ಸೆಲ್ಫಿ ತೆಗೆಸಿಕೊಳ್ಳಲು ಬಂದ ಯುವಕರ ಮೇಲೆ ಹಲ್ಲೆಗೆ ಮುಂದಾದ ಗಾಯಕಿ ಮಂಗ್ಲಿ!
ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ಆವೃತ್ತಿಯ 'ಕಣ್ಣೇ ಅಧಿರಿಂದಿ' ಹಾಡು ಹಾಡಿ ರಾತ್ರೋರಾತ್ರಿ ಖ್ಯಾತಿಯ ಉತ್ತಂಗಕ್ಕೇರಿದ ಗಾಯಕಿ ಮಂಗ್ಲಿ ಇದೀಗ ತೆಲುಗು ಚಿತ್ರರಂಗದ ಪ್ರಮುಖ ಗಾಯಕಿ.
'ಕಣ್ಣೇ ಅಧಿರಿಂದಿ' ಹಾಡಿನ ಮೂಲಕ ತೆಲುಗು ರಾಜ್ಯಗಳಲ್ಲಿ ಮಾತ್ರವೇ ಅಲ್ಲದೆ ಕರ್ನಾಕದಲ್ಲಿಯೂ ದೊಡ್ಡ ಮಟ್ಟದ ಅಭಿಮಾನಿಗಳನ್ನು ಮಂಗ್ಲಿ ಸಂಪಾದಿಸಿದ್ದಾರೆ. 'ರಾಬರ್ಟ್' ಹಾಡಿನ ಬಳಿಕ ಹಲವು ಕನ್ನಡ ಹಾಡುಗಳಿಗೆ ಮಂಗ್ಲಿ ದನಿಯಾಗಿದ್ದಾರೆ.
ಮಂಗ್ಲಿ ಇದೀಗ ತೆಲುಗು ಚಿತ್ರರಂಗದ ಹಾಟ್ ಸೆಲೆಬ್ರಿಟಿಯಂತಾಗಿದ್ದು, ಎಲ್ಲಿ ಹೋದರು ಅಭಿಮಾನಿಗಳು ಮಂಗ್ಲಿಯನ್ನು ಮುತ್ತಿಕೊಳ್ಳುತ್ತಿದ್ದಾರೆ. ಆದರೆ ಇದು ಮಂಗ್ಲಿಗೆ ಪಾಪ ಇಷ್ಟವಾಗುತ್ತಿದ್ದಂತಿಲ್ಲ.

ಇತ್ತೀಚೆಗೆ ಮಂಗ್ಲಿ ವಿವಾಹ ಕಾರ್ಯಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಿದ್ದರು ಅಲ್ಲಿಯೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು ಕೆಟ್ಟದಾಗಿ ವರ್ತಿಸಿದ್ದಾರೆ. ಇದರಿಂದ ಸಿಟ್ಟೇರಿಸಿಕೊಂಡ ಮಂಗ್ಲಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಒಬ್ಬ ಯುವಕನನ್ನು ಹೊಡೆಯಲು ಸಹ ಹೋಗಿದ್ದಾರೆ ಮಂಗ್ಲಿಯ ಈ ವಿಶ್ವರೂಪ ವಿಡಿಯೋದಲ್ಲಿ ಸೆರೆಯಾಗಿದೆ.
ಆಂಧ್ರದ ಪ್ರಕಾಶಂ ಜಿಲ್ಲೆಯ ಎರ್ರಗೊಂಡಪಾಲೆಂನಲ್ಲಿ ಸಚಿವ ಆದಿಮೂಲಂ ಸುರೇಶ್ ಪುತ್ರನ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ವಿವಾಹ ಸಮಾರಂಭದಲ್ಲಿ ನಟಿ ಮಂಗ್ಲಿ ಸಹ ಭಾಗವಹಿಸಿದ್ದರು. ಈ ಸಮಯ ಕೆಲವರು ಯುವಕರು ಮಂಗ್ಲಿಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಹೋಗಿದ್ದಾರೆ. ಯುವಕರು ಸೆಲ್ಫಿಗಾಗಿ ಮುಗಿಬಿದ್ದ ಕಾರಣ ತಾಳ್ಮೆ ಕಳೆದುಕೊಂಡ ಮಂಗ್ಲಿ ಯುವಕರನ್ನು ಬೈದಿದ್ದಾರೆ, ಅವರ ಸಹಾಯಕರಿಗೆ ಹೇಳಿ ಅವರ ಮೊಬೈಲ್‌ಗಳನ್ನು ಒಡೆದು ಹಾಕಿ ಎಂದು ಅಬ್ಬರಿಸಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿಯೇ ನಿಂತಿದ್ದ ಸ್ಥಳೀಯ ಯುವಕನೊಬ್ಬನನ್ನು ಹೊಡೆಯಲು ಹೋಗಿದ್ದಾರೆ. ಆ ಯುವಕ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಘಟನೆಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.
ಮಂಗ್ಲಿಯ ಹಾಡುಗಳು ಆಗಾಗ್ಗೆ ವಿವಾದಕ್ಕೆ ಕಾರಣವಾಗುತ್ತಿರುತ್ತವೆ. ಆದರೆ ಈಗ ಮಂಗ್ಲಿಯ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಮಂಗ್ಲಿ ಹಾಡಿದ್ದ 'ಬೋನಾಲ ಪಾಟ' ವಿವಾದಕ್ಕೆ ಕಾರಣವಾಗಿತ್ತು. ಹಾಡಿನಲ್ಲಿ ನಿಂದಾ ಸ್ತುತಿಯನ್ನು ಬಳಸಲಾಗಿತ್ತು, ಆದರೆ ಇದು ಕೆಲವು ಭಕ್ತಾಧಿಗಳಿಗೆ ಹಿಡಿಸಲಿಲ್ಲ. ದೇವರನ್ನು ಪ್ರಶ್ನೆ ಮಾಡುವಷ್ಟು ಬೆಳೆದುಬಿಟ್ಟಳೇ ಮಂಗ್ಲಿ ಎಂದು ಆಕ್ಷೇಪಣೆ ಎತ್ತಿದ್ದರು. ಬಿಜೆಪಿ ಮುಖಂಡರೊಬ್ಬರು ಮಂಗ್ಲಿ ದೇವರಿಗೆ ನಿಂದನೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿಬಿಟ್ಟಿದ್ದರು.
ಮಂಗ್ಲಿ ಇದೀಗ ಹಲವು ಕನ್ನಡ ಹಾಡುಗಳನ್ನು ಹಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ತೆಲುಗು ಸಿನಿಮಾ 'ಪುಷ್ಪ'ದ ಕನ್ನಡ ಆವೃತ್ತಿಯ ಒಂದು ಹಾಡನ್ನು ಹಾಡಿದ್ದಾರೆ. ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದ ಹಾಡೊಂದನ್ನು ಹಾಡಿದ್ದಾರೆ. ಆ ಹಾಡು ಈಗಾಗಲೇ ಹಿಟ್ ಆಗಿದೆ. ಇನ್ನಷ್ಟು ಕನ್ನಡದ ಹಾಡುಗಳನ್ನು ಮಂಗ್ಲಿ ಹಾಡಲಿದ್ದಾರೆ.


Click it and Unblock the Notifications











