೆಯ ಕಥೆಯನ್ನು ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿರುವುದು ತೆಲುಗು ನಟ ಮಂಚು ವಿಷ್ಣು. ಅವರ ತಂದೆ ಮೋಹನ್ ಬಾಬು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗೆದ್ದವರು. ಕಲೆಕ್ಷನ್ ಕಿಂಗ್ ಎಂದು ಬಿರುದುಪಡೆದವರು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಬಾಬು ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇತ್ತೀಚೆಗೆ ಕಿರಿಯ ಪುತ್ರ ಮಂಚು ಮನೋಜ್ ಜೊತೆಗಿನ ಭಿನ್ನಾಭಿಪ್ರಾಯ, ಗಲಾಟೆಯಿಂದ ಅವರು ಸುದ್ದಿ ಆಗಿದ್ದರು.
ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಮೋಹನ್ ಬಾಬು ಬಳಿಕ ಖಳನಟನಾಗಿ ಅಬ್ಬರಿಸಿದರು. ಬಳಿಕ ಹೀರೊ ಕೂಡ ಆಗಿ ಗೆದ್ದರು. ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿಯಿಂದ ಅವರು ಮೋಡಿ ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ಪೋಷಕ ಪಾತ್ರಗಳಲ್ಲಿ ಮೋಹನ್ ಬಾಬು ನಟಿಸುತ್ತಿದ್ದಾರೆ. ಸದ್ಯ ಮಗ ವಿಷ್ಣು ನಟನೆಯ 'ಕಣ್ಣಪ್ಪ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಟನಾಗಿ ಮಾತ್ರವಲ್ಲದೇ ಸಿನಿಮಾ ನಿರ್ಮಾಪಕರಾಗಿಯೂ ಮೋಹನ್ ಬಾಬು ಕೊಡುಗೆ ನೀಡಿದ್ದಾರೆ. ಮಕ್ಕಳಾದ ವಿಷ್ಣು, ಲಕ್ಷ್ಮಿ, ಮನೋಜ್ ಸಹ ತಂದೆ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದರು. ಆದರೆ ಅವರಿಗೆ ದೊಡ್ಡದಾಗಿ ಗೆಲುವು ಸಿಗಲಿಲ್ಲ. ವಿದ್ಯಾಸಂಸ್ಥೆ ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಕೂಡ ಮೋಹನ್ ಬಾಬು ಕೊಡುಗೆ ನೀಡಿದ್ದಾರೆ. 'ಕಣ್ಣಪ್ಪ' ಸಿನಿಮಾ ಪ್ರಚಾರದ ಭಾಗವಾಗಿ ತಮಿಳು ಸಂದರ್ಶನದಲ್ಲಿ ಮಂಚು ವಿಷ್ಣು ಮಾತನಾಡಿದ್ದಾರೆ. ಈ ವೇಳೆ ತಂದೆ ಬಯೋಪಿಕ್ ಮಾಡುವ ಪ್ರಶ್ನೆ ಎದುರಾಗಿದೆ.
ತಂದೆ ಅವರ ಬಯೋಪಿಕ್ ಮಾಡುವ ಆಸೆಯಿದೆ. ಆದರೆ ಯಾರು ನಟಿಸುತ್ತಾರೆ ಗೊತ್ತಿಲ್ಲ ಎಂದು ವಿಷ್ಣು ಹೇಳಿದ್ದಾರೆ. ನೀವೇ ನಟಿಸಿ, ಎಂದಾಗ ಇಲ್ಲ ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಒಂದು ವೇಳೆ ತಾವು ತಂದೆ ಬಯೋಪಿಕ್ ಸಿನಿಮಾ ನಿರ್ಮಿಸಿದರೆ ಸೂರ್ಯ ಹೀರೊ ಆಗಿ ತಂದೆ ಪಾತ್ರದಲ್ಲಿ ನಟಿಸಿದರೆ ಉತ್ತಮ ಎಂದು ತಿಳಿಸಿದ್ದಾರೆ. ಇನ್ನು ಸೂರ್ಯ ನಟಿಸಿದ 'ಕಂಗುವ' ಸಿನಿಮಾ ಸೋಲಿನ ಬಗ್ಗೆಯೂ ವಿಷ್ಣು ಮಾತನಾಡಿದ್ದಾರೆ.


Click it and Unblock the Notifications











