Kannappa Trailer: ವಾಯು ಲಿಂಗ ರಹಸ್ಯ, ದಿಣ್ಣನ ಆಣೆ; 'ಕಣ್ಣಪ್ಪ' ಟ್ರೈಲರ್ ಹೇಗಿದೆ?
ತೆಲುಗಿನ 'ಕಣ್ಣಪ್ಪ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. 'ಬೇಡರ ಕಣ್ಣಪ್ಪ' ಕಥೆಯನ್ನು ಈ ಚಿತ್ರದಲ್ಲಿ ಮತ್ತೊಮ್ಮೆ ಕಟ್ಟಿಕೊಡಲಾಗುತ್ತಿದೆ. ದೊಡ್ಡ ತಾರಾಗಣ, ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಟೀಸರ್, ಪೋಸ್ಟರ್ ನಿರಾಸೆ ಮೂಡಿಸಿದ್ದರೂ ಟ್ರೈಲರ್ ಗಮನ ಸೆಳೆದಿದೆ.
ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಚಿತ್ರದಲ್ಲಿ ಕಣ್ಣಪ್ಪನಾಗಿ ಮಂಚು ವಿಷ್ಣು ನಟಿಸಿದ್ದಾರೆ. ರುದ್ರ ಎಂಬ ಮತ್ತೊಂದು ಪಾತ್ರದಲ್ಲಿ ಪ್ರಭಾಸ್ ಅಬ್ಬರಿಸಿದ್ದಾರೆ. ಶಿವನಾಗಿ ಅಕ್ಷಯ್ ಕುಮಾರ್ ದರ್ಶನ ಕೊಟ್ಟಿದ್ದಾರೆ. ಇನ್ನು ದಿಗ್ಗಜ ನಟ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'ಕಣ್ಣಪ್ಪ' ಸಿನಿಮಾ ನಿರ್ಮಾಣವಾಗಿದೆ. ಜೂನ್ 27ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಕನ್ನಡಕ್ಕೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡದಲ್ಲಿ ಇದೇ ಕಥೆ 'ಬೇಡರ ಕಣ್ಣಪ್ಪ' ಹಾಗೂ 'ಶಿವಮೆಚ್ಚಿದ ಕಣ್ಣಪ್ಪ' ಸಿನಿಮಾಗಳಾಗಿ ಬಂದುಹೋಗಿತ್ತು. ಇದೇ ಕಥೆ 'ಕನ್ನಪ್ಪ' ಹೆಸರಿನಲ್ಲಿ ತೆಲುಗಿನಲ್ಲಿ ಸಿನಿಮಾ ಆಗಿತ್ತು. ಕೃಷ್ಣಂರಾಜು ಟೈಟಲ್ ರೋಲ್ ಪ್ಲೇ ಮಾಡಿದ್ದರು.
'ಕಣ್ಣಪ್ಪ'ನಾಗಿ ಪ್ರಭಾಸ್ ನಟಿಸಬೇಕು ಎನ್ನುವುದು ಕೃಷ್ಣರಾಜು ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಂಗ್ ರೆಬಲ್ ಸ್ಟಾರ್ ಒಪ್ಪಿದ್ದರು. ಸದ್ಯ ಬಿಡುಗಡೆ ಆಗಿರುವ ಟ್ರೈಲರ್ ಕಣ್ಣಪ್ಪನ ಪ್ರಪಂಚವನ್ನು ತೆರೆದಿಟ್ಟಿದೆ. ವಿಷ್ಯುವಲ್ಸ್, ಮೇಕಿಂಗ್, ಸಂಗೀತ ಎಲ್ಲವೂ ನೋಡುಗರ ಗಮನ ಸೆಳೆದಿದೆ. ಸಿನಿಮಾ ನೋಡಬೇಕು ಎನ್ನುವ ಕುತೂಹಲ ಮೂಡಿಸಿದೆ.
ಈ ಹಿಂದೆ ಬಂದಿದ್ದ 'ಕಣ್ಣಪ್ಪ' ಟೀಸರ್ ನೋಡಿ ಸಿನಿರಸಿಕರು ಬೇಸರಗೊಂಡಿದ್ದರು. ಪ್ರಭಾಸ್‌ಗೋಸ್ಕರ ನೋಡಿತ್ತೇವೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆದರೆ ಟ್ರೈಲರ್ ಬಗ್ಗೆ ಉತ್ತಮ ಮಾತುಗಳು ಕೇಳಿಬರ್ತಿದೆ. ಇನ್ನು ಬೇಡರ ದಿಣ್ಣ, ಭಕ್ತ ಕಣ್ಣಪ್ಪ ಆಗುವ ಕಥೆ ಎಲ್ಲರಿಗೂ ಗೊತ್ತು. ಆದರೆ 'ಕಣ್ಣಪ್ಪ' ಟ್ರೈಲರ್ ನೋಡಿದರೆ ಯಾವುದೋ ಆಕ್ಷನ್ ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಬೇಡರ ದಿಣ್ಣನ ಸಾಹಸಗಳನ್ನೇ ವಿಜೃಂಭಿಸಿ ತೋರಿಸಿರುವುದು ಗೊತ್ತಾಗುತ್ತಿದೆ.

ಮಂಚು ವಿಷ್ಣು ತಂದೆ ಮೋಹನ್ ಬಾಬು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಹದೇವ ಶಾಸ್ತ್ರಿ ಆಗಿ ಪವರ್‌ಫುಲ್ ಪಾತ್ರದಲ್ಲಿ ಕೂಡ ನಟಿಸಿದ್ದಾರೆ. ವಾಯು ಲಿಂಗದ ರಹಸ್ಯ ಎನ್ನುವ ಟಾಪಿಕ್ ಕುತೂಹಲ ಮೂಡಿಸುವಂತಿದೆ. ಶರತ್‌ಕುಮಾರ್, ಮಧೂ, ಬ್ರಹ್ಮಾನಂದಂ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಪಾರ್ವತಿಯಾಗಿ ಕಾಜಲ್ ಅಗರ್‌ವಾಲ್ ಮಿಂಚಿದ್ದಾರೆ. ಶಿವನ ಭಂಟ ರುದ್ರನಾಗಿ ಪ್ರಭಾಸ್ ಕಥೆಗೆ ತಿರುವು ಕೊಡುವಂತೆ ಕಾಣುತ್ತಿದೆ.
5 ಭಾಷೆಗಳಲ್ಲಿ 'ಕಣ್ಣಪ್ಪ' ಟ್ರೈಲರ್ ರಿಲೀಸ್ ಆಗಿದೆ. ಶೆಲ್ಡನ್ ಚೌ ಛಾಯಾಗ್ರಹಣ ಹಾಗೂ ಸ್ಟೀಫನ್ ದೇವಸ್ಸಿ ಸಂಗೀತ ಚಿತ್ರಕ್ಕಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಭಾರತದ ಬೇಡರ ಕಣ್ಣಪ್ಪನ ಕಥೆಯನ್ನು ನ್ಯೂಜಿಲೆಂಡ್ ಕಾಡಿನ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿರುವುದು, ಕಣ್ಣಪ್ಪ ಕುದುರೆ ಏರಿ ಅಬ್ಬರಿಸುವುದು ವಾಸ್ತವಕ್ಕೆ ಹತ್ತಿರವಾಗಿದೆ ಅನ್ನಿಸುವುದಿಲ್ಲ. ಆದರೂ ಟ್ರೈಲರ್ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.
ಟೀಸರ್ ನೋಡಿ ಸಿನಿಮಾ ನೋಡುವುದೋ ಬೇಡವೋ ಎನ್ನುವ ಗೊಂದಲದಲ್ಲಿ ಇದ್ದೆವು, ಟ್ರೈಲರ್ ನೋಡಿ ನಂಬಿಕೆ ಬಂತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ವಿಷ್ಣುಗೆ ಈ ಸಿನಿಮಾ ಬ್ರೇಕ್ ಕೊಡುತ್ತಾ ಕಾದು ನೋಡಬೇಕಿದೆ. ಮೋಹನ್ ಲಾಲ್, ಅಕ್ಷಯ್ ಕುಮಾರ್ ಹಾಗೂ ಪ್ರಭಾಸ್ ಅತಿಥಿ ಪಾತ್ರಗಳಲ್ಲಿ ನಟಿಸೋಕೆ ಯಾವುದೇ ಸಂಭಾವನೆ ಪಡೆದಿಲ್ಲ. ಈ ವಿಚಾರವನ್ನು ಸ್ವತಃ ವಿಷ್ಣು ರಿವೀಲ್ ಮಾಡಿದ್ದಾರೆ. ಕಿಚ್ಚ ಸುದೀಪ್ ಕೂಡ 'ಕಣ್ಣಪ್ಪ' ಟ್ರೈಲರ್ ಲಿಂಕ್ ಶೇರ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.


Click it and Unblock the Notifications











